ವಿದೇಶ ಪ್ರಯಾಣ (Abroad Travel), ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಹಲವರ ಕನಸು. ಆದ್ರೆ ಏನ್ ಮಾಡೋದು, ಕೆಲವರಿಗೆ ಮಾತ್ರ ಆ ಅದೃಷ್ಟ ಇರುತ್ತದೆ. ಕೆಲವೊಬ್ಬರಿಗೆ ಅದೃಷ್ಟ ಒಲಿದು ಬಂದರೂ, ಹೋಗುವ ಕಾಲ ಕೂಡಿ ಬಂದಿರುವುದಿಲ್ಲ. ಆದರೆ ಇದೀಗ ವಿದೇಶಕ್ಕೆ ಪ್ರವಾಸ ಕೈಗೊಳ್ಳುವವರಿಗೆ ಬಂಪರ್ ಸುದ್ದಿಯೊಂದಿದೆ. ನಿಮ್ಮ ಬಳಿ ಕೇವಲ 1 ಲಕ್ಷ ರೂಪಾಯಿ ಇದ್ರೆ ಸಾಕು, ಈ ದೇಶ ಸುತ್ತಾಡಿ ಬರಬಹುದು.

ಪ್ಯಾರಿಸ್, ಬ್ರಸೆಲ್ಸ್, ರೋಮ್, ಫ್ಲಾರೆನ್ಸ್, ಬಾರ್ಸಿಲೋನಾ, ಲಿಸ್ಬನ್, ವಿಯೆನ್ನಾ, ಪ್ರೇಗ್, ಆಮ್‌ಸ್ಟರ್‌ಡ್ಯಾಮ್ ಮತ್ತು ಅಥೆನ್ಸ್‌ನಂತಹ ಸುಂದರ ನಗರಗಳು ಕಲೆ, ಇತಿಹಾಸ, ಆಹಾರ ಮತ್ತು ಪ್ರವಾಸಿ ತಾಣಗಳಿಗೆ ತುಂಬಾನೇ ಹೆಸರುವಾಸಿ. ಸರಿಯಾದ ಪ್ಲಾನ್ ನಿಮ್ಮಲ್ಲಿದ್ದರೆ, ಈ ಯುರೋಪಿಯನ್ ಕನಸಿನ ತಾಣಗಳಿಗೆ ಒಂದು ಲಕ್ಷ ರೂಪಾಯಿ ಬಜೆಟ್‌ನಲ್ಲಿಯೇ ಹೋಗಿಬರಬಹುದು.
ಕೇಂದ್ರ ಬಜೆಟ್ ಮಂಡನೆಯಲ್ಲಿ ಭಾರತೀಯರಿಗೆ ವಿದೇಶಿ ಪ್ರವಾಸ ಅಗ್ಗವಾಗುವಂತೆ ಮಹತ್ವದ ಘೋಷಣೆ ಮಾಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಉದ್ಯೋಗ ಸೃಷ್ಟಿಸುವ ಮತ್ತು ವಿದೇಶಿ ವಿನಿಮಯ ಗಳಿಕೆಯ ಪ್ರಮುಖ ಆದಾಯ ಮೂಲಕವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಸರ್ಕಾರ ದೇಶೀಯ ಮತ್ತು ವಿದೇಶಿ ಪ್ರವಾಸಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಆ ಪ್ರಕಾರ, ಅಂತರಾಷ್ಟ್ರೀಯ ಟೂರ್ ಪ್ಯಾಕೇಜ್‌ಗಳ ಮೇಲಿನ ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್ (TCS) ಅನ್ನು ಶೇ.2% ಕ್ಕೆ ಇಳಿಸಿ, ಏಕರೂಪಗೊಳಿಸಿದೆ. ಇದರಿಂದ ವಿದೇಶಿ ಪ್ರವಾಸ ಪ್ಯಾಕೇಜ್ ಬುಕ್ ಮಾಡುವಾಗ ಮೊದಲೇ ಕಟ್ ಮಾಡಲಾಗುತ್ತಿದ್ದ ಹೆಚ್ಚಿನ ತೆರಿಗೆ ಕಡಿಮೆಯಾಗಲಿದೆ.
ಕೇಂದ್ರ ಬಜೆಟ್‌ನ ಆ ಒಂದು ನಿರ್ಧಾರದಿಂದ, ಅಂತರರಾಷ್ಟ್ರೀಯ ವಿಮಾನ ಟಿಕೆಟ್‌ಗಳು, ವಿಶೇಷವಾಗಿ ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪಿನ ಕೆಲವು ಭಾಗಗಳ ಪ್ರಯಾಣ ಅಗ್ಗವಾಗಬಹುದು.
ಬಜೆಟ್ 2026, ಅಂತರರಾಷ್ಟ್ರೀಯ ಪ್ರಯಾಣ, ಕಾರ್ಡ್ ವಹಿವಾಟುಗಳ ಮೇಲಿನ ಟಿ.ಸಿ.ಎಸ್ (Tax Collected at Source) ಅನ್ನು ಕಡಿತಗೊಳಿಸುವ ಮೂಲಕ ಖರ್ಚನ್ನು ಕಡಿಮೆ ಮಾಡಿದೆ. ಸ್ಥಿರ ರೂಪಾಯಿ ಮೌಲ್ಯ ಮತ್ತು ಕಡಿಮೆ ಮುಂಗಡ ಟಿ.ಸಿ.ಎಸ್. ಕಡಿತ ಪ್ರಯಾಣಿಕರ ಖರ್ಚನ್ನು ಸುಧಾರಿಸುತ್ತದೆ. ಇದರಿಂದ ವಿಮಾನ, ಹೋಟೆಲ್, ಟೂರ್ ಪ್ಯಾಕೇಜ್‌ಗಳ ಬುಕಿಂಗ್ ಅಗ್ಗವಾಗುತ್ತದೆ. ಈ ಕ್ರಮಗಳು ಭಾರತೀಯರಿಗೆ ₹1 ಲಕ್ಷ - ₹1.5 ಲಕ್ಷ ಬಜೆಟ್‌ನಲ್ಲಿ ವಿದೇಶ ಪ್ರವಾಸಗಳನ್ನು ಯೋಜಿಸಲು ನೆರವಾಗುತ್ತವೆ.
ಪ್ಯಾರಿಸ್ + ಬ್ರಸೆಲ್ಸ್ (6 ದಿನಗಳು / 5 ರಾತ್ರಿ): ಕಲೆ, ಚಾಕೊಲೇಟ್ ಸ್ಟ್ರೀಟ್, ಇತಿಹಾಸ ಪ್ರಸಿದ್ಧ ಸ್ಥಳಗಳು ಮತ್ತು ಕೆಫೆ ಸಂಸ್ಕೃತಿಗೆ ಹೆಸರುವಾಸಿ. ಪ್ಯಾರಿಸ್‌ನಲ್ಲಿ 3 ರಾತ್ರಿಗಳು (ಐಫೆಲ್ ಪ್ರದೇಶ, ಲೂವರ್, ಸೀನ್ ವಾಕಿಂಗ್) ಮತ್ತು ಬ್ರಸೆಲ್ಸ್‌ನಲ್ಲಿ 2 ರಾತ್ರಿಗಳು (ಗ್ರ್ಯಾಂಡ್ ಪ್ಲೇಸ್, ವಾಫಲ್ಸ್, ಬ್ರೂಜ್‌ಗೆ ದಿನ ಪ್ರವಾಸ) ಪ್ಲಾನ್ ಮಾಡಬೇಕು. ಕಡಿಮೆ ಅಂತರ, ಬಜೆಟ್ ಬೆಲೆಯ ಹೋಟೆಲ್‌ಗಳು ಹಾಗೂ ಕೈಗೆಟಕುವ ಬೆಲೆಯ ಆಹಾರಗಳನ್ನು ಆಯ್ಕೆ ಮಾಡಿದ್ರೆ, ₹1 ಲಕ್ಷ ಬಜೆಟ್‌ನಲ್ಲಿ ಟೂರ್ ಪ್ಲಾನ್ ಮಾಡಬಹುದು..
