ಕೊರೊನಾವೈರಸ್ ಹಾವಳಿ ದೇಶದಲ್ಲಿ ನಿಲ್ಲುತ್ತಿಲ್ಲವಾದ್ದರೂ ಕೇಂದ್ರ ಗೃಹ ಸಚಿವಾಲಯವು ಬುಧವಾರ ಮೂರನೇ ಹಂತದ ಅನ್‌ಲಾಕ್ 3.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್ 1ರಿಂದ ಇವು ಜಾರಿಗೆ ಬರಲಿವೆ.
ಕಂಟೈನ್‌ಮೆಂಟ್ ವಲಯಗಳಲ್ಲಿ ಆಗಸ್ಟ್ 31ರವರೆಗೂ ಲಾಕ್‌ಡೌನ್ ಮುಂದುವರಿಯಲಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಇನ್ನಷ್ಟು ಕಠಿಣ ಲಾಕ್‌ಡೌನ್ ಜಾರಿಗೊಳಿಸುವ ಅಥವಾ ತೆರವುಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಕ್ರೀಡಾ ಚಟುವಟಿಕೆಗಳು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ, ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಗೃಹ ಸಚಿವಾಲಯವು ಅನ್‌ಲಾಕ್-3 ಕುರಿತ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೊನಾ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆಗಸ್ಟ್ ಅಂತ್ಯದವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
‘ರಾತ್ರಿ ಕರ್ಫ್ಯೂ’ ರದ್ದುಪಡಿಸಲಾಗಿದೆ.
ಸೋಂಕು ಪಸರಿಸದಂತೆ ತಡೆಯುವ ಸಲುವಾಗಿ ಈ ಹಿಂದೆ ಜಾರಿಗೊಳಿಸಿದ್ದ ‘ರಾತ್ರಿ ಕರ್ಫ್ಯೂ' ರದ್ದುಪಡಿಸಲಾಗಿದೆ. ಕಂಟೈನ್‌ಮೆಂಟ್ ವಲಯವನ್ನು ಬಿಟ್ಟು ಉಳಿದೆಡೆ ಆಗಸ್ಟ್ 5ರಿಂದ ಜಿಮ್ ಹಾಗೂ ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಮೆಟ್ರೊ ಇರಲ್ಲ
ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದರ ಮೇಲಿದ್ದ ನಿರ್ಬಂಧ ಮುಂದುವರಿಸಲಾಗಿದೆ. ಹೀಗಾಗಿ ಮೆಟ್ರೊ ರೈಲು ಸೇವೆ, ಚಿತ್ರಮಂದಿರ, ಈಜುಕೊಳಗಳು, ಆಡಿಟೋರಿಯಂ ಹಾಗೂ ಬಾರ್‌ಗಳನ್ನು ತೆರೆಯಲು ಅನುಮತಿ ಕೊಟ್ಟಿಲ್ಲ.
ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ
ವಂದೇ ಭಾರತ್ ಮಿಷನ್ ಅಡಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದೂ ಹೇಳಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಅನುಮತಿ
ಆಗಸ್ಟ್ 15ರಂದು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಒಪ್ಪಿಗೆ ನೀಡಲಾಗಿದೆ. ಈ ವೇಳೆ ಅಂತರ ಕಾಪಾಡಿಕೊಳ್ಳುವುದು, ಮುಖಗವಸು ಧರಿಸುವುದು ಸೇರಿದಂತೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.


Click it and Unblock the Notifications