ಬೆಂಗಳೂರು: ವಂದೇ ಭಾರತ್ ರೈಲು (Vande Bharat Train) ಭಾರತದ ಬಹಳ ವೇಗದ, ಭಾರೀ ಬೇಡಿಕೆಯ ರೈಲು ಸೇವೆಯಾಗಿ ಬದಲಾಗಿದೆ. ಈಗಾಗಲೇ ದೇಶದಾದ್ಯಂತ ವಂದೇ ಭಾರತ್ ರೈಲು ಸೇವೆ ಆರಂಭವಾಗಿದೆ. ಒಟ್ಟು 164 ವಂದೇ ಭಾರತ್ ರೈಲುಗಳ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗಷ್ಟೇ ವಂದೇ ಭಾರತ್ ಸ್ಲೀಪರ್ ರೈಲು ಕೂಡಾ ಆರಂಭಿಸಲಾಗಿದೆ. ಇದೀಗ ಬೆಂಗಳೂರು ಮತ್ತು ಗೋವಾ (Bengaluru to Goa) ನಡುವಿನ ಸಂಪರ್ಕವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದೆ.

ಹೌದು, ಬೆಂಗಳೂರು ಮತ್ತು ಗೋವಾ ನಡುವಿನ ಪ್ರಯಾಣ ಇನ್ಮೇಲೆ ಮತ್ತಷ್ಟು ವೇಗ ಪಡೆಯಲಿದೆ. ಎರಡು ಸ್ಥಳಗಳ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ ಎಂದು ವರದಿಯಾಗಿದೆ.
ಬೆಂಗಳೂರು-ಕರಾವಳಿ-ಗೋವಾ ನಡುವೆ ವಂದೇ ಭಾರತ್!
ಭಾರತೀಯ ರೈಲ್ವೇಯು ಬೆಂಗಳೂರು ಮತ್ತ ಗೋವಾ ನಡುವೆ ವೇಗದ ಪ್ರಯಾಣಕ್ಕಾಗಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಲು ಮುಂದಾಗಿದೆ. ಇದು ಯಶವಂತಪುರದಿಂದ (ಬೆಂಗಳೂರು) ಮಡಗಾಂವ್‌ಗೆ (ಗೋವಾ) ಸಂಪರ್ಕಿಸಲಿದ್ದು, ಶೀಘ್ರವೇ ಆರಂಭವಾಗುವ ನಿರೀಕ್ಷೆಯಿದೆ. ಒಂದು ವೇಳೆ ಈ ರೈಲು ಬಂದರೆ, ನಂತರ ಬೆಂಗಳೂರಿನಿಂದ ಗೋವಾಗೆ ಕೇವಲ 13 ಗಂಟೆಗಳಲ್ಲಿ ಪ್ರಯಾಣ ಮಾಡಬಹುದು ಎಂದು ಹೇಳಲಾಗಿದೆ.
ಸಂಭಾವ್ಯ ಮಾರ್ಗಗಳು:
ವರದಿಗಳ ಪ್ರಕಾರ, ಈ ಹೊಸ ವಂದೇ ಭಾರತ್ ರೈಲು, ಬೆಂಗಳೂರಿನಿಂದ ಹೊರಟರೆ, ಮಂಗಳೂರಿನ ಕೆಲವು ರೈಲ್ವೇ ಸ್ಟೇಷನ್‌ಗಳ ಮೂಲಕ ಗೋವಾದ ಮಡಗಾಂವ್‌ಗೆ ಪ್ರಯಾಣಿಸಲಿದೆ. ನಿರೀಕ್ಷೆಯ ವೇಳಾಪಟ್ಟಿ ಪ್ರಕಾರ, ರೈಲು ಯಶವಂತಪುರದಿಂದ ಬೆಳಿಗ್ಗೆ 6:05 ಕ್ಕೆ ಹೊರಟು, ಸಂಜೆ 7:15 ಕ್ಕೆ ಮಡಗಾಂವ್ ತಲುಪಲಿದೆ. ಅದೇ ರೈಲು ಮರುದಿನ ಬೆಳಿಗ್ಗೆ 5:30 ಕ್ಕೆ ಹೊರಟು, ಮರಳಿ ಸಂಜೆ ಯಶವಂತಪುರಗೆ ಸಂಜೆ 6:40 ಕ್ಕೆ ತಲುಪಲಿದೆ ಎಂದು ಹೇಳಲಾಗಿದೆ.
ಸದ್ಯ ಭಾರೀ ಚರ್ಚೆಯಲ್ಲಿರುವ ಸಂಗತಿಯೆಂದರೆ, ಈ ರೈಲು ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳಿಗೆ ಹೋಗುವುದಿಲ್ಲ ಎಂಬುದು. ಬದಲಾಗಿ ಈ ರೈಲು ಪಡೀಲ್ ಬೈಪಾಸ್ ಮೂಲಕ ಸಂಚಾರ ಮಾಡಲಿದೆ. ಅದೇ ಕಾರಣದಿಂದ ಮುಂಬರುವ ವಂದೇ ಭಾರತ್ ರೈಲಿನ ಬಗ್ಗೆ ಭಾರೀ ಗೊಂದಲ ಸೃಷ್ಟಿಯಾಗಿದೆ. ಇನ್ನು ಚಿಕ್ಕ ಬಾಣಾವರ ಮತ್ತು ಹಾಸನ್ ನಡುವಿನ ವೇಗವನ್ನು ಗಂಟೆಗೆ 110 ಕಿ.ಮೀನಿಂದ 130 ಕಿ.ಮೀಗೆ ಹೆಚ್ಚಿಸಲು ಇಲಾಖೆ ಪ್ರಸ್ತಾಪಿಸಿದೆ. ಅಲ್ಲದೇ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ವೇಗವನ್ನು ಗಂಟೆಗೆ 30 ಕಿ.ಮೀ ನಿಂದ 40 ಕಿ.ಮೀಗೆ ಹೆಚ್ಚಿಸಲು ನೈಋತ್ಯ ರೈಲ್ವೇ ಸೂಚನೆ ನೀಡಿದೆ.
ಇತ್ತೀಚೆಗಷ್ಟೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ್ ಸೇವೆಯ ಯೋಜನೆಗಳ ಬಗ್ಗೆ ಘೋಷಣೆ ಮಾಡಿದ್ದಾರೆ ಎಂದು ನೈಋತ್ಯ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಈ ಘೋಷಣೆಯ ಬೆನ್ನಲ್ಲೇ, ರೈಲ್ವೇ ಸಚಿವಾಲಯವು ಪ್ರಸ್ತಾವನೆ ನಡೆಸುತ್ತಿದ್ದು, ಮಂಡಳಿಯ ಅನುಮತಿಗಾಗಿ ಕಾಯುತ್ತಿದೆ. ಒಂದು ವೇಳೆ ಈ ರೈಲು ಸೇವೆ ಆರಂಭವಾದರೆ, ಪ್ರಯಾಣಿಕರಿಗೂ ಭಾರೀ ಅನುಕೂಲವಾಗಲಿದೆ.


Click it and Unblock the Notifications