ನವದೆಹಲಿ, ಮಾರ್ಚ್ 6: ಉದ್ಯಮಿಯಾಗಿ ಬೆಳೆದು ನಿಂತ ವ್ಯಕ್ತಿಯನ್ನು ದೂರದಿಂದ ನೋಡುವಾಗ ಆತ ಹೂವಿನ ಹಾದಿ ನಡೆದಂತೆ , ಎಲ್ಲವೂ ಸಲೀಸಾಗಿ ಒಲಿದುಬಂದಂತೆ ಇತರರಿಗೆ ಕಾಣಿಸುವುದು ಸಾಮಾನ್ಯ. ಆದರೆ ಹತ್ತಿರದಿಂದ ಗಮನಿಸಿದಂತೆ ಆತ ಎದುರಿಸಿದ ಕಷ್ಟ, ಪಟ್ಟಶ್ರಮ, ವೈಫಲ್ಯಗಳು ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
ಇಂದು 99,484 ಕೋಟಿ ರೂ. ಮೌಲ್ಯದ ಗಣಿಗಾರಿಕೆ ಮತ್ತು ಲೋಹಗಳ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ, ಸ್ಕ್ರ್ಯಾಪ್ ಮೆಟಲ್ ವ್ಯವಹಾರವನ್ನು ಸ್ಥಾಪಿಸಿದ ವೇದಾಂತ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರ ಜೀವನ ಪಯಣವೂ ಇದೇ ರೀತಿಯಾಗಿದೆ.

ವೇದಾಂತದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿ ಬೃಹತ್ ಉದ್ಯಮ ಸಾಮ್ರಾಜ್ಯ ಕಟ್ಟಿದ ಅನಿಲ್ ಅಗರ್ವಾಲ್ ಲೋಕೋಪಕಾರಿಯಾಗಿದ್ದು, ಅವರು ತಮ್ಮ ಸಂಪತ್ತಿನ 75% ವನ್ನು ದತ್ತಿ ಕಾರ್ಯಗಳಿಗೆ ದಾನ ಮಾಡುವುದಾಗಿ ಭರವಸೆ ನೀಡಿದ್ದಾರೆ. ವೈಫಲ್ಯಗಳನ್ನು ಮೆಟ್ಟಿ ನಿಂತು ಛಲ ಬಿಡದೇ ಗೆಲುವು ಕಂಡ ಅಗರ್ವಾಲ್ 1976 ರಲ್ಲಿ ತಮ್ಮ ತಂದೆಯ ಅಲ್ಯೂಮಿನಿಯಂ ಕಂಡಕ್ಟರ್ ಉತ್ಪಾದನಾ ವ್ಯವಹಾರವನ್ನು ತೊರೆದು ತಾಮ್ರ, ಸತು, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಅದಿರುಗಳಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸುವ ಮೊದಲು ಅನಿಲ್ ಮುಂಬೈನಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿ ವ್ಯವಹಾರ ಪ್ರಾರಂಭಿಸಿದರು.
ಅನಿಲ್ ಅಗರ್ವಾಲ್ ಅವರೊಂದಿಗೆ ಕಳೆದ ವರ್ಷ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಸಂವಾದದಲ್ಲಿ, ಅವರ ಜೀವನ ಪಯಣದ ಕಥೆಯನ್ನು ಹೇಳಿಕೊಂಡಿದ್ದಾರೆ. ಅವರು ತಮ್ಮ ಗುರಿಗಳನ್ನು ಸಾಧಿಸಲು ಹಲವಾರು ಸಮಸ್ಯೆ- ಸವಾಲುಗಳನ್ನು ಹೇಗೆ ನಿವಾರಿಸಿ ಮುಂದೆ ಸಾಗಿದರು ಎಂಬುವುದನ್ನು ಈ ವೇಳೆ ವಿವರಿಸಿದ್ದಾರೆ.
ಅನಿಲ್ ಪಾಟ್ನಾ ಮಾರ್ವಾಡಿ ಕುಟುಂಬದಲ್ಲಿ ಬೆಳೆದಿದ್ದು, ತಮ್ಮ 19 ವಯಸ್ಸಿನಲ್ಲಿ ತಂದೆಯ ವ್ಯವಹಾರವನ್ನು ವಿಸ್ತರಿಸಲು ನಿರ್ಧರಿಸಿ ಜೊತೆಗೆ ವೃತ್ತಿ ಅವಕಾಶಗಳನ್ನು ಹುಡುಕಲು ಮುಂಬೈಗೆ ಪ್ರಯಾಣಿಸಿದರು. ಇದಕ್ಕೂ ಮೊದಲು ಹದಿನೈದನೆಯ ವಯಸ್ಸಿನಲ್ಲಿ, ಅವರು ತಮ್ಮ ತಂದೆಗೆ ಕೆಲಸಕ್ಕೆ ಸಹಾಯ ಮಾಡಲು ತಾವು ಓದುತ್ತಿದ್ದ ಮಿಲ್ಲರ್ ಹೈಸ್ಕೂಲ್ ಅನ್ನು ತೊರೆದಿದ್ದರು.
ಇದು ಬೃಹತ್ ಗಣಿ ಉದ್ಯಮಿಯಾಗಿರುವ ಅನಿಲ್ ಅವರು, 1970 ರಲ್ಲಿ, ಅಂದರೆ ತಾವು ಹದಿಹರೆಯದವರಾಗಿದ್ದಾಗ ಸ್ಕ್ರ್ಯಾಪ್ ಡೀಲರ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ಕೇಂಬ್ರಿಡ್ಜ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, "ನಾನು ನನ್ನ 20 ಮತ್ತು 30 ರ ವಯಸ್ಸಿನಲ್ಲಿ ಇತರರ ಉದ್ಯಮಗಳನ್ನು ನೋಡುತ್ತಾ ಮತ್ತು ನಾನು ಯಾವಾಗ ಆ ಹಂತಕ್ಕೆ ತಲುಪುತ್ತೇನೆ ಎಂದು ಯೋಚಿಸುತ್ತಿದ್ದೆ. ಮುಖ್ಯವಾಗಿ 9 ವಿಫಲ ವ್ಯವಹಾರಗಳು ಮತ್ತು ವರ್ಷಗಳ ಖಿನ್ನತೆಯ ನಂತರವಷ್ಟೇ ನನ್ನ ಮೊದಲ ಯಶಸ್ವಿನ ಪ್ರಾರಂಭವಾಯಿತು" ಎಂದು ಹೇಳಿದ್ದಾರೆ.
ಇಂದು ಅವರ ನಿವ್ವಳ ಮೌಲ್ಯ 16,700 ಕೋಟಿ ರೂ. ಆಗಿದ್ದು, ಅವರ ಕಂಪನಿ ವೇದಾಂತ 99,484 ಕೋಟಿ ರೂ ಮೌಲ್ಯವನ್ನು ಹೊಂದಿದೆ. ಅವರು 2003 ರಲ್ಲಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ವ್ಯವಹಾರವನ್ನು ಪಟ್ಟಿ ಮಾಡಿದ ಮೊದಲ ಭಾರತೀಯರಾಗಿದ್ದರು. ಹಲವು ವೈಫಲ್ಯಗಳನ್ನು ಎದುರಿಸಿರುವ ಅವರು,ಇಂದು ವ್ಯಾಪಾರ ಸಾಮ್ರಾಜ್ಯದೊಂದಿಗೆ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದುನಿಂತಿದ್ದಾರೆ.


Click it and Unblock the Notifications