ಈಗಿನ ಆಹಾರ ಹಣದುಬ್ಬರ ಏರಿಕೆ ತಾತ್ಕಾಲಿಕವಾದ ಸಂಗತಿ ಎಂದು ಮಂಗಳವಾರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಸದ್ಯದಲ್ಲೇ ಹೊಸ ಬೆಳೆ ಬರುತ್ತಿದ್ದಂತೆ ಮತ್ತು ಅಗತ್ಯ ವಸ್ತುಗಳ ಪೂರೈಕೆ ಚೇತರಿಸಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಕೆಲವು ಆಹಾರ ಪದಾರ್ಥಗಳಾದ ಈರುಳ್ಳಿ, ಆಲೂಗಡ್ಡೆ ಮತ್ತು ಟೊಮೆಟೋ ಸರಾಸರಿ ಬೆಲೆಗಿಂತ ಹೆಚ್ಚಾಗಿದ್ದು, ಕೇಜಿಗೆ ನೂರು ರುಪಾಯಿಗಿಂತ ಜಾಸ್ತಿಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು ಎಂಟು ತಿಂಗಳ ಗರಿಷ್ಠ ಮಟ್ಟ ಮುಟ್ಟಿತ್ತು. ಕಳೆದ ವರ್ಷದ ಅಕ್ಟೋಬರ್ ನಿಂದ ಹಣದುಬ್ಬರ ದರವು ನಾಲ್ಕು ಪರ್ಸೆಂಟ್ ಆಸುಪಾಸಿನಲ್ಲಿತ್ತು. ಈ ಹಿಂದಿನ ಗ್ರಾಹಕ ದರ ಹಣದುಬ್ಬರವು ಈ ವರ್ಷದ ಜನವರಿಯಲ್ಲಿ 7.59% ಇತ್ತು. ಆ ನಂತರ ಸೆಪ್ಟೆಂಬರ್ ನಲ್ಲಿ 7.34% ತಲುಪಿತು.
ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು ಸೆಪ್ಟೆಂಬರ್ 2020ರಲ್ಲಿ ಹಣದುಬ್ಬರವು 1.32 ಪರ್ಸೆಂಟ್ ಗೆ ಏರಿಕೆ ಆಗಿತ್ತು. ಅದಕ್ಕೆ ಕಾರಣ ಆಗಿದ್ದು ದುಬಾರಿ ಆಹಾರ ಪದಾರ್ಥಗಳು.

"ನನ್ನ ಪ್ರಕಾರ ಈಗಿನ ಪರಿಸ್ಥಿತಿ ತಾತ್ಕಾಲಿಕವಾದದ್ದು. ವಾಸ್ತವವಾಗಿ ಡಬ್ಲ್ಯುಪಿಐ ಹಾಗೂ ಸಿಪಿಐ ಮಧ್ಯ ವ್ಯತ್ಯಾಸ ಇದೆ. ಸರಕು ಸಾಗಣೆ ಮತ್ತು ಉತ್ತಮ ಕೃಷಿ ಸೀಸನ್ ನಿಂದ ಬದಲಾವಣೆ ಆಗಬೇಕಿದೆ. ಅದು ಆಗುತ್ತಿದೆ. ಹೊಸ ಬೆಳೆ ನಮ್ಮ ಬಳಿ ಇದೆ. ಸದ್ಯದಲ್ಲೇ ಸ್ಥಿತಿ ಸುಧಾರಿಸಲಿದೆ," ಎಂದು ಬಜಾಜ್ ಹೇಳಿದ್ದಾರೆ.
ಕೃಷಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಕೂಡ ಈಗಿನ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಬಜಾಜ್ ತಿಳಿಸಿದ್ದಾರೆ.
ಈರುಳ್ಳಿ ಎಂಬುದು ರಾಜಕೀಯವಾಗಿಯೂ ಸೂಕ್ಷ್ಮ ಸರಕು. ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ನೂರು ರುಪಾಯಿ ಇದೆ. ಸರ್ಕಾರದ ದತ್ತಾಂಶಗಳ ಪ್ರಕಾರ, ಕರ್ನಾಟಕವು ಈರುಳ್ಳಿ ಬೆಳೆಯುವುದರಲ್ಲಿ ಮೂರನೇ ಅತಿ ದೊಡ್ಡ ರಾಜ್ಯ. ಆದರೂ ಇಲ್ಲಿನ ಸ್ಥಿತಿಯೇ ಹಾಗಿದೆ. ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ಆದರೆ ಮುಂಬೈನಲ್ಲೇ ಕೇಜಿಗೆ 77 ರುಪಾಯಿಗೆ ಮಾರಾಟ ಆಗುತ್ತಿದೆ.


Click it and Unblock the Notifications