ರೋಮ್ + ಫ್ಲಾರೆನ್ಸ್ (7 ದಿನಗಳು / 6 ರಾತ್ರಿ): ಪ್ರಾಚೀನ ಅವಶೇಷಗಳು, ಕಲೆ, ಸುಂದರ ಪಿಯಾಝಾಗಳು, ಸೂರ್ಯಾಸ್ತದ ನೋಟ ಇಲ್ಲಿನ ಸೌಂದರ್ಯ ಮತ್ತಷ್ಟು ಹೆಚ್ಚಿಸಿದೆ. ರೋಮ್‌ನಲ್ಲಿ 3 ರಾತ್ರಿಗಳು (ಕೊಲೋಸಿಯಮ್, ವ್ಯಾಟಿಕನ್ ಹೊರಭಾಗ, ಸ್ಟ್ರೀಟ್ ಫುಡ್) ಮತ್ತು ಫ್ಲಾರೆನ್ಸ್‌ನಲ್ಲಿ 3 ರಾತ್ರಿಗಳು (ಡ್ಯುವೋಮೋ, ವೀಕ್ಷಣಾ ಸ್ಥಳಗಳು, ಪಿಸಾ ದಿನ ಪ್ರವಾಸ) ಪ್ಲಾನ್ ಮಾಡಿ. ಅಗ್ಗದ ರೈಲುಗಳು, ನಡೆದುಕೊಂಡು ಸುತ್ತಬಹುದಾದ ನಗರಗಳು ಮತ್ತು ಸ್ಥಳೀಯ ರುಚಿಕರ ಊಟ ₹1 ಲಕ್ಷ ಬಜೆಟ್‌ಗೆ ಅತ್ಯುತ್ತಮವಾಗಿದೆ.
ಬಾರ್ಸಿಲೋನಾ + ಲಿಸ್ಬನ್ (7 ದಿನಗಳು / 6 ರಾತ್ರಿ): ಬೀಚ್‌ಗಳು, ಕಲರ್‌ಫುಲ್ ಸ್ಟ್ರೀಟ್‌ಗಳು, ಮ್ಯೂಸಿಕ್ ಇಲ್ಲಿ ಆನಂದಿಸಬಹುದು. ಬಾರ್ಸಿಲೋನಾದಲ್ಲಿ 3 ರಾತ್ರಿ (ಗೌಡಿ ತಾಣಗಳು, ಬೀಚ್ ವಾಕ್) ಹಾಗೂ ಲಿಸ್ಬನ್‌ನಲ್ಲಿ 3 ರಾತ್ರಿ (ಅಲ್ಫಾಮಾ, ಟ್ರ್ಯಾಮ್ ಸವಾರಿ, ಸೂರ್ಯಾಸ್ತ ವೀಕ್ಷಣೆ) ಪ್ಲಾನ್ ಮಾಡಿ.
ವಿಯೆನ್ನಾ + ಪ್ರೇಗ್ (6 ದಿನಗಳು / 5 ರಾತ್ರಿ): ಅರಮನೆಗಳು, ಶಾಸ್ತ್ರೀಯ ಸಂಗೀತ, ಐತಿಹಾಸಿಕ ಕೆಫೆಗಳು ಮತ್ತು ನದಿ ವೀಕ್ಷಣೆಗಳಿಗೆ ಇದು ಫೇಮಸ್. ವಿಯೆನ್ನಾದಲ್ಲಿ 3 ರಾತ್ರಿ (ಶೋನ್‌ಬ್ರುನ್ ಉದ್ಯಾನ ವನಗಳು, ಸ್ಟ್ರೀಟ್ ವಾಕಿಂಗ್) ಮತ್ತು ಪ್ರೇಗ್‌ನಲ್ಲಿ 2 ರಾತ್ರಿ ಟ್ರಿಪ್ ಪ್ಲಾನ್ ಮಾಡಿ. ಈ ರೀತಿ ಟ್ರಿಪ್ ಪ್ಲಾನ್ ಮಾಡಿದ್ರೆ, ಆರಾಮವಾಗಿ 1 ಲಕ್ಷದಲ್ಲಿ ವಿದೇಶಿ ಪ್ರವಾಸ ಮಾಡಿ ಬರಬಹುದು.


Click it and Unblock the Notifications