ಬೆಂಗಳೂರು, ಜೂನ್ 19: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ 3.0 ಸರ್ಕಾರದ ಮೊದಲ ಸಮಗ್ರ ಬಜೆಟ್ ನ್ನು ಜುಲೈನಲ್ಲಿ ಮಂಡಿಸಲಿದ್ದು, ಇದರ ಅಂಗವಾಗಿ ಗುರುವಾರ ಭಾರತೀಯ ಕೈಗಾರಿಕಾ ಒಕ್ಕೂಟ ಸಂಘಗಳ ಪ್ರಮುಖ ಪ್ರತಿನಿಧಿಗಳೊಂದಿಗೆ ಬಜೆಟ್ ಪೂರ್ವ ಚರ್ಚೆಗಳನ್ನು ನಡೆಸಲಿದ್ದಾರೆ.
ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ ಸಂಜೆ 4 ರಿಂದ 6 ರವರೆಗೆ ನಡೆಯಲಿರುವ ಸಭೆಯಲ್ಲಿ ಭಾರತೀಯ ವಾಣಿಜ್ಯ ಮತ್ತು ಉದ್ಯಮಗಳ ಒಕ್ಕೂಟ (ಎಫ್‌ಐಸಿಸಿಐ), ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಸ್ ಆಫ್ ಇಂಡಿಯಾ (ಅಸೋಚಾಮ್) , PHD ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ತಮ್ಮ ಬಜೆಟ್ ಸಲಹೆಗಳು ಮತ್ತು ಶಿಫಾರಸುಗಳನ್ನು ಪ್ರಸ್ತುತಪಡಿಸುತ್ತಿವೆ.

ಜುಲೈ ಮೂರನೇ ವಾರದಲ್ಲಿ ಸಂಸತ್ತಿನಲ್ಲಿ ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ. ಈ ಬಜೆಟ್ ಮೋದಿ ನೇತೃತ್ವದ ಸರ್ಕಾರದ ಮುಂದಿನ ಐದು ವರ್ಷಗಳ ಆರ್ಥಿಕ ದೃಷ್ಟಿಕೋನವನ್ನು ರೂಪಿಸುವ ಸಾಧ್ಯತೆ ಇದೆ.
ಇನ್ನು ಈ ಸಭೆಯು ಮುಂಬರುವ ಕೇಂದ್ರ ಬಜೆಟ್ ಅನ್ನು ರೂಪಿಸಲು ಪ್ರಮುಖ ಪ್ರತಿನಿಧಿಗಳ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿರುವ ಸರ್ಕಾರದ ವಾರ್ಷಿಕ ಪೂರ್ವ-ಬಜೆಟ್ ಸಮಾಲೋಚನೆಗಳ ಭಾಗವಾಗಿದೆ. ವಿತ್ತ ಸಚಿವೆ ಅವರೊಂದಿಗಿನ ಸಭೆಗೆ ಮುಂಚಿತವಾಗಿ, ಉದ್ಯಮ ಸಂಘಗಳು ಜೂನ್ 18 ರಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಭೇಟಿಯಾಗಲಿವೆ.
ಜೂನ್ 9 ರಂದು ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸರ್ಕಾರ ಮತ್ತು ಉದ್ಯಮದ ನಡುವಿನ ಮೊದಲ ಉನ್ನತ ಮಟ್ಟದ ಸಂವಾದ ಇದಾಗಿದ್ದು, ಈ ಹಿನ್ನಲೆ ಈ ಸಭೆಯು ಮಹತ್ವವನ್ನು ಪಡೆದುಕೊಂಡಿದೆ.
ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಮೋದಿ ಸರ್ಕಾರದ ಮೊದಲ ಬಜೆಟ್ ಇದಾಗಿದೆ.
ಲೋಕಸಭೆ ಚುನಾವಣೆಗೂ ಮುನ್ನ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. ನಿರ್ಮಲಾ ಇಲ್ಲಿಯವರೆಗೆ ಸತತ ಆರು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹೊಸ ಅವಧಿಗೆ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಿದಾಗ ಮತ್ತೊಮ್ಮೆ ಅವರು ದಾಖಲೆಯನ್ನು ಬರೆಯಲಿದ್ದಾರೆ.


Click it and Unblock the Notifications