ಬೆಂಗಳೂರು, ಏಪ್ರಿಲ್ 13: ಐಫೋನ್ ಬಗ್ಗೆ ಇಡೀ ಜಗತ್ತಿನಲ್ಲಿ ಒಂದು ನಂಬಿಕೆ ಇತ್ತು. ಐಫೋನ್ ಬಳಕೆ ಮಾಡುವುದು ಸುರಕ್ಷತೆ ದೃಷ್ಟಿಯಿಂದ ಕೂಡ ಉತ್ತಮ ಎಂಬ ಅಭಿಪ್ರಾಯ ಇತ್ತು. ಆದರೆ ಈಗ ಕಾಲವೂ ಬದಲಾಗಿದೆ & ಐಫೋನ್ ಕೂಡ ಬದಲಾಗಿ ಹೋಗಿದೆ. ಏಕೆಂದರೆ ಐಫೋನ್ ಸಂಸ್ಥೆ ಆಪಲ್ ಕೂಡ ಹ್ಯಾಕರ್ಸ್ ಹಾಗೂ ಅಪ್ಲಿಕೇಷನ್‌ಗಳ ದಾಳಿಯಿಂದ ಬೆಚ್ಚಿಬಿದ್ದಿದೆ. ಈ ಮೂಲಕ ಐಫೋನ್ ಸಂಸ್ಥೆ ತನ್ನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದೆ.
ಐಫೋನ್ ಮಾತೃ ಸಂಸ್ಥೆ ಆದ ಆ್ಯಪಲ್ ಸಂಸ್ಥೆ ತನ್ನ ಕಂಪನಿಯ ಫೋನ್ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಇಸ್ರೇಲ್ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಕುತಂತ್ರಾಂಶದಿಂದ ಸಮಸ್ಯೆ ಎದುರಾಗಿದೆ ಎಂಬ ಸಂದೇಶವನ್ನು ನೀಡಲಾಗಿದೆಯಂತೆ. ಇದರ ಜೊತೆ ಆಧುನಿಕ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ಗೂಢಚರ್ಯೆ ತಂತ್ರಾಂಶದ ದಾಳಿ ಬಗ್ಗೆ ತನ್ನ ಆಯ್ದ ಬಳಕೆದಾರರ ಇ-ಮೇಲ್‌ಗೆ, ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಎಚ್ಚರಿಕೆ ಸಂದೇಶವನ್ನು ಕಳುಹಿಸಿದೆ ಎಂದು ವರದಿಯಾಗಿದೆ.

91 ದೇಶಗಳಲ್ಲಿ ಎಚ್ಚರಿಕೆ ಸಂದೇಶ
ಈ ರೀತಿ ಆ್ಯಪಲ್ ತನ್ನ ಗ್ರಾಹಕರಿಗೆ ಕಳುಹಿಸಿರುವ ಸಂದೇಶದಲ್ಲಿ, ಭಾರತ ಕೂಡ ಸೇರಿದೆ. ಭಾರತ ಸೇರಿದಂತೆ ಜಗತ್ತಿನಲ್ಲಿ 91 ರಾಷ್ಟ್ರಗಳಲ್ಲಿರುವ ತನ್ನ ಬಳಕೆದಾರರಿಗೆ ಈ ಸಂದೇಶವನ್ನು ರವಾನಿಸಿದೆ ಆ್ಯಪಲ್. ಹಾಗೇ ಪತ್ರಕರ್ತರು, ಹೋರಾಟಗಾರರು, ರಾಜಕಾರಣಿಗಳು ಹಾಗೂ ರಾಯಭಾರಿಗಳು ಈ ತಂತ್ರಾಂಶ ದಾಳಿಗೆ ಸಿಲುಕಿದ್ದಾರೆ ಎಂದು ಕೂಡ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ. ಇನ್ನು ಆ್ಯಪಲ್ ಕಂಪನಿಯು ಈ ಹಿಂದೆ ಕೂಡ ಇಂತಹ ದಾಳಿ ಬಗ್ಗೆ ಸಂಶೋಧನೆ ನಡೆಸಿತ್ತು. ಇದರ ಆಧಾರದ ಮೇಲೆ ಸರ್ಕಾರ ಅಥವಾ ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಹೀಗೆ ಇಂತಹ ದಾಳಿ ಹಿಂದೆ ಇರಬಹುದು ಎಂದು ಸಂದೇಶದಲ್ಲಿ ಎಚ್ಚರಿಕೆ ನೀಡಿದೆ.
ಗ್ರಾಹಕರಿಗೂ ಸಮಸ್ಯೆ ಎದುರಾಗಿದೆ
ಐಫೋನ್ ಖರೀದಿ ಮಾಡುವುದು ಎಂದರೆ ಒಂದು ಪ್ರತಿಷ್ಠೆ ಆಗಿದೆ. ಅದರ ಜೊತೆ ಐಫೋನ್ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯುನ್ನತ ಭದ್ರತೆ ಕೂಡ ಒದಗಿಸುತ್ತದೆ ಎಂಬ ಹೆಸರು ಇದೆ. ಈ ಎಲ್ಲಾ ಉತ್ತಮ ಅಂಶಗಳ ಕಾರಣಕ್ಕೆ ಗ್ರಾಹಕರು ಕೂಡ ಐಫೋನ್ ಖರೀದಿ ಮಾಡುತ್ತಿದ್ದರು. ಆದರೆ ಈಗ ಐಫೋನ್ ಕೂಡ ದಾಳಿಕೋರರ ದಾಳಿಗೆ ಬಲಿ ಆಗುತ್ತಿದೆ. ಅಲ್ಲದೆ ಐಫೋನ್‌ನ ಬಳಕೆದಾರರು ಈ ದಾಳಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ, ಜೊತೆಗೆ ಗ್ರಾಹಕರಿಗೆ ಖಾಸಗಿ ಭದ್ರತೆ ಸಮಸ್ಯೆ ಕೂಡ ಎದುರಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಭಾರತದಲ್ಲಿ ಪೆಗಾಸಸ್ ವಿವಾದ ದೊಡ್ಡ ಸದ್ದು ಮಾಡಿತ್ತು, ಈ ಕುತಂತ್ರಾಂಶವನ್ನು ಬಳಸಿ ಪತ್ರಕರ್ತರು ಹಾಗೂ ರಾಜಕಾರಣಿಗಳ ಮೊಬೈಲ್ ಫೋನ್‌ನ ಖಾಸಗಿ ಮಾಹಿತಿ ಕದಿಯುತ್ತಿರುವ ಆರೋಪ ಕೇಳಿಬಂದಿತ್ತು. 2021 ರಲ್ಲಿ ಈ ಕುರಿತು ಸುಪ್ರೀಂ ಕೋರ್ಟ್‌ಗೆ ಹಲವು ಮಂದಿ ಅರ್ಜಿ ಸಲ್ಲಿಸಿದ್ದರು. ಇದರ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಇಷ್ಟೆಲ್ಲ ಘಟನೆ ಮಧ್ಯೆ, ಇದು ತಣ್ಣಗಾಗಿತ್ತು ಎನ್ನುವಾಗಲೇ ಐಫೋನ್ ನೀಡಿರುವ ಎಚ್ಚರಿಕೆ ಸಂದೇಶ ಗಮನ ಸೆಳೆದಿದೆ.


Click it and Unblock the Notifications