2025ರಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ವಿಷಯವೆಂದರೆ ಹಲವು ನಾಯಕರ ದ್ವೇಷ ಭಾಷಣ ಪ್ರಕರಣ. ಧರ್ಮ ವಿರುದ್ಧ, ಪಕ್ಷಗಳ ವಿರುದ್ಧ ದ್ವೇಷ ಭಾಷಣಗಳು ರಾಜ್ಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಅಲ್ಲದೇ ಅದೆಷ್ಟೋ ನಾಯಕರ ವಿರುದ್ಧ ಪ್ರಕರಣಗಳೂ ದಾಖಲಾಗಿದೆ. ಕೆಲವರನ್ನು ಅರೆಸ್ಟ್ ಕೂಡಾ ಮಾಡಲಾಗಿದೆ. ಅದರಲ್ಲೂ ಮಂಗಳೂರಿನಲ್ಲಿ ದ್ವೇಷ ಭಾಷಣಗಳು (Hate Speech Cases) ಕೋಮುಗಲಭೆಗೆ ಕಾರಣವಾಗುತ್ತಿದೆ ಎಂಬ ಕಾರಣದಿಂದ ಕೆಲವರಿಗೆ ಗಡಿಪಾರು ಆದೇಶವನ್ನೂ ನೀಡಲಾಗಿತ್ತು. ಆದ್ರೆ ಇದೀಗ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಇದೀಗ ಕರ್ನಾಟಕ ಸರ್ಕಾರವು 2025ರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದೆ. ಆದರೆ ಸರಕಾರದ ಈ ನಡೆ ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇನ್ನು ದ್ವೇಷ ಹರಡುವ, ಸಾಮಾಜಿಕ ಸಾಮರಸ್ಯ ಕೆಡಿಸುವ ಅಥವಾ ಹಿಂಸೆಗೆ ಪ್ರಚೋದಿಸುವ ಮಾತು-ಕೃತಿಗಳನ್ನು ತಡೆಯುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ.
ಬಿಜೆಪಿಯಿಂದ ಭಾರೀ ವಿರೋಧ!
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ರಾಜ್ಯ ಸರ್ಕಾರದ ಈ ಮಸೂದೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ನಿಖಿಲ್ ಕುಮಾರಸ್ವಾಮಿ, ಕರವೇ ಮುಖ್ಯಸ್ಥ ನಾರಾಯಣ ಗೌಡ ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವದ ಕ್ರಮ
12ನೇ ಶತಮಾನದ ಸುಧಾರಕ ಬಸವಣ್ಣನವರ "ಮಾತು ಮುತ್ತಿನ ಹಾರದಂತಿರಬೇಕು" ಎಂಬ ನುಡಿಯನ್ನು ಉಲ್ಲೇಖಿಸಿದ ಸರ್ಕಾರ, ಇಂದು ಮಾತುಗಳು ವಿಭಜನೆ, ಅಶಾಂತಿ ಕೆರಳಿಸುವ ವಿಷಕಾರಿಯಾಗಿ ಬದಲಾಗಿದೆ ಎಂದು ಹೇಳಿದೆ. ಈ ಪ್ರವೃತ್ತಿ ನಿಯಂತ್ರಿಸಲು, ಮೌಖಿಕ, ಲಿಖಿತ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಸೇರಿದಂತೆ ಎಲ್ಲಾ ರೂಪದ ದ್ವೇಷ ಭಾಷಣಗಳನ್ನು ಈ ಮಸೂದೆ ಅಪರಾಧವನ್ನಾಗಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.
ಹೇಗೆ ಪರಿಗಣಿಸಲಾಗುತ್ತದೆ?
