ನವದೆಹಲಿ, ಸೆಪ್ಟೆಂಬರ್ 1: Shaadi.com ನ ಸಂಸ್ಥಾಪಕ ಮತ್ತು ಪ್ರಸಿದ್ಧ ಉದ್ಯಮಿಯಾಗಿರುವ ಅನುಪಮ್ ಮಿತ್ತಲ್ ಅವರು ಜನಪ್ರಿಯ ಶೋ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಕಾಣಿಸಿಕೊಂಡ ನಂತರ ಅನೇಕರಿಗೆ ಚಿರಪರಿಚಿತರಾಗಿದ್ದಾರೆ. ಕಷ್ಟಗಳೊಂದಿಗೆ ಬೆಳೆದು ಸಿರಿವಂತರಾಗಿ, ಮತ್ತೆ ಎಲ್ಲವನ್ನು ಕಳೆದುಕೊಂಡು , ಮತ್ತೆ ಮೇಲಕ್ಕೇರಿ ಜೀವನದ ಹಾವು ಏಣಿ ಆಟದಲ್ಲಿ ಅನುಪಮ್ ಮಿತ್ತಲ್ ಪಳಗಿದವರು ಅಂದರೆ ತಪ್ಪಾಗಲಾರದು. 2000 ರ ದಶಕದ ಆರಂಭದಲ್ಲಿ ಡಾಟ್ ಕಾಮ್ ಬಬಲ್ ಕ್ರ್ಯಾಶ್ ಸಮಯದಲ್ಲಿ ಎಲ್ಲವನ್ನೂ ಕಳೆದುಕೊಂಡು ತನ್ನ 20 ರ ದಶಕದ ಆರಂಭದಲ್ಲಿ ಅವರು ಮತ್ತೆ ಹೇಗೆ ಬಹು ಮಿಲಿಯನೇರ್ ಆಗಿ ಬೆಳೆದ ಅವರ ಕಥೆ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸ್ಥಿತಿಸ್ಥಾಪಕತ್ವದ ಪಾಠವಾಗಿದೆ.
ಡಾಟ್ ಕಾಮ್ ಬಬಲ್ 1990 ರ ದಶಕದ ಕೊನೆಯಲ್ಲಿ ಮತ್ತು 2000 ರ ದಶಕದ ಆರಂಭದಲ್ಲಿ ವರ್ಲ್ಡ್ ವೈಡ್ ವೆಬ್ ಹೆಚ್ಚು ಜನಪ್ರಿಯವಾಗಿ, ಇಂಟರ್ನೆಟ್ ಆಧಾರಿತ ಕಂಪನಿಗಳು ವೇಗವಾಗಿ ತನ್ನ ಮೌಲ್ಯದಲ್ಲಿ ಬೆಳೆಯತೊಡಗಿತ್ತು. ಇದು ಸ್ಟಾರ್ಟಪ್ ಜಗತ್ತಿನಲ್ಲಿ ಉತ್ಕರ್ಷಕ್ಕೆ ಕಾರಣವಾಯಿತು. ಅನೇಕ ಜನ ಬಹುತೇಕ ರಾತ್ರೋರಾತ್ರಿ ಮಿಲಿಯನೇರ್‌ಗಳಾದರು. ಆದ್ರೆ, ಸ್ವಲ್ಪ ಕಾಲ ಮಾತ್ರವಿದ್ದ ಈ ಡಾಟ್ ಕಾಮ್ ಬಬಲ್ ಒಡೆದು ನುಚ್ಚುನೂರಾದಾಗ, ಇದು ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಉಂಟುಮಾಡಿತು, ಇದು ಅನೇಕ ಸ್ಟಾರ್ಟ್‌ಅಪ್‌ಗಳ ಕುಸಿತಕ್ಕೆ ಕಾರಣವಾಯಿತು. ಅದೇ ರೀತಿ ಮಿತ್ತಲ್ ಅವರ ಆರ್ಥಿಕ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು.

ಈ ಕುರಿತು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿರುವ ಮಿತ್ತಲ್, ಒಂದು ಕಾಲದಲ್ಲಿ $40 ಶತಕೋಟಿ ಮೌಲ್ಯವನ್ನು ಹೊಂದಿದ್ದ ಕಂಪನಿಯಾದ MicroStrategy ನಲ್ಲಿ ಉನ್ನತ ಸ್ಥಾನದಲ್ಲಿ, ಅಮೇರಿಕಾದಲ್ಲಿದ್ದಾಗ ಫೆರಾರಿ ಕಾರನ್ನು ಆರ್ಡರ್ ಮಾಡಿದ್ದರು. ಆದರೆ ಡಾಟ್ ಕಾಮ್ ಎಂಬ ಗುಳ್ಳೆ ಒಡೆದಾಗ ಆರ್ಥಿಕ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು. ತಮ್ಮದೆಂದುಕೊಂಡಿದ್ದ ಸಂಪತ್ತು ಕಣ್ಮರೆಯಾಗಿ, ಭಾರೀ ಸಾಲದಲ್ಲಿ ಸಿಲುಕಿದ್ದರು. ಕೊನೆಯದಾಗಿ ಅವರ ಆರ್ಥಿಕತೆಯ ಕ್ಷಿಪ್ರ ಏರಿಕೆ ಮತ್ತು ಕುಸಿತವು ಮತ್ತು ಅವರಿಗೆ ಸಿಕ್ಕ ದೊಡ್ಡ ಯಶಸ್ಸು ಮತ್ತು ವಿನಾಶಕಾರಿ ವೈಫಲ್ಯದ ನೆನಪುಗಳನ್ನು ಬಿಟ್ಟು ಬೇರೇನೂ ಉಳಿಯಲಿಲ್ಲ.
2003 ರಲ್ಲಿ ಮಿತ್ತಲ್ ಅವರು ತಮ್ಮ ಅನುಭವದೊಂದಿಗೆ ಭಾರತಕ್ಕೆ ಮರಳಿದರು. ಸೋತೆನೆಂದು ಕೈ ಚೆಲ್ಲುವ ಬದಲು Makaan.com ಮತ್ತು Mauj ಮೊಬೈಲ್‌ನಂತಹ ಇತರ ಉದ್ಯಮಗಳೊಂದಿಗೆ Shaadi.com ಅನ್ನು ಪ್ರಾರಂಭಿಸುವ ಮೂಲಕ ಡಾಟ್ ಕಾಮ್ ಜಗತ್ತಿನಲ್ಲಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದರು. ಆ ಸಮಯದಲ್ಲಿ, Shaadi.com ಗಾಗಿ ಡೊಮೇನ್ ಅನ್ನು ಖರೀದಿಸಲು $25,000 ವೆಚ್ಚವಾಯಿತು, ಕೊನೆಯದಾಗಿ ಅವರಲ್ಲಿ ಒಟ್ಟು $30,000 ಮಾತ್ರ ಉಳಿದಿತ್ತು.
ಸಂಪತ್ತು ಕಳೆದುಕೊಂಡು, ಇದ್ದ ಉಳಿಕೆಯಲ್ಲಿ ಮತ್ತೆ ಉದ್ಯಮ ಶುರು ಮಾಡುವ ಅವರ ನಿರ್ಧಾರವನ್ನು ಸುತ್ತಮುತ್ತಲಿನ ಅನೇಕರು ಬೆಂಬಲಿಸಲಿಲ್ಲ. ಅವಮಾನ, ಟೀಕೆಗಳ ಗಳ ನಡುವೆಯೂ, ಮಿತ್ತಲ್ ತಮ್ಮ ಕನಸಿನ ಯೋಜನೆಗಳ ಯಶಸ್ವಿಗೆ ದುಡಿದರು. ಅದರ ಪರಿಶ್ರಮದ ಫಲವಾಗಿ ಶಾದಿ ಡಾಟ್ ಕಾಮ್ ದೊಡ್ಡ ಯಶಸ್ಸನ್ನು ಸಾಧಿಸಿತು.
ಉದ್ಯಮಶೀಲತೆಯ ಸ್ಪೂರ್ತಿ" ಕೇವಲ ಒಂದು ಯಶಸ್ಸು ಅಥವಾ ವೈಫಲ್ಯಕ್ಕೆ ಸಂಬಂಧಿಸಿಲ್ಲ. ಸೋತು ಗೆಲ್ಲಬಹುದು ಅಥವಾ ವೈಫಲ್ಯದಿಂದ ಮುಂದೆ ಸಾಗಬಹುದು. ಹೀಗಾಗಿ ರಿಸ್ಕ್ ತೆಗೆದುಕೊಂಡರೆ ಮಾತ್ರ ಉದ್ಯಮಿಗಳು ಸಾಧಿಸಬಹುದು ಎನ್ನುತ್ತಾರೆ ಮಿತ್ತಲ್.
ಇಂದು, Shaadi.com ಭಾರತದ ಪ್ರಮುಖ ಆನ್‌ಲೈನ್ ವೈವಾಹಿಕ ಸೇವೆಗಳಲ್ಲಿ ಒಂದಾಗಿದೆ, ಸಮುದಾಯ-ನಿರ್ದಿಷ್ಟ ಪ್ಲಾಟ್‌ಫಾರ್ಮ್‌ಗಳಾದ TamilShaadi.com, TeluguShaadi.com, ಮತ್ತು BengalShaadi.com ಇತ್ಯಾದಿಗಳನ್ನು ನೀಡುತ್ತಿದೆ.
Shaadi.com ಸ್ಥಾಪಕರಾಗಿರುವ ಅನುಪಮ್ ಅವರ ಪೋರ್ಟಲ್ 2008 ರಲ್ಲಿ, 10 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು ಮಾತ್ರವಲ್ಲದೇ 1 ಮಿಲಿಯನ್ ಗೂ ಹೆಚ್ಚು ಜನ ಶಾದಿ ಡಾಟ್ ಕಾಮ್ ಮೂಲಕ ವಿವಾಹವಾಗಿದ್ದಾರೆ. ಅಂದು ಇದು ದೇಶದ ಅತಿದೊಡ್ಡ ಮತ್ತು ಜನಪ್ರಿಯ ಪೋರ್ಟಲ್ ಆಗಿ ಮಾರ್ಪಟ್ಟಿತ್ತು. . 27 ವರ್ಷಗಳ ಅವರ ಉದ್ಯಮ ಪ್ರಯಾಣದಲ್ಲಿ, ಭಾರತದ 72 ನಗರಗಳಲ್ಲಿ 123 ವಿವಾಹ ಕೇಂದ್ರಗಳನ್ನು ಮಿತ್ತಲ್ ಆರಂಭಿಸಿದ್ದಾರೆ.


Click it and Unblock the Notifications