ಕಾಂತಾರ: ಚಾಪ್ಟರ್ 1 ಸಿನಿಮಾ (Kantara: Chapter 1) ನೋಡಿ ಇಡೀ ದೇಶವೇ ಕೊಂಡಾಡಿತ್ತು. ರಿಷಬ್ ಶೆಟ್ಟಿ ನಿರ್ದೇಶನಕ್ಕೆ, ಅಭಿಯನಕ್ಕೆ ಬಾಲಿವುಡ್ ದಿಗ್ಗಜರು ಕೂಡಾ ಮನಸೋತಿದ್ದಾರೆ. ಆದರೆ ಬಾಲಿವುಡ್ ನಟ ರಣವೀರ್ ಸಿಂಗ್, ಕಳೆದ 2025ರ ನವೆಂಬರ್‌ನಲ್ಲಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾದ ದೈವದ ದೃಶ್ಯವನ್ನು ಮಿಮಿಕ್ರಿ ಮಾಡಿ, ಅಲ್ಲಿ ತೋರಿಸಲಾಗಿದ್ದ ಚಾಮುಂಡಿ ದೈವವನ್ನು "ಹೆಣ್ಣು ಭೂತ" ಎಂದು ಕರೆದಿದ್ದರು. ಆ ಕಾರಣದಿಂದ ಇದೀಗ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಮ್ಮೆ ಎಫ್‌ಐಆರ್ (FIR) ದಾಖಲಾಗಿದೆ. ಕರಾವಳಿ ಕರ್ನಾಟಕದ ಹಿಂದೂ ಧಾರ್ಮಿಕ ಭಾವನೆಗಳು ಮತ್ತು ಚಾಮುಂಡಿ ದೈವದ ಸಂಪ್ರದಾಯಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ.

ರಣವೀರ್ ಸಿಂಗ್ ಮಾಡಿದ್ದೇನು?
ನವೆಂಬರ್ 28, 2025ರಂದು ಗೋವಾದಲ್ಲಿ ಅದ್ಧೂರಿಯಾಗಿ IFFI 2025 ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಲವು ಸಿನಿ ದಿಗ್ಗಜರು ಆಗಮಿಸಿದ್ದರು. ಇದೇ ವೇಳೆ ರಣವೀರ್ ಸಿಂಗ್, ಸ್ಟೇಜ್ ಮೇಲೆ ಕಾಂತಾರ ಸಿನಿಮಾ ನಾಯಕ ರಿಷಬ್ ಶೆಟ್ಟಿ ಅವರೊಂದಿಗೆ ಮಾತನಾಡುತ್ತಾ, ಸಿನಿಮಾ ದೃಶ್ಯವೊಂದನ್ನು ಮಾಡಿ ತೋರಿಸಿದ್ದಾರೆ. ಅಲ್ಲದೇ ಮಿಮಿಕ್ರಿ ಕೂಡಾ ಮಾಡಿದ್ದರು. ಅಲ್ಲದೇ ತುಳುನಾಡಿನ ಜನ ಕಾರಣಿಕದ ದೈವವಾಗಿ ಆರಾಧಿಸಿಕೊಂಡು ಬಂದಿರುವ ಚಾವುಂಡಿ ದೈವವನ್ನು "ಹೆಣ್ಣು ದೈವ" ಎಂದು ಕರೆದಿದ್ದರು. ಈ ವರ್ತನೆ ಪ್ರೇಕ್ಷಕರ, ದೈವಭಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ರಣವೀರ್ ಸಿಂಗ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು,
ರಣವೀರ್ ಸಿಂಗ್ ವಿರುದ್ಧ F.I.R!
ರಣವೀರ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳಾದ 196, 299 ಮತ್ತು 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ವಕೀಲ ಪ್ರಶಾಂತ್ ಮೇಥಲ್ (46) ಅವರು ಈ ದೂರು ದಾಖಲಿಸಿದ್ದು, ಎಫ್‌ಐಆರ್‌ನಲ್ಲಿ ರಣವೀರ್ ಸಿಂಗ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಿದ್ದಾರೆ ಮತ್ತು ಗೌರವಯುತ ದೈವ ಸಂಪ್ರದಾಯಕ್ಕೆ ಅಪಮಾನ ಮಾಡುವ ರೀತಿಯಲ್ಲಿ ನಗೆಪಾಟಲಿನ ಪ್ರದರ್ಶನ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮೇಥಲ್ ತಮ್ಮ ದೂರಿನಲ್ಲಿ, ನಟ ರಣವೀರ್ ಸಿಂಗ್ ಪಂಜುರ್ಲಿ ಮತ್ತು ಗುಳಿಗ ದೈವಗಳಿಗೆ ಸಂಬಂಧಿಸಿದ ಹಾವಭಾವಗಳನ್ನು 'ಅಸಭ್ಯ ಮತ್ತು ಹಾಸ್ಯಮಯ' ರೀತಿಯಲ್ಲಿ ಅನುಕರಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಪವಿತ್ರ ಚಾಮುಂಡಿ ದೈವವನ್ನು 'ಹೆಣ್ಣು ಭೂತ' ಎಂದು ಕರೆದಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ.
ಎಫ್‌ಐಆರ್‌ನಲ್ಲಿ ಸ್ಪಷ್ಟಪಡಿಸಿರುವಂತೆ, ಚಾಮುಂಡಿ ದೈವವು ಕರಾವಳಿ ಕರ್ನಾಟಕದ ಜನರು ದೈವಿಕ ಸ್ತ್ರೀ ಶಕ್ತಿಯನ್ನು ಸಂಕೇತಿಸುವ ಕಾರಣಿಕದ ದೈವವಾಗಿದೆ. ಈ ದೈವವನ್ನು ಭೂತವೆಂದು ಕರೆಯುವುದು ದೊಡ್ಡ ತಪ್ಪು ಎಂದು ದೂರುದಾರರು ತಿಳಿಸಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು, ಭಕ್ತರ ನಂಬಿಕೆಯನ್ನು ವ್ಯಂಗ್ಯ ಮಾಡಿದಂತೆ ಎಂದು ತಿಳಿಸಿದರು.


Click it and Unblock the Notifications