ನವೆಂಬರ್ 8, 2016ರಲ್ಲಿ 500 ರೂ. ಮತ್ತು 1000 ರೂ. ನೋಟುಗಳನ್ನು ಬ್ಯಾನ್ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಆ ನಂತರ ಭಾರತದಲ್ಲಿ ಯಾವುದೇ ನೋಟುಗಳು ಬ್ಯಾನ್ ಆಗಿರಲಿಲ್ಲ. ಆದ್ರೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ರೂ, ನೋಟ್ ಬ್ಯಾನ್ ಆಗಿದೆ ಎಂದು ಹಲವು ವದಂತಿಗಳು ವೈರಲ್ ಆಗಿದೆ. ಅದೇ ರೀತಿ ಇದೀಗ ಹೊಸ 500 ರೂ. ನೋಟಿನ ರದ್ಧತಿ (500 rs Note Ban) ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ.

ಮಾರ್ಚ್ 2026 ರೊಳಗೆ ₹500 ನೋಟುಗಳ ಮುದ್ರಣ, ಚಲಾವಣೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ವೈರಲ್ ಆಗುತ್ತಿದೆ. ಆದ್ರೆ ಇದೀಗ ಸಾಮಾಜಿಕ ಮಾಧ್ಯಮದ ವರದಿಗಳು ಸುಳ್ಳು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಸತ್ಯಾಂಶ ಪರಿಶೀಲನಾ ವರದಿಯನ್ನು ಹೊರಡಿಸಿದೆ.
ಫ್ಯಾಕ್ಟ್‌ಚೆಕ್ ಹೇಳಿದ್ದೇನು?
₹500 ನೋಟುಗಳ ಚಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಗಿತಗೊಳಿಸಲಿದೆ ಎಂಬ ಊಹಾಪೋಹಗಳ ಬಗ್ಗೆ ಪರಿಶೀಲನೆ ನಡೆಸಿ, ಆ ಸುದ್ದಿಗಳು ಸಂಪೂರ್ಣ 'ಸುಳ್ಳು' ಎಂದು PIB ಸ್ಪಷ್ಟನೆ ನೀಡಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ, "ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ₹500 ನೋಟುಗಳ ಚಲಾವಣೆಯನ್ನು ಮಾರ್ಚ್ 2026 ರೊಳಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಲ್ಲಿಸಲಿದೆ ಎಂದು ಹೇಳಿಕೊಂಡಿವೆ. ಆ ಪ್ರಕಾರ, PIB FactCheck: ಈ ಹೇಳಿಕೆ ಸುಳ್ಳು! RBI ಅಂತಹ ಯಾವುದೇ ಘೋಷಣೆ ಮಾಡಿಲ್ಲ." ಎಂದು ಹೇಳಿದೆ.
500 ನೋಟು ಬ್ಯಾನ್ ಆಗುವುದಿಲ್ಲ!
₹500 ನೋಟುಗಳು ಸದ್ಯ ಮಾನ್ಯವಾಗಿದೆ ಮತ್ತು ಎಲ್ಲಾ ವಹಿವಾಟುಗಳಿಗೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಯಾವುದೇ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ, ದಾರಿತಪ್ಪದಂತೆ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು PIB ಸೂಚನೆ ನೀಡಿದೆ. "₹500 ನೋಟುಗಳನ್ನು ಅಮಾನ್ಯಗೊಳಿಸಲಾಗಿಲ್ಲ ಮತ್ತು ಅವು ಕಾನೂನುಬದ್ಧ ಟೆಂಡರ್ ಆಗಿ ಉಳಿದಿವೆ. ಯಾವುದೇ ಸುದ್ದಿಯನ್ನು ನಂಬುವ ಅಥವಾ ಶೇರ್ ಮಾಡಿಕೊಳ್ಳುವ ಮೊದಲು ಯಾವಾಗಲೂ ಅಧಿಕೃತ ಮೂಲಗಳಿಂದ ಪರಿಶೀಲಿಸಿ!" ಎಂದು ಸಲಹೆ ನೀಡಿದೆ
ಈ ಹಿಂದೆಯೂ ಹರಿದಾಡಿತ್ತು ವದಂತಿ
₹500 ನೋಟುಗಳ ಅಮಾನ್ಯೀಕರಣದ ವದಂತಿಗಳು ಇದೇ ಮೊದಲಲ್ಲ. ಈ ಹಿಂದೆಯೂ 500 ರೂ. ನೋಟುಗಳು ಅಮಾನ್ಯವಾಗಿದೆ ಎಂಬ ಊಹಾಪೋಹಗಳು ಹಿಂದೆಯೂ ಹಲವು ಬಾರಿ ಹರಿದಾಡಿತ್ತು. ಆದರೆ ಸತ್ಯ ಪರಿಶೀಲನೆ ನಡೆಸಿದ ಸರ್ಕಾರ ಹಲವು ಬಾರಿ ಇದನ್ನು ನಿರಾಕರಿಸಿದೆ.
ಇನ್ನು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ, ₹500 ಮುಖಬೆಲೆಯ ನೋಟುಗಳ ಚಲಾವಣೆ ನಿಲ್ಲಿಸುವ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.


Click it and Unblock the Notifications