ಭಾರತದ ಆರ್ಥಿಕತೆಯು ಈ ಹಿಂದೆ ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಕುಗ್ಗಲಿದೆ ಎಂದು ಫಿಚ್ ರೇಟಿಂಗ್ಸ್ ಅಂದಾಜು ಮಾಡಿದೆ. ಹಣಕಾಸು ವಲಯದಲ್ಲಿ ಆಸ್ತಿಯ ಗುಣಮಟ್ಟ ಇಳಿಕೆ ಆಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ನೀಡಲಾಗಿದೆ. ಮಂಗಳವಾರದಂದು ಫಿಚ್ ರೇಟಿಂಗ್ಸ್ ಈ ಬಗ್ಗೆ ಎಚ್ಚರಿಸಿದ್ದು, ಭಾರತದ ಜಿಡಿಪಿ FY21ರಲ್ಲಿ 10.5% ಕುಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.
ಜೂನ್ ತಿಂಗಳಲ್ಲಿ 5% ಕುಗ್ಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಆ ಪ್ರಮಾಣ ದುಪ್ಪಟ್ಟಾಗಿದೆ. ಇಂಡಿಯಾ ರೇಟಿಂಗ್ಸ್ ಪ್ರತ್ಯೇಕವಾಗಿ ತಿಳಿಸಿದ್ದು, ಈ ಹಿಂದೆ 5.3% ಇಳಿಕೆ ಕಾಣಬಹುದು ಎಂಬ ಅಂದಾಜು ಮಾಡಿತ್ತು. ಅದೀಗ 11.8%ಗೆ ಹಿಗ್ಗಿದೆ. ಅಂದ ಹಾಗೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 23.9% ಕುಗ್ಗಿದೆ.
ಭಾರತದ ಜಿಡಿಪಿ ತೀಕ್ಷ್ಣವಾಗಿ ಕುಸಿತ
2020ರ ಜಾಗತಿಕ ಆರ್ಥಿಕತೆಯ ಅಂದಾಜಿಗೆ ಬೆಳವಣಿಗೆ ಚೇತರಿಕೆಗೆ ಹೋಲಿಸಿದಲ್ಲಿ ಭಾರತದ ಸ್ಥಿತಿ ಭಿನ್ನವಾಗಿ ಎಂದು ಫಿಚ್ ಅಂದಾಜು ಮಾಡಿದೆ. ಜಾಗತಿಕ ಮಟ್ಟದ ಜಿಡಿಪಿ 4.4% ಕುಸಿಯಬಹುದು ಎಂಬ ಅಂದಾಜಿತ್ತು. ಅದು 4.6% ಆಯಿತು. ಜೂನ್ ತಿಂಗಳಲ್ಲಿ ಭಾರತದ ಜಿಡಿಪಿ ತೀಕ್ಷ್ಣವಾಗಿ ಕುಸಿತ ಕಂಡಿದೆ. ಆದರೆ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕತೆ ಪ್ರಬಲವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಏಕೆಂದರೆ ಆರ್ಥಿಕ ಚಟುವಟಿಕೆಗಳು ಪುನರಾರಂಭ ಆಗುತ್ತಿವೆ.
'V' ಬಗೆಯ ಚೇತರಿಕೆ ನಿರೀಕ್ಷೆ
ಈಚೆಗೆ ಹಣಕಾಸು ಸಚಿವಾಲಯ ನೀಡಿರುವ ಹೇಳಿಕೆ ಪ್ರಕಾರ, ಭಾರತದಲ್ಲಿ 'V' ಬಗೆಯ ಚೇತರಿಕೆ (ತೀವ್ರ ಕುಸಿತದ ನಂತರ ಎತ್ತರಕ್ಕೆ ಏರುವುದು) ನಿರೀಕ್ಷೆ ಮಾಡಬಹುದು. ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಮಾರ್ಚ್ 25ನೇ ತಾರೀಕಿನಂದು ಭಾರತದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆ ಲಾಕ್ ಡೌನ್ ವಿನಾಯಿತಿ ನೀಡಲು ಶುರು ಮಾಡಿದ್ದು ಮೇ ನಂತರವೇ. ಸದ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿ ಇದೆ.
FY22ಕ್ಕೆ ಕೊರೊನಾ ಬಿಕ್ಕಟ್ಟಿನ ಹಿಂದಿನ ಸ್ಥಿತಿಗೆ ಮರಳಬಹುದು
ಇದೀಗ ಫಿಚ್ ಅಂದಾಜು ಮಾಡುತ್ತಿರುವಂತೆ ಭಾರತದ ಜಿಡಿಪಿ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕಕ್ಕೆ 9.6%, ಡಿಸೆಂಬರ್ ತ್ರೈಮಾಸಿಕ ಅಂತ್ಯಕ್ಕೆ 4.8% ಮತ್ತು ಜನವರಿ- ಮಾರ್ಚ್ ತ್ರೈಮಾಸಿಕಕ್ಕೆ 4% ಎಂದು ಅಂದಾಜು ಮಾಡಿದೆ. ಭಾರತದ ಆರ್ಥಿಕತೆ FY22ಕ್ಕೆ ಚೇತರಿಸಿಕೊಳ್ಳಬಹುದು. 2022ರ ಮೊದಲ ತ್ರೈಮಾಸಿಕದ ತನಕ ಕೊರೊನಾಗೂ ಹಿಂದಿನ ಜಿಡಿಪಿ ಮಟ್ಟ ನಿರೀಕ್ಷೆ ಸಾಧ್ಯವಿಲ್ಲ. ಬೆಳವಣಿಗೆ ದರ 11% ಆಗಬಹುದು ಎನ್ನಲಾಗಿದೆ.
ಕಠಿಣವಾದ ಲಾಕ್ ಡೌನ್ ಪರಿಣಾಮ
ಯುಕೆ, ಭಾರತ, ಫ್ರಾನ್ಸ್, ಇಟಲಿ ಹಾಗೂ ಸ್ಪೇನ್ ಪ್ರಮುಖ ತಡೆಯಾಗಿವೆ. ಏಪ್ರಿಲ್ ನಿಂದ ಜೂನ್ ತನಕ ಕಠಿಣವಾದ ಲಾಕ್ ಡೌನ್ ಹೇರಿದ್ದರ ಪರಿಣಾಮ ಅನುಭವಕ್ಕೆ ಬರುತ್ತಿದೆ. ಆದ್ದರಿಂದ ಜೂನ್ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ದೊಡ್ಡ ಪ್ರಮಾಣದಲ್ಲಿ ಜಿಡಿಪಿ ಕುಸಿತ ಆಗಿದೆ ಎಂದು ತಿಳಿಸಲಾಗಿದೆ.


Click it and Unblock the Notifications