ಬೆಂಗಳೂರು, ಜುಲೈ 5: ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಅಗತ್ಯವಿರುವ ಭೂಮಿ ಮತ್ತು ಎಲ್ಲಾ ಅನುಮತಿಗಳನ್ನು ನೀಡಿ ಹಸ್ತಾಂತರಿಸಲು ಕ್ರಮಕೈಗೊಂಡರೆ ರಾಜ್ಯದಲ್ಲಿ ಬಾಕಿ ಉಳಿದಿರುವ ಎಲ್ಲಾ ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರದಿಂದ ಒಂದು ತಿಂಗಳೊಳಗೆ 2 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಸಿದ್ಧ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವರ ನಿಯೋಗ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಗಡ್ಕರಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪೂರ್ವಾಗ್ರಹಗಳಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಬದ್ಧವಾಗಿದೆ. ಬಿಜೆಪಿಯ ಸಿದ್ಧಾಂತವು 'ಸರ್ವೇ ಜನಾಃ ಸುಖಿನೋ ಭವಂತು' ಪರಿಕಲ್ಪನೆಯನ್ನು ಆಧರಿಸಿದೆ. ಕಳೆದ 10 ವರ್ಷಗಳಲ್ಲಿ ನಾವು ಆರಂಭಿಸಿದ ಯೋಜನೆಗಳೇ ಇದಕ್ಕೆ ಸಾಕ್ಷಿ ಎಂದರು.
ವರ್ತುಲ ರಸ್ತೆ, ಎಕ್ಸ್‌ಪ್ರೆಸ್‌ವೇ:
ಬೆಂಗಳೂರು ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸುವ 17,000 ಕೋಟಿ ರೂ ವೆಚ್ಚದ ವರ್ತುಲ ರಸ್ತೆ ಯೋಜನೆಯ ಕಾಮಗಾರಿಗಳು ಡಿಸೆಂಬರ್ 2024 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಮತ್ತು ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದ್ದು, ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿ ಅವರಿಂದ ಉದ್ಘಾಟನೆಗೊಳ್ಳಲಿದೆ" ಎಂದು ಅವರು ಹೇಳಿದರು.
ನದಿ ಜೋಡಣೆ ಯೋಜನೆ:
ಈ ಹಿಂದೆ ಕೇಂದ್ರ ಸಚಿವರಾಗಿ ಜಲಶಕ್ತಿ (ಜಲಸಂಪನ್ಮೂಲ) ಖಾತೆಯನ್ನು ಹೊಂದಿದ್ದಾಗ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ನೀರಿನ ಬಿಕ್ಕಟ್ಟನ್ನು ಪರಿಹರಿಸಬಹುದಾದ ಗೋದಾವರಿ-ಪೆನ್ನಾರ್-ಕೃಷ್ಣ-ಕಾವೇರಿ ನದಿ ಜೋಡಣೆ ಯೋಜನೆಯನ್ನು ಜಾರಿಗೆ ತರಲು ಶ್ರಮಿಸಿದ್ದರು ಎಂದು ಗಡ್ಕರಿ ಹೇಳಿದರು.
"ವಿವರವಾದ ಯೋಜನಾ ವರದಿಯನ್ನು ಸಹ ಪೂರ್ಣಗೊಳಿಸಲಾಗಿದೆ, ಆದರೆ ಅದನ್ನು ಅನುಸರಿಸಲಾಗಿಲ್ಲ. ಗೋದಾವರಿಯಿಂದ ಸುಮಾರು 1,300 ಟಿಎಂಸಿ ಅಡಿ ನೀರು ಸಮುದ್ರಕ್ಕೆ ಹೋಗುವುದರಿಂದ ಇದು ಅತ್ಯಂತ ಕಾರ್ಯಸಾಧ್ಯವಾದ ನದಿ ಜೋಡಣೆ ಯೋಜನೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.


Click it and Unblock the Notifications