ಗಜ ಆಲ್ಟರ್‌ನೇಟಿವ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಗುರುವಾರ ಎರಡನೇ ದಿನದ ಬಿಡ್ಡಿಂಗ್‌ಗೆ ಕಾಲಿಟ್ಟಿದೆ. ಒಟ್ಟು ರೂ. 550 ಕೋಟಿ ಮೌಲ್ಯದ ಈ ಐಪಿಒಗೆ ಮೊದಲ ದಿನವೇ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟಾರೆಯಾಗಿ ಶೇ. 86ರಷ್ಟು ಸಬ್‌ಸ್ಕ್ರೈಬ್ ಆಗಿದೆ. ಹೂಡಿಕೆದಾರರು ಪ್ರತಿ ಷೇರಿಗೆ ರೂ. 152 ರಿಂದ ರೂ. 160 ಬೆಲೆ ಶ್ರೇಣಿಯಲ್ಲಿ ಬಿಡ್ ಸಲ್ಲಿಸಬಹುದಾಗಿದೆ. ಚಿಲ್ಲರೆ ಹೂಡಿಕೆದಾರರು (Retail Investors) ಕನಿಷ್ಠ 93 ಷೇರುಗಳ ಒಂದು ಲಾಟ್‌ಗೆ ಅರ್ಜಿ ಸಲ್ಲಿಸಲು ರೂ. 14,880 ಹೂಡಿಕೆ ಮಾಡಬೇಕಾಗುತ್ತದೆ.
ಮೊದಲ ದಿನವೇ ಚಿಲ್ಲರೆ ಹೂಡಿಕೆದಾರರ (RII) ಕೋಟಾ ಸಂಪೂರ್ಣವಾಗಿ ಅಂದರೆ 1.20 ಪಟ್ಟು ಭರ್ತಿಯಾಗಿದೆ. ಇನ್ನು ಸಂಸ್ಥೆಯೇತರ ಹೂಡಿಕೆದಾರರ (NII) ವಿಭಾಗದಲ್ಲಿ 1.06 ಪಟ್ಟು ಬಿಡ್ಡಿಂಗ್ ನಡೆದಿದ್ದರೆ, ಅರ್ಹ ಸಾಂಸ್ಥಿಕ ಹೂಡಿಕೆದಾರರ (QIB) ಕೋಟಾ ಶೇ. 9ರಷ್ಟು ಸಬ್‌ಸ್ಕ್ರೈಬ್ ಆಗಿದೆ. ASBA ವ್ಯವಸ್ಥೆಯ ಮೂಲಕ ಅರ್ಜಿ ಸಲ್ಲಿಸುವ ಹೂಡಿಕೆದಾರರು ಇಂದು ಮಧ್ಯಾಹ್ನ 3:30ರ ಒಳಗಾಗಿ ಫಾರ್ಮ್ ಸಲ್ಲಿಸಬೇಕಿದೆ. ಪ್ರಮುಖ ಬ್ರೋಕರೇಜ್ ಪ್ಲಾಟ್‌ಫಾರ್ಮ್‌ಗಳಲ್ಲಿ ಯುಪಿಐ (UPI) ಮ್ಯಾಂಡೇಟ್ ಅನುಮೋದಿಸಲು ಸಂಜೆ 5:00 ಗಂಟೆಯವರೆಗೆ ಕಾಲಾವಕಾಶವಿದೆ.

ಗಜ ಆಲ್ಟರ್‌ನೇಟಿವ್ ಅಸೆಟ್ ಮ್ಯಾನೇಜ್‌ಮೆಂಟ್ ಐಪಿಒ: ಸಬ್‌ಸ್ಕ್ರಿಪ್ಷನ್ ಮತ್ತು ಅಲಾಟ್‌ಮೆಂಟ್ ಸಂಪೂರ್ಣ ವಿವರ
ಮೂರು ದಿನಗಳ ಕಾಲ ನಡೆಯಲಿರುವ ಈ ಐಪಿಒ ಬಿಡ್ಡಿಂಗ್ ಪ್ರಕ್ರಿಯೆ ಆಗಸ್ಟ್ 21ರ ಶುಕ್ರವಾರ ಮುಕ್ತಾಯಗೊಳ್ಳಲಿದೆ. ಆ ಬಳಿಕ, ಷೇರು ವಿನಿಮಯ ಕೇಂದ್ರಗಳು ಆಗಸ್ಟ್ 24ರ ಸೋಮವಾರದಂದು ಷೇರು ಹಂಚಿಕೆ (Allotment) ಪ್ರಕ್ರಿಯೆಯನ್ನು ಅಂತಿಮಗೊಳಿಸಲಿವೆ. ಷೇರು ಸಿಗದ ಅರ್ಜಿದಾರರಿಗೆ ಆಗಸ್ಟ್ 25ರ ಮಂಗಳವಾರದಿಂದ ಹಣ ವಾಪಸ್ (Refund) ನೀಡುವ ಪ್ರಕ್ರಿಯೆ ಆರಂಭವಾಗಲಿದ್ದು, ಅದೇ ದಿನ ಯಶಸ್ವಿ ಬಿಡ್ಡರ್‌ಗಳ ಡಿಮ್ಯಾಟ್ ಖಾತೆಗೆ ಷೇರುಗಳು ಜಮೆಯಾಗಲಿವೆ. ಆಗಸ್ಟ್ 26ರ ಬುಧವಾರದಂದು ಬಿಎಸ್‌ಇ (BSE) ಮತ್ತು ಎನ್‌ಎಸ್‌ಇ (NSE) ಶೇರು ಮಾರುಕಟ್ಟೆಗಳಲ್ಲಿ ಈ ಷೇರುಗಳ ವಹಿವಾಟು ಅಧಿಕೃತವಾಗಿ ಪ್ರಾರಂಭವಾಗುವ ಸಾಧ್ಯತೆಯಿದೆ.
ಇನ್ನು ಗ್ರೇ ಮಾರ್ಕೆಟ್‌ನಲ್ಲಿ ಈ ಷೇರುಗಳ ಅನ್‌ಆಫಿಷಿಯಲ್ ಜಿಎಂಪಿ (Grey Market Premium) ಪ್ರಸ್ತುತ ರೂ. 23ರ ಆಜುಪಾಜಿನಲ್ಲಿದೆ. ಇದು ಗರಿಷ್ಠ ಬೆಲೆ ಶ್ರೇಣಿಯಾದ ರೂ. 160ಕ್ಕೆ ಹೋಲಿಸಿದರೆ ಸುಮಾರು ಶೇ. 14ರಷ್ಟು ಪ್ರೀಮಿಯಂ ಅನ್ನು ಸೂಚಿಸುತ್ತದೆ. ಆದರೆ, ಜಿಎಂಪಿ ನಿಯಂತ್ರಿತ ಮಾರುಕಟ್ಟೆಯಲ್ಲ ಮತ್ತು ಇದು ಕೇವಲ ಸೂಚಕ ಅಷ್ಟೇ ಎಂದು ಮಾರುಕಟ್ಟೆ ತಜ್ಞರು ನೆನಪಿಸುತ್ತಾರೆ. ಹೀಗಾಗಿ, ಕೇವಲ ಗ್ರೇ ಮಾರ್ಕೆಟ್ ಊಹಾಪೋಹಗಳನ್ನು ನಂಬಿ ಹೂಡಿಕೆ ಮಾಡುವ ಬದಲು ಕಂಪನಿಯ ಆರ್ಥಿಕ ತಲಹದಿ ಮತ್ತು ವ್ಯವಹಾರವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.
ಈ ಐಪಿಒ ಮೂಲಕ ಸಂಗ್ರಹವಾಗುವ ಹಣದಲ್ಲಿ ಹೊಸ ಷೇರುಗಳ ಮಾರಾಟದ (Fresh Issue) ರೂ. 450 ಕೋಟಿಯನ್ನು ನೂತನ ಹೂಡಿಕೆ ಯೋಜನೆಗಳಿಗೆ ನೀಡಲಾದ ಕಮಿಟ್‌ಮೆಂಟ್‌ಗಳನ್ನು ಪೂರೈಸಲು ಹಾಗೂ ಕಂಪನಿಯ ಹಳೆಯ ಬ್ರಿಡ್ಜ್ ಸಾಲಗಳನ್ನು ಮರುಪಾವತಿಸಲು ಬಳಸಿಕೊಳ್ಳಲಾಗುತ್ತದೆ. ಬಿಡ್ಡಿಂಗ್ ಮುಕ್ತಾಯಗೊಳ್ಳುವ ಮುನ್ನ ಸಾಂಸ್ಥಿಕ ಹೂಡಿಕೆದಾರರಿಂದ ಬರುವ ಬಲವಾದ ಬೆಂಬಲವು ಈ ಐಪಿಒನ ಅಂತಿಮ ಯಶಸ್ಸನ್ನು ನಿರ್ಧರಿಸಲಿದೆ.


Click it and Unblock the Notifications