ಧರ್ಮ, ಜನಾಂಗ, ಭಾಷೆ, ಹುಟ್ಟಿದ ಸ್ಥಳ, ಜಾತಿ ಅಥವಾ ಲಿಂಗದ ಆಧಾರದ ಮೇಲೆ ದ್ವೇಷ ಪ್ರಚೋದಿಸುವ ಮಾತು, ಪ್ರಕಟಣೆಗಳನ್ನು ಈ ಕಾನೂನು ದ್ವೇಷ ಭಾಷಣ ಎಂದು ಪರಿಗಣಿಸುತ್ತದೆ. ಇದು ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿ ಉಂಟುಮಾಡುವ ಕೃತಿಗಳನ್ನೂ ಸಹ ಒಳಗೊಂಡಿರುತ್ತದೆ. ಇಂತಹ ವಿಷಯಗಳನ್ನು ಪ್ರಸಾರ, ಪ್ರಕಟಣೆ ಅಥವಾ ಪ್ರಚಾರವು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಪರಾಧಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ, ಹೊಣೆಗಾರಿಕೆಯು ಸಂಬಂಧಪಟ್ಟ ಸಂಸ್ಥೆಗೂ ವಿಸ್ತರಿಸುತ್ತದೆ ಎನ್ನಲಾಗಿದೆ.
ಈ ಮಸೂದೆಯು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದು ಕೇವಲ ಸಾಮಾಜಿಕ ಶಾಂತಿಗಾಗಿ ರೂಪುಗೊಂಡಿದ್ದು, ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಅನ್ವಯವಾಗಲಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಎಚ್ಚರಿಕೆ ವಹಿಸುವಂತೆ ನಾಯಕರು, ಸಂಘಟನೆಗಳು, ವ್ಯಕ್ತಿಗಳಿಗೆ ಸೂಚನೆ ನೀಡಲಾಗಿದೆ.
ದ್ವೇಷ ಭಾಷಣಕ್ಕೆ ಕಠಿಣ ಶಿಕ್ಷೆ:
ಮಂಡನೆಯಾದ ಕಾನೂನಿನಡಿ, ದ್ವೇಷ ಭಾಷಣ ಅಪರಾಧಗಳು ಜಾಮೀನು ರಹಿತ ಎಂದು ಹೇಳಲಾಗಿದೆ. ಮೊದಲ ಬಾರಿಯಾದ್ರೆ ಅಪರಾಧಿಗಳಿಗೆ 1-7 ವರ್ಷಗಳ ಜೈಲು ಶಿಕ್ಷೆ. ಮತ್ತೆ ಅದೇ ತಪ್ಪು ಪುನರಾವರ್ತನೆಯಾದ್ರೆ ಅಪರಾಧಿಗಳಿಗೆ 2-10 ವರ್ಷಗಳವರೆಗೆ ಜೈಲು, ಜೊತೆಗೆ ₹50,000 ರೂ.ನಿಂದ ₹1 ಲಕ್ಷ ದಂಡ ವಿಧಿಸಬಹುದು ಎನ್ನಲಾಗಿದೆ.
ಮಸೂದೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್
ಕಾಂಗ್ರೆಸ್ ಸರ್ಕಾರ ಈ ಮಸೂದೆಯನ್ನು ಸೌಹಾರ್ದತೆ ಕಾಪಾಡುವ ಹೆಜ್ಜೆ ಎಂದು ಸಮರ್ಥಿಸಿದೆ. ಆದರೆ, ಬಿಜೆಪಿ ಇದನ್ನು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದು, ತಮ್ಮ ನಾಯಕರ ವಿರುದ್ಧ ದುರುಪಯೋಗವಾಗಬಹುದು ಎಂದು ಆರೋಪಿಸಿದೆ. ಅಲ್ಲದೇ ಆರ್‌ಎಸ್‌ಎಸ್ ಕೂಡ ಇದೇ ರೀತಿಯ ಕಳವಳ ವ್ಯಕ್ತಪಡಿಸಿದೆ. ಆದರೆ ಮಸೂದೆ ಕುರಿತು ದಿನೇ ದಿನೇ ಚರ್ಚೆ ತೀವ್ರವಾಗುತ್ತಿದೆ.


Click it and Unblock the Notifications