ರಜೆ ಸಿಕ್ಕರೆ ಸಾಕು ಹೆಚ್ಚಿನವರು ಎಲ್ಲಿಗೆ ಹೋಗೋದು ಅಂತಾನೇ ಪ್ಲಾನ್ ಮಾಡುತ್ತಿರುತ್ತಾರೆ. ಆದ್ರೆ ಇದೀಗ ಭಾರತೀಯ ರೈಲ್ವೇ ಟೂರಿಸಂ ಪ್ಯಾಕೇಜ್‌ವೊಂದನ್ನು (Tourism Package) ಬಿಡುಗಡೆ ಮಾಡಿದೆ. ಈ ಮೂಲಕ ಪ್ರಾಚೀನ ದೇವಾಲಯಗಳ ಆಧ್ಯಾತ್ಮಿಕ ಅನುಭವವನ್ನು ಪಡೆಯಬಹುದಾಗಿದೆ. ಇಂತಹ ಸುಂದರ ಅನುಭವವನ್ನು ಸಂಪೂರ್ಣವಾಗಿ ಪಡೆಯಲು, ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ಭಾರತ್ ಗೌರವ್ ಟೂರಿಸ್ಟ್ ರೈಲು ಯೋಜನೆಯಡಿಯಲ್ಲಿ ವಿಶೇಷ ಧಾರ್ಮಿಕ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಬೇಕು ಅಂದುಕೊಂಡವರಿಗೆ ಇದು ಉತ್ತಮ ಸಮಯ.

9 ದಿನ ರಜಾ-ಮಜಾ:
ಭಾರತೀಯ ರೈಲ್ವೇ ಕೈಗೊಂಡಿರುವ ಈ ಪ್ರವಾಸವು ದಕ್ಷಿಣ ಭಾರತದ ಅತ್ಯಂತ ಪ್ರಾಚೀನ, ಜನಪ್ರಿಯ ದೇವಾಲಯಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಕೇವಲ ಪ್ರಯಾಣ ಅನುಭವ ನೀಡುವುದಲ್ಲದೇ, ಆಳವಾದ ಆಧ್ಯಾತ್ಮಿಕ ಅನುಭವವನ್ನೂ ನೀಡಲಿದೆ. ನವೆಂಬರ್ 7, 2025 ರಂದು ಪ್ರಾರಂಭವಾಗಿ, ನವೆಂಬರ್ 16 ರಂದು ಕೊನೆಗೊಳ್ಳುವ ಈ 9 ರಾತ್ರಿ, 10 ದಿನಗಳ ಪ್ರವಾಸವು ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.
ರಾಮೇಶ್ವರಂ-ತಿರುಪತಿ ದಕ್ಷಿಣ ದರ್ಶನ ಯಾತ್ರೆಯ ಮಾರ್ಗ ಮತ್ತು ವಿವರ:
ಇನ್ನು ಈ ಪ್ರವಾಸವು ಆಂಧ್ರಪ್ರದೇಶದ ತಿರುಪತಿಯಲ್ಲಿ ಪ್ರಾರಂಭವಾಗಿ, ವಿಶ್ವವಿಖ್ಯಾತ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅಷ್ಟೇ ಅಲ್ಲದೇ ಇಲ್ಲಿನ ಪದ್ಮಾವತಿ ದೇವಾಲಯವೂ ತನ್ನ ಸೌಂದರ್ಯ, ಆಧ್ಯಾತ್ಮಿಕತೆಗೆ ಮತ್ತು ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಯಾತ್ರಾರ್ಥಿಗಳು ಈ ದೇವಾಲಯಕ್ಕೂ ಭೇಟಿ ನೀಡಬಹುದು.
ಅದಾದ ನಂತರ ಭಾರತದ ನಾಲ್ಕು ಪವಿತ್ರ ಚಾರ್ ಧಾಮ್‌ಗಳಲ್ಲಿ ಒಂದಾದ ರಾಮೇಶ್ವರಂಗೂ ಪ್ರವಾಸ ಕೈಗೊಳ್ಳಲಿದೆ. ಇಲ್ಲಿ ಭಕ್ತರು ಶಿವನಿಗೆ ಸಮರ್ಪಿತವಾದ ರಾಮನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬಹುದು ಮತ್ತು ರಾಮಾಯಣದ ದಂತಕಥೆಗಳಿಂದ ತುಂಬಿರುವ ಧನುಷ್ಕೋಡಿಯ ಬಗ್ಗೆ ತಿಳಿಯಬಹುದು.
ನಂತರ, ರೈಲು ತಮಿಳುನಾಡಿನ ಸಾಂಸ್ಕೃತಿಕ ನಗರಿಯೆಂದು ಗುರುತಿಸಿಕೊಂಡಿರುವ ಮಧುರೈ ಕಡೆಗೆ ಸಾಗುತ್ತದೆ. ಇಲ್ಲಿನ ಮೀನಾಕ್ಷಿ ಅಮ್ಮನವರ ದೇವಾಲಯವು ತನ್ನ ಎತ್ತರದ ಗೋಪುರಗಳು ಮತ್ತು ವಾಸ್ತುಶಿಲ್ಪಗಳಿಗೆ ತುಂಬಾನೇ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಭವ್ಯ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯ ಆಧ್ಯಾತ್ಮಿಕ ಶಕ್ತಿಯನ್ನು ಜನರಲ್ಲಿ ಮೂಡಿಸುತ್ತದೆ.
ಆ ನಂತರ ಈ ಪ್ರಯಾಣವೂ ಕನ್ಯಾಕುಮಾರಿಗೆ ಸಾಗಲಿದ್ದು, ಅಲ್ಲಿ ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಗಳ ಸಂಗಮಕ್ಕೆ ಭೇಟಿ ನೀಡಲಿದೆ. ಪ್ರವಾಸಿಗರು ದೈವಿಕ ಶಕ್ತಿ ಮತ್ತು ವಿಹಂಗಮ ಕರಾವಳಿ ನೋಟಗಳಿಗೆ ಹೆಸರುವಾಸಿಯಾದ ಕನ್ಯಾಕುಮಾರಿ ದೇವಾಲಯಕ್ಕೂ ಭೇಟಿ ನೀಡಬಹುದು.
ಅಷ್ಟೆಲ್ಲಾ ತಿರುಗಾಟ ನಡೆಸಿದ ನಂತರ ಅಂತಿಮ ನಿಲುಗಡೆ ಕೇರಳದ ರಾಜಧಾನಿ ತಿರುವನಂತಪುರಂ. ಇಲ್ಲಿ, ಭಕ್ತರು ಪದ್ಮನಾಭಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ತೀರ್ಥಕ್ಷೇತ್ರಗಳ ಭೇಟಿ ನಂತರ ತಾಳೆ ಮರಗಳಿಂದ ಆವೃತವಾದ ಕಡಲತೀರಗಳು ಮತ್ತು ಸೂರ್ಯಾಸ್ತದ ವೀಕ್ಷಣೆಗಳಿಗೆ ಹೆಸರುವಾಸಿಯಾದ ಕೋವಲಂ ಬೀಚ್‌ನ ಸೌಂದರ್ಯವನ್ನು ವೀಕ್ಷಿಸುತ್ತಾ, ವಿಶ್ರಾಂತಿ ಪಡೆಯಬಹುದು.
ಪ್ರಯಾಣದ ಅವಧಿ ಮತ್ತು ದಿನಾಂಕಗಳು:
ಈ ಯಾತ್ರೆಯು 9 ರಾತ್ರಿಗಳು ಮತ್ತು 10 ದಿನಗಳ ಅವಧಿಯನ್ನು ಹೊಂದಿದ್ದು, ನವೆಂಬರ್ 7, 2025 ರಂದು ಪ್ರಾರಂಭವಾಗಿ, ನವೆಂಬರ್ 16, 2025 ರಂದು ಕೊನೆಗೊಳ್ಳುತ್ತದೆ. ಯಾತ್ರೆಯು ತಿರುಪತಿಯಿಂದ ಪ್ರಾರಂಭವಾಗುತ್ತದೆ. ಇನ್ನು 10 ದಿನಗಳ ಪ್ರಯಾಣಕ್ಕಾಗಿ ಈ ಪ್ರವಾಸವನ್ನು ಆರೋಗ್ಯದ ದೃಷ್ಟಿಯಿಂದ, ಸುರಕ್ಷತೆಯಿಂದ ದೃಷ್ಟಿಯಿಂದ ಬಹಳ ಎಚ್ಚರಿಕೆಯಿಂದ ಪ್ಲಾನ್ ಮಾಡಲಾಗಿದೆ.
ವೆಚ್ಚ ಎಷ್ಟು?
IRCTC ಈ ಯಾತ್ರೆಯನ್ನು ವಿವಿಧ ಬಜೆಟ್‌ಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ತೆಗೆದುಕೊಳ್ಳಬಹುದು ಎನ್ನಲಾಗಿದೆ. ವಯಸ್ಕರಿಗೆ ಸ್ಲೀಪರ್ ಕ್ಲಾಸ್‌ಗೆ ರೂ. 18,040, 3AC ಗೆ ರೂ.30,370, ಮತ್ತು 2AC ಗೆ ರೂ. 40,240 ದರ ನಿಗದಿಪಡಿಸಲಾಗಿದೆ. 5-11 ವರ್ಷ ವಯಸ್ಸಿನ ಮಕ್ಕಳಿಗೆ ಸ್ಲೀಪರ್ ಕ್ಲಾಸ್‌ಗೆ ರೂ. 16,890, 3AC ಗೆ ರೂ. 29,010, ಮತ್ತು 2AC ಗೆ ರೂ. 38,610 ನಿಗದಿಪಡಿಸಲಾಗಿದೆ.
ಇನ್ನು ಈ ಒಂದೇ ಶುಲ್ಕದಲ್ಲಿ ಪ್ರವಾಸಿಗರು ರೈಲು ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಶುಲ್ಕವನ್ನು ಒಳಗೊಂಡಿದೆ.
ಈ ಪ್ಯಾಕೇಜ್‌ನಲ್ಲಿ ಬಹು ರಾಜ್ಯಗಳಲ್ಲಿ, ಆರಾಮದಾಯಕ ರೈಲು ಪ್ರಯಾಣ, ಶುದ್ಧ ಮತ್ತು ಪರಿಶೀಲಿಸಿದ ಹೋಟೆಲ್‌ಗಳ ಜೊತೆಗೆ ವಸತಿ, ಪ್ರವಾಸದುದ್ದಕ್ಕೂ ಶುದ್ಧ ಸಸ್ಯಾಹಾರಿ ಊಟದ ಸೌಲಭ್ಯ ಸಿಗಲಿದೆ.
ಬುಕ್ ಮಾಡುವುದು ಹೇಗೆ?
ಬುಕಿಂಗ್‌ಗಳನ್ನು IRCTC ಟೂರಿಸಂ ವೆಬ್‌ಸೈಟ್ ಮೂಲಕ ಅಥವಾ ಅಧಿಕೃತ IRCTC ಆಫೀಶಿಯಲ್ ಕಚೇರಿಗಳ ಮೂಲಕ ನೇರವಾಗಿ ಮಾಡಬಹುದು. ಭಾರತ್ ಗೌರವ್ ಟೂರಿಸ್ಟ್ ರೈಲುಗಳ ಜನಪ್ರಿಯತೆಯಿಂದಾಗಿ ಕೆಲವೇ ದಿನಗಳಲ್ಲಿ ಇದು ಬುಕ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications