ಕೃಷಿಯಲ್ಲಿ ಲಾಭವಿಲ್ಲ ಎಂಬ ನಂಬಿಕೆ ಇನ್ನೂ ಜೀವಂತವಾಗಿದೆ. ಹೆಚ್ಚು ಭೂಮಿ, ಭಾರಿ ಬಂಡವಾಳವಿಲ್ಲದೆ ಲಾಭ ಮಾಡೋದು ಸಾಧ್ಯವಿಲ್ಲ ಎಂದು ಹಲವರು ನಂಬುತ್ತಾರೆ. ಆದರೆ ಬೆಂಗಳೂರು ಗ್ರಾಮಾಂತರದ ಲಿಂಗದೀರನಹಳ್ಳಿ ಗ್ರಾಮದ ಶ್ರೀಮೂರ್ತಿ, ಅದನ್ನು ಸುಳ್ಳು ಮಾಡಿದ್ದಾರೆ. ಕೃಷಿಯಲ್ಲಿ ಅಪಾರ ಲಾಭ ಮಾಡಬಹುದಾ ಎಂಬ ಪ್ರಶ್ನೆಗೆ ತಾವೇ ಉತ್ತರವಾಗಿದ್ದಾರೆ. ಕೇವಲ ಒಂದು ಎಕರೆಯಲ್ಲಿ ಪ್ರತಿ ತಿಂಗಳು ಲಕ್ಷ ಲಕ್ಷ ಲಾಭ ನೋಡಬಹುದು ಅನ್ನೋದನ್ನ ಸಾಬೀತು ಮಾಡಿದ್ದಾರೆ.

17 ಎಕರೆ ಜಾಗ 300ಕ್ಕೂ ಹೆಚ್ಚು ಬೆಳೆ:
ಸಮಗ್ರ ಕೃಷಿಯಲ್ಲಿ ಲಾಭವೂ ಸಾಧ್ಯ, ಬೆಳವಣಿಗೆಯೂ ಸಾಧ್ಯ ಎನ್ನುವುದು ಇವರ ನಂಬಿಕೆ. ಅಷ್ಟೇ ಅಲ್ಲ, ಅದನ್ನ ಪ್ರಾಯೋಗಿಕವಾಗಿಯೂ ಸಾಬೀತು ಮಾಡಿಕೊಂಡಿದ್ದಾರೆ. 17 ಎಕರೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಬೆಳೆ ಬೆಳೆದಿರುವ ಇವರು, ಇಂದು ಸಕ್ಸಸ್‌ಫುಲ್ ಕೃಷಿಕ ಎನ್ನಲೂಬಹುದು. ಕೃಷಿಯನ್ನೇ ಉದ್ಯಮವನ್ನಾಗಿ ಪರಿವರ್ತಿಸಿರುವ ಬ್ಯುಸಿನೆಸ್ ಮ್ಯಾನ್ ಅಂತಲೂ ಕರೆಯಬಹುದು. ಇವರು ಹೇಳುವ ಪ್ರಕಾರ ಸಮಗ್ರ ಕೃಷಿ ಮಾಡಿದರೆ, ಒಂದು ಬೆಳೆಯಿಂದ ನಷ್ಟವಾದ್ರೂ ಆ ನಷ್ಟವನ್ನು ಮತ್ತೊಂದು ಬೆಳೆ ತುಂಬುತ್ತದೆ ಎನ್ನುವುದಾಗಿದೆ.
15ಕ್ಕೂ ಹೆಚ್ಚು ಹಣ್ಣುಗಳ ಬೆಳೆ:
"ಹಣ್ಣುಗಳ ಕಾಡು" ಎಂದೇ ಪ್ರಸಿದ್ಧವಾದ ಈ ತೋಟದಲ್ಲಿ 15ಕ್ಕೂ ಹೆಚ್ಚು ವಿಧಗಳ ಹಣ್ಣುಗಳನ್ನ ಬೆಳೆಯಲಾಗಿದೆ. ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಬೆಳೆಯುವಂತಹ ಹಣ್ಣುಗಳು ಇವರ ತೋಟದಲ್ಲಿದೆ. ಸೀತಾಫಲ, ಬಾಳೆಹಣ್ಣು, ಮಾವು, ಅವಕಾಡೋ, ಸಪೋಟ, ಡ್ರ್ಯಾಗನ್ ಫ್ರೂಟ್, ಅಭಿಯು, ಮ್ಯಾಂಗೋಸ್ಟೀನ್ ಮುಂತಾದ ಹಣ್ಣುಗಳ ಮರಗಳು ಇಲ್ಲಿ ನೋಟಕ್ಕೇ ಹಬ್ಬವಾಗಿವೆ. ಒಂದು ತೋಟಕ್ಕೆ ಕಾಲಿಟ್ಟರೆ, ಹಣ್ಣುಗಳ ಜಗತ್ತಿನ ಪ್ರವೇಶದ ಅನುಭವ ನೀಡುತ್ತದೆ.
ಲಾಭದ ದೃಷ್ಟಿಕೋನ ಹೀಗಿದೆ:
ಶ್ರೀಮೂರ್ತಿ ಅವರ ಅನುಭವವಂತೂ ಅಸಾಧ್ಯವನ್ನೂ ಸಾಧ್ಯ ಎಂಬುದನ್ನು ಸಾಬೀತು ಮಾಡಿದೆ.. ತಾವು ಬೆಳೆಸುವ ಪ್ರತಿ ಬೆಳೆಗೂ ಲಾಭದ ಲೆಕ್ಕ ಹಾಕಿರುವ ಅವರು, ಏನು, ಎಷ್ಟು ಲಾಭ ಕೊಡಬಹುದು ಎಂಬುದರ ಕುರಿತು ಸ್ಪಷ್ಟ ದೃಷ್ಟಿಕೋಣ ಹೊಂದಿದ್ದಾರೆ.
ಅಡಿಕೆ: ಒಂದು ಗಿಡದಿಂದ ಸರಾಸರಿ 1,200 ರೂನಷ್ಟು ಲಾಭ ದೊರಕುತ್ತದೆ.
ಮೆಣಸು: 1.5 ಕಿಲೋಗ್ರಾಮ್ ಮೆಣಸಿನಿಂದ 700 ರಿಂದ 1,500 ರೂ.ವರೆಗೆ ಲಾಭ ಸಿಗಬಹುದು.
ಏಲಕ್ಕಿ: ಪ್ರತಿ ಕೆಜಿಗೆ 2,000 ರೂನಷ್ಟು ಮಾರುಕಟ್ಟೆ ಬೆಲೆಯ ಲಾಭ ದೊರೆಯುತ್ತದೆ.
ಕೋಕೋ: 2.5 ಕೆಜಿಯಿಂದ 800 ರಿಂದ 1,000 ರೂ.ವರೆಗೆ ಲಾಭ ಸಿಗುತ್ತದೆ.
ಲಕ್ಷಗಟ್ಟಲೆ ಆದಾಯದ ಲೆಕ್ಕಾಚಾರ:
ಅಡಿಕೆ ಬೆಳೆ:
ಒಂದು ಎಕರೆಯಲ್ಲಿ ಅಂದಾಜು 500 ಗಿಡಗಳನ್ನು ನೆಡಬಹುದು ಎಂದಾದರೆ, ಪ್ರತಿ ಗಿಡವು ವರ್ಷಕ್ಕೆ ₹1,200 ರಷ್ಟು ಲಾಭ ನೀಡಿದರೆ, ಒಂದು ಎಕರೆಯಿಂದ ವರ್ಷಕ್ಕೆ ₹6 ಲಕ್ಷ ಆದಾಯ ಸಾಧ್ಯ. ಇದನ್ನು ತಿಂಗಳಿಗೆ ಹಂಚಿದರೆ ಕೇವಲ ಅಡಿಕೆ ಗಿಡದಿಂದಲೇ ₹50,000 ರಷ್ಟು ಲಾಭವಿದೆ. ಅಡಿಕೆಗೆ ಸದೃಢ ಮಾರುಕಟ್ಟೆ ಇರುವ ಕಾರಣ, ನಿಲ್ಲದ ಆದಾಯದ ಮೂಲವಾಗಿದೆ.
ಮೆಣಸು ಬೆಳೆ:
ಅಡಿಕೆ ಅಥವಾ ಇತರೆ ಮರಗಳಿಗೆ ಇಂಟರ್‌ಕ್ರಾಪ್ ಆಗಿ ಬೆಳೆದ ಮೆಣಸು, ತ್ವರಿತ ಲಾಭದ ಬೆಳೆಯಾಗಬಹುದು. ಒಂದು ಎಕರೆಯಲ್ಲಿ ಸುಮಾರು 150 ಕೆಜಿಯಷ್ಟು ಮೆಣಸು ಉತ್ಪತ್ತಿಯಾಗಬಹುದು. ಇದನ್ನು ಪ್ರತಿ 1.5 ಕೆಜಿಗೆ ₹1,000 ಲಾಭ ಎಂದು ಲೆಕ್ಕಿಸಿದರೆ, ತಿಂಗಳಿಗೆ ₹8,000-₹10,000 ವರೆಗೆ ಲಾಭ ಸಿಗುತ್ತದೆ. ಮಾರುಕಟ್ಟೆ ಬೆಲೆ ಹೆಚ್ಚು ಇರುವ ಸಮಯದಲ್ಲಿ ಇದರ ಲಾಭ ಮತ್ತಷ್ಟು ಹೆಚ್ಚಾಗಬಹುದು.
ಏಲಕ್ಕಿ:
ಹವಾಮಾನ ಮತ್ತು ಮಣ್ಣಿನ ಗುಣಮಟ್ಟಕ್ಕೆ ಹೊಂದಿಕೆಯಾಗುವ ಪ್ರದೇಶಗಳಲ್ಲಿ, ಏಲಕ್ಕಿ ಉತ್ತಮವಾಗಿ ಬೆಳೆಯುತ್ತದೆ. ಒಂದು ಎಕರೆಯಲ್ಲಿ ಸರಾಸರಿ 300 ಕೆಜಿಯಷ್ಟು ಏಲಕ್ಕಿ ಉತ್ಪಾದನೆ ಸಾಧ್ಯ ಎಂದುಕೊಳ್ಳೋಣ. ಪ್ರತಿ ಕೆಜಿಗೂ ₹2,000 ಬೆಲೆ ಸಿಕ್ಕರೆ, ವರ್ಷಕ್ಕೆ ₹6 ಲಕ್ಷ, ತಿಂಗಳಿಗೆ ₹50,000 ರಷ್ಟು ಲಾಭ ಕಂಡುಬರುತ್ತದೆ. ಇದು ವಿಶಿಷ್ಟ ಮತ್ತು ಹೆಚ್ಚು ಬೇಡಿಕೆಯಿರುವ ಬೆಳೆ.
ಕೋಕೋ:
ಚಾಕೊಲೇಟ್ ಉದ್ಯಮದ ಮೂಲವಾದ ಕೋಕೋಗೆ ಸದಾ ಬೇಡಿಕೆ ಇದೆ. ಒಂದು ಎಕರೆಯಲ್ಲಿ 500 ಕೋಕೋ ಗಿಡಗಳನ್ನು ನೆಡಬಹುದು. ಪ್ರತಿ ಗಿಡವೂ 2.5 ಕೆಜಿ ಕೊಟ್ಟರೆ, ಒಟ್ಟು 1,250 ಕೆಜಿ ಉತ್ಪತ್ತಿ. ಇದರಿಂದ ತಿಂಗಳಿಗೆ ₹35,000 ರಿಂದ ₹40,000 ವರೆಗೆ ಲಾಭ ಸಾಧ್ಯವಾಗುತ್ತದೆ. ಇದು ಬೆಳೆ ವೈವಿಧ್ಯತೆಗೆ ಉತ್ತೇಜನ ನೀಡುವ ಉಪಾಯವಾಗಿದೆ.
ಆಗ್ರೋ ಟೂರಿಸಂನತ್ತ ಒಲವು:
ಕೃಷಿಯ ಮತ್ತೊಂದು ಭಾಗವಾಗಿ, ಶ್ರೀಮೂರ್ತಿ ಅವರು ಆಗ್ರೋ ಟೂರಿಸಂ ಸ್ಥಾಪಿಸುವ ಉದ್ದೇಶವನ್ನೂ ಹೊಂದಿದ್ದಾರೆ. ಈಗಾಗಲೇ ತಮ್ಮ ಜಾಗದಲ್ಲಿ ಮೇಕೆ ಸಾಗಾಣಿಕೆ, ಗೋಶಾಲೆ, ಜೇನು ಕೃಷಿ, ಮೀನು ಕೃಷಿಯನ್ನು ನಡೆಸಿಕೊಂಡು ಹೋಗುತ್ತಿರುವ ಇವರಿಗೆ ಆಗ್ರೋ ಟೂರಿಸಂನತ್ತ ಒಲವು ಹೆಚ್ಚಿರುವುದರ ಹಿಂದೆಯೂ ಒಂದು ಉದ್ದೇಶವಿದೆ. ಅದೇನೆಂದರೆ ಜನರೇ ಕೂಡಿರದ ಪ್ರದೇಶಗಳಲ್ಲಿ ಮರಗಳ್ಳತನದ ಹಾವಳಿ ಹೆಚ್ಚಾಗಿದೆ. ಆಗ್ರೋ ಟೂರಿಸಂ ಮಾಡಿದರೆ ಮರಗಳ್ಳತನಕ್ಕೆ ಕಡಿವಾಣ ಬೀಳುತ್ತದೆ. ಅಂದರೆ ಆಗ್ರೋ ಟೂರಿಸಂ ತೆರೆದರೆ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಹೆಚ್ಚು ಜನ ಭೇಟಿ ನೀಡುತ್ತಾರೆ. ಅವರಿಗೆ ಸಮಗ್ರ ಕೃಷಿಯ ಬಗ್ಗೆ ಮಾಹಿತಿಯೂ ನೀಡುವಂತಾಗುತ್ತದೆ ಎಂಬುದು ಇವರ ಆಶಯ.
ಅಪ್ಲಿಕೇಶನ್ ಬಿಡುಗಡೆ 3 ಲಕ್ಷ ಗಿಡಗಳ ಬೆಳೆಸುವ ಚಿಂತನೆ:
ಇವರ ಕೃಷಿಯ ಭಾಗವಾಗಿ ಇನ್ನೂ ಒಂದು ಆಸಕ್ತಿ ಇದೆ. ಅದೇನೆಂದರೆ ಒಂದು ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿ, ಮೂರು ಲಕ್ಷ ಮರಗಳನ್ನು ನೆಡಿಸುವ ಗುರಿ ಹೊಂದಿದ್ದಾರೆ. ಗ್ರಾಮೀಣ ಪ್ರದೇಶಗಳ ಗ್ರಾಮದ ಮುಖ್ಯಸ್ಥರು, ಶಿಕ್ಷಕರು ಸೇರಿ ಇತರೆ ಪ್ರಮುಖ ವರ್ಗದವರು ಗಿಡ ನೆಡುವುದು, ಅಥವಾ ಮಕ್ಕಳ ಕೈಯಲ್ಲಿ ಗಿಡ ನೆಡಿಸಿ ಅಪ್ಲಿಕೇಷನ್‌ನಲ್ಲಿ ಅಪ್‌ಡೇಟ್ ಮಾಡುವಂತಹ ಕಾರ್ಯ ಆರಂಭಿಸುವ ಕನಸು ಕಂಡಿದ್ದಾರೆ.
ಶ್ರೀಮೂರ್ತಿ ಅವರ ಕೃಷಿಯ ಮಾದರಿ ಸ್ಪಷ್ಟ ಸಂದೇಶ ನೀಡುತ್ತದೆ ಸಮಗ್ರ ದೃಷ್ಟಿಕೋಣ, ಬೆಳೆಗೆತ್ತದ ದಿಟ್ಟ ಹೆಜ್ಜೆ, ಹಾಗೂ ಮಾರುಕಟ್ಟೆ ಅರಿವು ಇದ್ದರೆ ಕೃಷಿಯಲ್ಲೂ ಲಕ್ಷಾಧೀಶನಾಗಬಹುದು.


Click it and Unblock the Notifications