ದಿನದ ಅಗತ್ಯ ಸೌಕರ್ಯಗಳಲ್ಲಿ ಅಡುಗೆ ಅನಿಲ (LPG Gas) ಕೂಡಾ ಒಂದು. ಆದ್ರೆ 2025 ರಲ್ಲಿ ಅಡುಗೆ ಅನಿಲದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇತ್ತು. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ಹಲವಾರು ಬೆಲೆ ಇಳಿಕೆ (Price Cut) ಬಗ್ಗೆ ಭಾರೀ ನಿರೀಕ್ಷೆಯಿದೆ. ಅದರಲ್ಲಿ ಅಡುಗೆ ಅನಿಲ ಕೂಡಾ ಒಂದು. ಇದೀಗ 2026ರಲ್ಲಿ ಅಡುಗೆ ಅನಿಲ ಬೆಲೆ ಇಳಿಕೆಯಾಗುತ್ತಾ? ಏರಿಕೆಯಾಗುತ್ತಾ? ಎಂಬುದರ ಮಾಹಿತಿ ಇಲ್ಲಿದೆ.

ಇಳಿಕೆಯಾಗುತ್ತಾ ಅಡುಗೆ ಅನಿಲ ಬೆಲೆ?
ಹೊಸವರ್ಷದಲ್ಲಿ ಕೋಟ್ಯಂತರ ಜನರಿಗೆ ಗುಡ್ ನ್ಯೂಸ್ ಸಿಗಲಿದೆ. ಸರ್ಕಾರವು 2026ರ ಜನವರಿ 1ರಿಂದ ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳನ್ನು ಪ್ರತಿ ಯೂನಿಟ್‌ಗೆ ₹2-₹3 ರೂ.ನಷ್ಟು ಇಳಿಕೆ ಮಾಡಲಿದೆ ಎಂಬ ನಿರೀಕ್ಷೆಯಿದೆ. ಇದೇ ರೀತಿ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲೂ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ದರ ಪರಿಶೀಲಿಸುತ್ತವೆ. ಅದೇ ರೀತಿ ಜನವರಿಯಲ್ಲಿ ಗ್ಯಾಸ್ ಬೆಲೆ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳು ಈ ವರ್ಷ ಗಣನೀಯವಾಗಿ ಇಳಿದಿದ್ದರೂ, ದೇಶೀಯ 14.2 ಕಿಲೋಗ್ರಾಂ ಎಲ್‌ಪಿಜಿ ಸಿಲಿಂಡರ್‌ಗಳ ದರ 2024ರ ಮಾರ್ಚ್ 9ರಿಂದ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಹಲವು ತಿಂಗಳಿಂದ ಬೆಲೆ ಸ್ಥಿರವಾಗಿದೆ.
ದೆಹಲಿಯಲ್ಲಿ ಸಬ್ಸಿಡಿ ಇಲ್ಲದ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹803 ರೂ. ಆಗಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ 9 ಸಿಲಿಂಡರ್ ವರೆಗೆ ₹300 ಸಬ್ಸಿಡಿ ಸಿಗುತ್ತದೆ. ಈ ಮೂಲಕ ಗ್ರಾಹಕರು ದೇಶೀಯ ಸಿಲಿಂಡರ್ ಬೆಲೆ ₹503 ರೂ. ಆಗುತ್ತದೆ. ಇನ್ನು ಕೊಲ್ಕತ್ತಾ ₹879, ಮುಂಬೈ ₹852.50, ಚೆನ್ನೈ ₹868.50 ರೂ. ಆಗಿದೆ.
19 ಕಿಲೋಗ್ರಾಂ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹1580.50 ರೂ., ಕೊಲ್ಕತ್ತಾದಲ್ಲಿ ₹1684 ರೂ., ಮುಂಬೈನಲ್ಲಿ ₹1531.50 ರೂ., ಚೆನ್ನೈನಲ್ಲಿ ₹1739.50 ರೂ. ಆಗಿದೆ.
ಕಚ್ಚಾ ತೈಲ ಬೆಲೆಯಲ್ಲಿನ ಇತ್ತೀಚಿನ ಗಣನೀಯ ಇಳಿಕೆ, ಗ್ಯಾಸ್ ಬೆಲೆ ಕಡಿತದ ನಿರೀಕ್ಷೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಇದು ಪ್ರತಿ ಬ್ಯಾರೆಲ್‌ಗೆ ಸುಮಾರು 60 ಡಾಲರ್‌ನಷ್ಟಿದೆ, 2021ರ ನಂತರದ ಅತ್ಯಂತ ಕನಿಷ್ಠ ಮಟ್ಟ ಇದಾಗಿದೆ ಎಂದು ಹೇಳಲಾಗಿದೆ.
Oilprice.com ಪ್ರಕಾರ, ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 60.22 ಡಾಲರ್‌ಗೆ ವಹಿವಾಟು ನಡೆಸುತ್ತಿದೆ. ಪೂರೈಕೆ ಹೆಚ್ಚಳ ಮತ್ತು ಬೇಡಿಕೆ ಸ್ಥಗಿತದಿಂದ ಬೆಲೆ ಇಳಿಕೆಯಾಗಿದೆ ಎನ್ನಕಾಗಿದೆ. ಈ ವರ್ಷ ಶೇ 21ರಷ್ಟು ಕುಸಿತ ಕಂಡಿದ್ದು, 2020ರ ನಂತರದ ಭಾರೀ ಇಳಿಕೆ ಇದಾಗಿದೆ.
ಕಚ್ಚಾ ತೈಲದಿಂದ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸೇರಿ ಹಲವು ಉತ್ಪನ್ನಗಳ ಉತ್ಪಾದನೆಯಾಗುತ್ತದೆ. ಇದನ್ನು ಸಂಸ್ಕರಿಸಿದಾಗ ಪೆಟ್ರೋಲಿಯಂ ಅನಿಲ ಹೊರಬರುತ್ತದೆ, ಅದನ್ನು ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ತುಂಬಲಾಗುತ್ತದೆ. ಕಚ್ಚಾ ತೈಲ ಅಗ್ಗವಾಗಿರುವುದರಿಂದ ಸಂಸ್ಕರಣಾ ಘಟಕಗಳ ಲಾಭಾಂಶ ಸುಧಾರಿಸಿದೆ. ಮುಂದಿನ ವರ್ಷವೂ ಕಚ್ಚಾ ತೈಲ ಬೆಲೆ ಹೆಚ್ಚಾಗುವ ಸಾಧ್ಯತೆ ಕಡಿಮೆ ಇರುವುದರಿಂದ, ಈ ಪ್ರಯೋಜನದಿಂದ ಅಡುಗೆ ಅನಿಲ ಬೆಲೆಯಲ್ಲೂ ಇಳಿಕೆ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications