ಕೆಎಸ್‌ಆರ್‌ಟಿಸಿ ಫ್ಲೈಬಸ್ (KSRTC Flybus) ಅಂದತೆ ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ವಿಶೇಷ ಲಕ್ಷುರಿ ಬಸ್ ಸೇವೆಯಾಗಿದೆ. ಇಂದು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಕರ್ನಾಟಕದ ಹಲವು ಜಿಲ್ಲೆಗಳ ನಡುವೆ ಸಂಪರ್ಕ ಹೊಂದಿದೆ. ಇದೀಗ ಕೆಎಸ್‌ಆರ್‌ಟಿಸಿ ಫ್ಲೈಬಸ್ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bengaluru Airport) ಬರುವವರಿಗೆ ಗುಡ್ ನ್ಯೂಸ್ ಒಂದಿದೆ. ಕೆಸ್‌ಆರ್‌ಟಿಸಿ ಪ್ರಯಾಣಿಕರಿಗಾಗಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಹೌದು, ಇನ್ಮುಂದೆ ಕೆಸ್‌ಆರ್‌ಟಿಸಿ ಫ್ಲೈಬಸ್ ಮೂಲಕ ಪ್ರಯಾಣಿಸುವವರಿಗೆ ಉಚಿತವಾಗಿ ಉಪಾಹಾರ ಕಿಟ್ ಸಿಗಲಿದೆ. ಅದೂ ಕೂಡ ನಂದಿನಿ ಉತ್ಪನ್ನಗಳನ್ನೊಳಗೊಂಡ ಲಘು ಉಪಾಹಾರ ಕಿಟ್ ಫ್ರೀಯಾಗಿ ಸಿಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ ಇದಾಗಿದೆ.
ಹೊಸ ಯೋಜನೆಗೆ ಇಂದು ಚಾಲನೆ:
ಇನ್ನು ಈ ಉಚಿತ ಉಪಾಹಾರ ಕಿಟ್ ನೀಡುವ ಸೌಲಭ್ಯಕ್ಕೆಂದು ಇಂದು (ನ.12) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಅಲ್ಲಿಂದ ಬೇರೆಡೆಗೆ ಪ್ರಯಾಣಿಸುವ ಪ್ರಯಾಣಿಕರು ಆರಾಮಾದಾಯಕ ಪ್ರಯಾಣ ಅನುಭವವನ್ನು ಪಡೆಯಬಹುದು.
ಕೆಎಸ್‌ಆರ್‌ಟಿಸಿಯಿಂದ ಹೊಸ ಯೋಜನೆ!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಫ್ಲೈಬಸ್ ವಿಮಾನ ನಿಲ್ದಾಣ ಸೇವೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಆರಂಭಿಸಿದೆ. ಈ ಮೂಲಕ ಇನ್ಮೇಲೆ ಫ್ಲೈಬಸ್ ಪ್ರಯಾಣಿಕರು ಕರ್ನಾಟಕ ಹಾಲು ಒಕ್ಕೂಟದ ಪ್ರಮುಖ ಬ್ರ್ಯಾಂಡ್ ಆದ ನಂದಿನಿ ಉತ್ಪನ್ನಗಳನ್ನೊಳಗೊಂಡ ಉಚಿತ ಲಘು ಉಪಾಹಾರ ಕಿಟ್‌ಗಳನ್ನು ಪಡೆಯಬಹುದು.
ಸುಗಮ ಸಂಚಾರ, ಬ್ರ್ಯಾಂಡ್ ಪ್ರಚಾರ:
ಇನ್ನು ಕೆಎಸ್‌ಆರ್‌ಟಿಸಿ ಫ್ಲೈಬಸ್‌ನ ಈ ಹೊಸ ಯೋಜನೆ ಪ್ರಯಾಣಿಕರಿಗೆ ಸುಗಮ ಸಂಚಾರದ ಅನುಕೂಲವನ್ನು ನೀಡುವುದಲ್ಲದೇ, ದೇಶವಿದೇಶಗಳಲ್ಲಿ ಗುರುತಿಸಿಕೊಂಡಿರುವ ರಾಜ್ಯದ ಜನಪ್ರಿಯ ನಂದಿನಿ ಬ್ರ್ಯಾಂಡ್ ಮತ್ತಷ್ಟು ಪ್ರಚಾರ ಪಡೆಯಲಿದೆ. ಅಲ್ಲದೇ ಈ ಮೂಲಕ ನಂದಿನಿ ಉತ್ಪನ್ನಗಳನ್ನು ಮತ್ತಷ್ಟು ಹೆಚ್ಚಿನ ಜನರಿಗೆ ಪರಿಚಯಿಸಲು ಉತ್ತಮ ಅವಕಾಶ ಇದು ಕಲ್ಪಿಸಲಿದೆ.
ಫ್ಲೈಬಸ್ ಸಂಚಾರ ಎಲ್ಲೆಲ್ಲಿ?
ಕೆಎಸ್‌ಆರ್‌ಟಿಸಿ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಫ್ಲೈಬಸ್ ಸೇವೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೈಸೂರು, ಮಂಗಳೂರು, ಮಡಿಕೇರಿ, ಮಣಿಪಾಲ, ಉಡುಪಿ, ಮತ್ತು ಕುಂದಾಪುರ ಸೇರಿದಂತೆ ಕರ್ನಾಟಕದ ಹಲವಾರು ಪ್ರಮುಖ ನಗರಗಳೊಂದಿಗೆ ಸಂಪರ್ಕಿಸಲಿದೆ. ಈ ಮೂಲಕ ಪ್ರಯಾಣಿಕರು ಆಯಾ ನಗರಗಳಿಗೆ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.
ಇನ್ನು ಲಘು ಉಪಾಹಾರ ಕಿಟ್ ನೀಡುವ ಮುನ್ನ ಹಿಂದೊಮ್ಮೆ ಕೆಎಸ್‌ಆರ್‌ಟಿಟಿ ತನ್ನ ಪ್ರೀಮಿಯಂ ಬಸ್‌ಗಳಲ್ಲಿ ಬಾಟಲ್ ನೀರನ್ನು ಪ್ರಯಾಣಿಕರಿಗೆ ಉಚಿತವಾಗಿ ನೀಡುತ್ತಿತ್ತು. ಆದ್ರೆ 2019ರ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಸಂಬಂಧಿಸಿ ಮಹತ್ವದ ಕ್ರಮ ಕೈಗೊಳ್ಳಲಾಯಿತು. ಈ ಪ್ರಕಾರ ಸುರಕ್ಷತೆ, ಸ್ವಚ್ಛತೆಯ ದೃಷ್ಟಿಯಿಂದ ಏಕ-ಬಳಕೆಯ ಪ್ಲಾಸ್ಟಿಕ್ ಬಾಟಲಿಗಳನ್ನು ನೀಡುವುದನ್ನು ನಿಲ್ಲಿಸಲಾಯಿತು.
ಹೊಸ ಫ್ಲೈಬಸ್ ಸೇವೆಗೆ ಚಾಲನೆ
ಇಂದು (ನ.12) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು, ಲಘು ಉಪಾಹಾರ ಕಿಟ್ ಯೋಜನೆಗೆ ಚಾಲನೆ ನೀಡುವುದಲ್ಲದೇ, ದಾವಣಗೆರೆಯಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಫ್ಲೈಬಸ್ ಸೇವೆಗೂ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications