ಕಠಿಣ ಪರಿಶ್ರಮ ಹಾಗೂ ದೃಢ ನಂಬಿಕೆಯಿಂದ ಭಾರತೀಯರು ಕೇವಲ ದೇಶದಲ್ಲಿದ್ದುಕೊಂಡೇ ಅಲ್ಲದೆ ವಿದೇಶಿ ನೆಲದಲ್ಲೂ ಯಾವ ರೀತಿಯ ಸಾಧನೆ ತೋರುತ್ತಾರೆ ಎಂಬ ನಮಗೆ ಈಗಾಗಲೇ ತಿಳಿದಿದೆ. ವಿದೇಶಿ ನೆಲದಲ್ಲಿ ಇದ್ದುಕೊಂಡು ಅಗಾಧವಾಗಿ ಬೆಳವಣಿಗೆ ಸಾಧಿಸಿರುವ ಅಥವಾ ಸಾಧಿಸುತ್ತಿರುವ ಭಾರತೀಯರು ಸದ್ಯ ಅಸಂಖ್ಯಾತ ಸಂಖ್ಯೆಯಲ್ಲಿದ್ದಾರೆ. ಸದ್ಯ ನಾವು ಈಗ ಹೇಳಹೊರಟಿರುವ ವ್ಯಕ್ತಿ ಎಂದರೆ ಮಲೇಶ್ಯಾದಲ್ಲಿ ಎಕೆ ಎಂದು ಜನಪ್ರಿಯವಾಗಿರುವ ತಾನ್ ಆನಂದ ಕೃಷ್ಣನ್ ಬಗ್ಗೆ. ಭಾರತೀಯ ಮೂಲದ ಇವರು ಶ್ರೀಮಂತ ವ್ಯಕ್ತಿ. ಅದೂ ಅಲ್ಲದೆ ಮಲೇಶ್ಯಾ ದೇಶದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇನ್ನು ಫೋರ್ಬ್ಸ್ ಪ್ರಕಾರ ಆನಂದ್ ಅವರು ಸುಮಾರು ಬರೊಬ್ಬರಿ 44,000 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಇನ್ನು ಕುತೂಹಲಕಾರಿ ಸಂಗತಿ ಎಂದರೆ ಆನಂದ್ ಅವರು ಸ್ವಂತ ಖಾಸಗಿ ಉಪಗ್ರಹವನ್ನು ಕೂಡ ಹೊಂದಿದ್ದು, ಅವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷ್ಯ ನೀಡಿದೆ. ಆನಂದ್ ಅವರು ಕೇವಲ ತಮ್ಮ ವ್ಯಾಪಾರ ಪರಿಣತಿಗೆ ಮಾತ್ರವಲ್ಲ, ಧಾರ್ಮಿಕ ಚಟುವಟಿಕೆಗಳು ಮತ್ತು ಪರೋಪಕಾರಿಗಳಿಗೆ ಪ್ರಸಿದ್ಧರಾಗಿದ್ದಾರೆ. ತಮ್ಮ ಮ್ಯಾಕ್ಸಿಸ್ ಕಮ್ಯುನಿಕೇಷನ್ಸ್ ಮತ್ತು ಆಸ್ಟ್ರೋ ಕಂಪನಿಗಳ ಮೂಲಕ ದೂರಸಂಪರ್ಕ ಮತ್ತು ಮಲ್ಟಿಮೀಡಿಯಾ ಕ್ಷೇತ್ರಗಳಲ್ಲಿ ಬಿಲಿಯನೇರ್ ಎಂಬ ಹೆಸರು ಗಳಿಸಿದ್ದಾರೆ.
ಆನಂದ್ ಅವರ ಬಗ್ಗೆ
ಆನಂದ್ ಕೃಷ್ಣನ್ ಅವರು ಭಾರತದೊಂದಿಗೆ ನೇರ ಮೂಲವನ್ನು ಹೊಂದಿಲ್ಲದಿದ್ದರೂ ಅವರ ಕುಟುಂಬವು ಭಾರತ ಮೂಲವನ್ನು ಹೊಂದಿದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಅವರ ಅನೇಕ ಸಂಬಂಧಿಕರು ಇನ್ನೂ ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ವ್ಯವಹಾರವು ದೇಶದ ಅನೇಕ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕೂಡ ಹರಡಿದೆ ಎನ್ನಲಾಗಿದೆ. ಆನಂದ ಕೃಷ್ಣನ್ ಅವರು ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾಗಿದ್ದ 'ಏರ್ಸೆಲ್' ನಲ್ಲಿ 7 ಬಿಲಿಯನ್ ಡಾಲರ್, ಅಂದರೆ ಸುಮಾರು 700 ಕೋಟಿ ರೂ. ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಸದ್ಯ ಏರ್‌ಸೆಲ್ ಕಂಪೆನಿಯನ್ನು ಮುಚ್ಚಿ, ಸ್ವಾಧೀನಪಡಿಸಿಕೊಳ್ಳಲಾಗಿದೆ. ಭಾರತೀಯ ಮೂಲದ ಉದ್ಯಮಿ 90 ರ ದಶಕದ ಆರಂಭದಲ್ಲಿ ತಮ್ಮ ಬಹುಕೋಟಿ ಉದ್ಯಮವನ್ನು ಆರಂಭಿಸಿದ್ದರು. ಈ ಹಂತದಲ್ಲಿ ಅವರು ಮ್ಯಾಕ್ಸಿಸ್ ಕಮ್ಯುನಿಕೇಶನ್ಸ್, MEASAT ಬ್ರಾಡ್‌ಕಾಸ್ಟ್ ನೆಟ್‌ವರ್ಕ್ ಸಿಸ್ಟಮ್ಸ್ ಮತ್ತು SES ವರ್ಲ್ಡ್ ಸ್ಕೈಸ್‌ನ ಪ್ರಾರಂಭಿಸಿ ಉದ್ಯಮಕ್ಕೆ ಮುಂದಡಿ ಇಟ್ಟರು. ದೂರಸಂಪರ್ಕ ಕ್ಷೇತ್ರದಲ್ಲಿ ಗಮನಾರ್ಹ ಹೆಸರುಗಳಲ್ಲಿ ಒಂದಾದ ಕೃಷ್ಣನ್ ಇಂದು ಇತರೆ ದೇಶಗಳಲ್ಲೂ ಹಲವಾರು ವ್ಯವಹಾರಗಳನ್ನು ಹೊಂದಿದ್ದಾರೆ. ಈ ಕಂಪೆನಿ ಸದ್ಯ USA ಟ್ಯಾಗಸ್ ಮತ್ತು ಮಾಧ್ಯಮ ಮತ್ತು ಮನರಂಜನಾ ಕಂಪನಿ ಆಸ್ಟ್ರೋ ಮಲೇಷ್ಯಾ ಹೋಲ್ಡಿಂಗ್ಸ್ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ.

ಸ್ವಯಂ ನಿರ್ಮಿತ ಕೋಟ್ಯಾಧಿಪತಿ
ಬಹುತೇಕ ಹೆಚ್ಚಿನ ಮಂದಿ ತಮ್ಮ ಪೂರ್ವಜರಿಂದ ಪಡೆದ ಆಸ್ತಿಯಿಂದ ಬಹುಕೋಟಿ ಉದ್ಯಮಿಗಳಾಗಿ ಗುರುತಿಸಿಕೊಂಡವರಾಗಿದ್ದಾರೆ. ಅಂದರೆ ಹೆಚ್ಚಿನವರು ಹುಟ್ಟಿನಿಂದಲೇ ಬೆಳ್ಳಿಯ ಚಮಚವನ್ನು ಬಾಯಿಯಲ್ಲಿ ಇಟ್ಟು ಹುಟ್ಟಿದವರು. ಆದರೆ ಆನಂದ್ ಕೃಷ್ಣನ್ ಮಾತ್ರ ಇದಕ್ಕೆ ವ್ಯತಿರಿಕ್ತರಾಗಿದ್ದಾರೆ. ಇನ್ನೂ ಹೆಚ್ಚಿನ ಅರ್ಥದಲ್ಲಿ ಹೇಳುವುದಾದರೆ ಆನಂದ್ ಅವರು ತಮ್ಮ ಸ್ವಂತ ಪರಿಶ್ರಮ ಹಾಗೂ ಬುದ್ದಿಶಕ್ತಿಯಿಂದಲೇ ಎಲ್ಲಾ ಆಸ್ತಿಗಳನ್ನು ಸ್ವಯಂ ಸಂಪಾದಿಸಿಕೊಂಡವರಾಗಿದ್ದಾರೆ. ಆರಂಭದಲ್ಲಿ ಆನಂದ್ ಅವರು MAI Holdings Sdn Bhd ಎಂಬ ಸಲಹಾ ಸಂಸ್ಥೆಯನ್ನು ನಿರ್ಮಿಸುವ ಮೂಲಕ ಅವರು ತಮ್ಮ ಉದ್ಯಮಶೀಲತೆಯ ಪ್ರಯಾಣ ಪ್ರಾರಂಭಿಸಿದರು. ಈ ಉದ್ಯಮದಲ್ಲ ಅವರು ಅಪಾರ ಯಶಸ್ಸು ಪಡೆದುಕೊಂಡ ಹಿನ್ನಲೆಯಲ್ಲಿ ಎಕ್ಸಾಯ್ಲ್ ಟ್ರೇಡಿಂಗ್ ಮೂಲಕ ತೈಲ ಕೊರೆಯುವಿಕೆಯಂತಹ ವಿವಿಧ ಕ್ಷೇತ್ರಗಳಲ್ಲಿ ಆನಂದ್ ಅವರು ತಮ್ಮ ಅಗಾಧ ಪ್ರಮಾಣದ ಉದ್ಯಮವನ್ನು ವಿಸ್ತರಿಸಿಕೊಂಡರು. ಈ ಮೂಲಕ ಆನಂದ್ ಅವರು ಅದರ ಮೂಲಕ ಕೃಷ್ಣನ್ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಗಮನಾರ್ಹ ಖ್ಯಾತಿ ಹಾಗೂ ಜನಮನ್ನಣೆಯನ್ನು ಗಳಿಸಿದರು. ಬಳಿಕ ಅವರು ವ್ಯಾಪಾರ ಜಗತ್ತಿನಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಲು ನಿರ್ಧರಿಸಿ, ದೂರಸಂಪರ್ಕ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟು ತಮ್ಮ ತಾಕತ್ತು ಪ್ರದರ್ಶಿಸಿದರು. ಈ ಮೂಲಕ ಒಂದಿಲ್ಲೊಂದು ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆನಂದ್ ಅವರು ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಹೆಸರನ್ನು ಕೂಡ ಬೆಳಗಿಸುತ್ತಿದ್ದಾರೆ.


Click it and Unblock the Notifications