ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕರ್ನಾಟಕದ ಅತಿ ದೊಡ್ಡ ಸರ್ಕಾರಿ ಬಸ್ ಸೇವಾ ಸಂಸ್ಥೆಯಾಗಿದೆ. ತನ್ನ ಅತ್ಯುನ್ನತ, ದಕ್ಷ ಸೇವೆ ಮೂಲಕ ಭಾರೀ ಜನಪ್ರಿಯತೆಯನ್ನು ಹೊಂದಿದೆ. ಇನ್ನು ರಾಜ್ಯಾದ್ಯಂತ ಮತ್ತು ಹೊರಗಿನ ರಾಜ್ಯಗಳಿಗೆ (ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಇತ್ಯಾದಿ) ಸಾವಿರಾರು ಬಸ್‌ಗಳು ದಿನನಿತ್ಯ ಓಡಾಟ ನಡೆಸುತ್ತಿದೆ. ಇನ್ನು ನಾರ್ಮಲ್, ಸೂಪರ್ ಎಕ್ಸ್‌ಪ್ರೆಸ್, ಸೂಪರ್ ಫಾಸ್ಟ್, ರಾಜಹಂಸ, ವೋಲ್ವೋ, ಅಶ್ವಮೇಧ ಹೀಗೆ ಹಲವು ಬಸ್‌ಗಳು ಸೇವೆ ಸಲ್ಲಿಸುತ್ತಿದೆ. ಇದೀಗ ಈ ಪ್ರಯಾಣಿಕರಿಗಾಗಿ ಕೆಸ್‌ಆರ್‌ಟಿಸಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ವಿಸ್ತರಿಸಿದೆ. ಇದರಿಂದ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಮಾಡಲು ಮತ್ತಷ್ಟು ಸುಲಭವಾಗಲಿದೆ.
ಹಿಂದಿನ ವ್ಯವಸ್ಥೆ:
ಕೆಎಸ್‌ಆರ್‌ಟಿ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕೆಂದರೆ ಹಿಂದೆ ಆನ್‌ಲೈನ್, ಆಫ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಅಂದರೆ ಆನ್ ಲೈನ್‌ನಲ್ಲಿ AWATAR ಆಪ್ ಸಿಸ್ಟಮ್ ಮೂಲಕ ಪ್ರಿ ಟಿಕೆಟ್ ಬುಕಿಂಗ್ ಮಾಡಬಹುದು. ಅಲ್ಲದೇ ಅಧಿಕೃತ ವೆಬ್‌ಸೈಟ್ ksrtc.in ಅಥವಾ ksrtc.in/oprs-web ಮೂಲಕ ಬುಕ್ ಮಾಬಹುದಿತ್ತು. ಡಿಜಿಟಲ್ ಮೂಲಕ ಸೇವೆ ಸಲ್ಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೂ ಬಹಳ ಅನುಕೂಲವಾಗುತ್ತಿತ್ತು.
ಅಲ್ಲದೇ ಆಫ್‌ಲೈನ್‌ನಲ್ಲೂ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿತ್ತು. ಅಂದರೆ ಮೈನ್ ಬಸ್ ಸ್ಟೇಷನ್‌ಗಳಲ್ಲಿ (ಕೆಂಪೇಗೌಡ ಬಸ್ ಸ್ಟೇಷನ್, ಶಾಂತಿನಗರ) ಅಥವಾ ಇತರ ಡಿಪೋಗಳಲ್ಲಿ ನೇರವಾಗಿ ಬುಕ್ ಮಾಡುವ ಅವಕಾಶವಿತ್ತು. ಇನ್ನು ರಾಜ್ಯಾದ್ಯಂತ ಸುಮಾರು 70ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಸ್ವಂತ ಅಥವಾ ಅಧಿಕೃತ ಫ್ರಾಂಚೈಸು ಕೌಂಟರ್‌ಗಳಿವೆ. ಅಲ್ಲಿಯೂ ಕ್ಯಾಶ್ ಅಥವಾ ಕಾರ್ಡ್ ಬಳಸಿ ಟಿಕೆಟ್ ಬುಕ್ ಮಾಡಬಹುದು.
ಕೆಎಸ್‌ಆರ್‌ಟಿಸಿಯಿದ ಹೊಸ ವ್ಯವಸ್ಥೆ:
ಇದೀಗ ಹೊಸ ವ್ಯವಸ್ಥೆಯೊದಿಗೆ ಕೆಎಸ್‌ಆರ್‌ಟಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಆ ಪ್ರಕಾರ ಇನ್ಮೇಲೆ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲೂ ಮುಂಗಡ ಬಸ್ ಟಿಕೆಟ್ ಬುಕಿಂಗ್ ಮಾಡುವ ಸೌಲಭ್ಯ ಇರಲಿದೆ.
ಕೆಎಸ್‌ಆರ್‌ಟಿಸಿ ವೆಬ್‌ಸೈಟ್, ಮೊಬೈಲ್ ಆ್ಯಪ್ ಮತ್ತು ಕೌಂಟರ್‌ಗಳ ಜೊತೆಗೆ, ನಗರದ 161 ಬೆಂಗಳೂರು ಒನ್ ಹಾಗೂ ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿನ 1,021 ಕರ್ನಾಟಕ ಒನ್ ಕೇಂದ್ರಗಳಲ್ಲಿ ಈಗ ಟಿಕೆಟ್ ಬುಕಿಂಗ್ ಸೇವೆ ಲಭ್ಯವಿದೆ.
ಇನ್ನು ಯಾವುದೇ ಸಹಾಯಕ್ಕಾಗಿ, ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕಾಲ್ ಸೆಂಟರ್ 080-26252625 (24x7) ಅನ್ನು ಸಂಪರ್ಕಿಸಬಹುದು. ಕೆಸ್‌ಆರ್‌ಟಿಸಿ ಪ್ರಯಾಣಿಕರ ಹಿತದೃಷ್ಟಿಯಿಂದ ಇದೇ ರೀತಿ ಹಲವು ಕ್ರಮಗಳನ್ನು ಕೈಗೊಳುತ್ತಾ ಇರುತ್ತದೆ. ಸೀಸನ್ ಸಂದರ್ಭದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ, ಬಸ್ ಪಾಸ್ ವ್ಯವಸ್ಥೆ, ಟಿಕೆಟ್ ದರದಲ್ಲಿ ರಿಯಾಯಿತಿ, ವಿಶೇಷ ಬಸ್ ಸೇವೆಗಳು ಹೀಗೆ ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ.


Click it and Unblock the Notifications