ಚಿನ್ನ, ಭಾರತೀಯರ ಬದುಕಿನಲ್ಲಿ ಹುಟ್ಟಿನಿಂದ ಸಾವಿನವರೆಗೂ ಒಂದಿಲ್ಲೊಂದು ಕಾರಣಕ್ಕೆ ಬಳಕೆ ಮಾಡಲಾಗುತ್ತದೆ. ಭಾರತೀಯರಿಗೆ ಚಿನ್ನವೆಂದರೆ ಅದೊಂದ ಲೋಹವಷ್ಟೇ ಅಲ್ಲ, ಅದರಾಚೆಗಿನ ಬಾಂಧವ್ಯವಿದೆ. ಪ್ರತಿ ಶುಭ ಸಮಾರಂಭವೆಂದರೆ ಚಿನ್ನದ ಖರೀದಿ ಇರಲೇಬೇಕು, ಹಿಂದೂ ದೇವರಿಗೂ ಚಿನ್ನವೆಂದರೆ ಅಷ್ಟೇ ಪ್ರೀತಿ!.
ಕಾಲ ಬದಲಾದರೂ ಜನರಿಗೆ ಚಿನ್ನದ ಮೇಲಿನ ಮೋಹ ಕಡಿಮೆಯಾಗಿಲ್ಲ, ಚಿನ್ನವೆಂದರೆ ಬರೀ ಒಡವೆಯಲ್ಲ ಅದು ಆಪತ್ಕಾಲದ ನೆಂಟ ಕೂಡ. ನಾಡ ಹಬ್ಬ ದಸರಾ ಮತ್ತೆ ಬಂದಿದೆ, ಹಬ್ಬಗಳಲ್ಲಿ ಚಿನ್ನ ಖರೀದಿ ಮಾಡುವುದು ಭಾರತೀಯರಿಗೆ ಶುಭದ ಸಂಕೇತವೂ ಹೌದು, ಈ ದಸರಾ ಹಬ್ಬಕ್ಕೆ ಚಿನ್ನ ಖರೀದಿ ಮಾಡುವ ಯೋಜನೆ ಇದ್ದರೆ ಈ ಸುದ್ದಿ ಓದಿ.

ವರಮಹಾಲಕ್ಷ್ಮಿ, ದಸರಾ, ವಿಜಯದಶಮಿ, ಅಕ್ಷಯ ತೃತೀಯ, ದೀಪಾವಳಿಯಂತಹ ಸಂದರ್ಭಗಳಲ್ಲಿ ಚಿನ್ನ ಖರೀದಿ ಮಾಡುವುದರಿಂದ ಅದೃಷ್ಟ ಮತ್ತು ಸಂಪತ್ತು ಹೆಚ್ಚುತ್ತದೆ ಎನ್ನುವ ಬಹುತೇಕ ಭಾರತೀಯರ ನಂಬಿಕೆ. ಆಭರಣದ ದೃಷ್ಟಿಯಿಂದ ಮಾತ್ರವಲ್ಲ, ಹೂಡಿಕೆ ದೃಷ್ಟಿಯಿಂದ ಕೂಡ ಚಿನ್ನದ ಖರೀದಿ ಉತ್ತಮ ನಿರ್ಧಾರವೆನ್ನಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಚಿನ್ನದ ಬೆಲೆ ಪ್ರತಿ ವರ್ಷ 20% ರಷ್ಟು ಹೆಚ್ಚಾಗಿದೆ, ಈ ಬಾರಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ, ಈ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ನಿರ್ಧಾರವಾ ಎನ್ನುವ ಗೊಂದಲ ಕೂಡ ಮೂಡುತ್ತದೆ.
ಚಿನ್ನದ ಬೆಲೆ ಹೆಚ್ಚಲು ಕಾರಣಗಳೇನು?
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು, ಯುದ್ಧದ ಭೀತಿಯಿಂದಾಗಿ ಚಿನ್ನದ ಬೆಲೆಗಳು ಏರಿಕೆ ಕಾಣುತ್ತಿವೆ. ಹಣದುಬ್ಬರ ಹೆಚ್ಚಳ, ಕೇಂದ್ರ ಬ್ಯಾಂಕ್‌ಗಳಿಂದ ಚಿನ್ನ ಖರೀದಿಗೆ ಮುಂದಾಗಿದ್ದರಿಂದ ಹೆಚ್ಚಾದ ಬೇಡಿಕೆ ಕೂಡ ಚಿನ್ನದ ಬೆಲೆ ಏರಿಕೆಗೆ ಪ್ರಮಖ ಕಾರಣಗಳು ಎನ್ನಲಾಗಿದೆ. 2022ರಲ್ಲಿ ಕೇಂದ್ರೀಯ ಬ್ಯಾಂಕ್‌ಗಳು 1300 ಟನ್ ಚಿನ್ನ ಖರೀದಿ ಮಾಡಿದರೆ, 2023ರಲ್ಲಿ ಸುಮಾರು 400 ಟನ್ ಚಿನ್ನ ಖರೀದಿ ಮಾಡಿವೆ.
ಚಿನ್ನದ ಬೆಲೆ ಕುಸಿಯುತ್ತಾ?
ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತವನ್ನು ಕಾಣುವುದು ಅನುಮಾನವಾದರೂ, ಮಧ್ಯಪ್ರಾಚ್ಯ ದೇಶಗಳ ಬಿಕ್ಕಟ್ಟು ಕಡಿಮೆಯಾದ ಬಳಿಕ, ಹಣದುಬ್ಬರ ಏನಾದರೂ ನಿಯಂತ್ರಣಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಹೂಡಿಕೆ ಮಾಡಲು ಇದು ಸಕಾಲವೇ?
2018ರಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 30,200 ರೂಪಾಯಿ ಇದ್ದರೆ, ಈಗ 10 ಗ್ರಾಮ್ ಚಿನ್ನದ ಬೆಲೆ 77,190 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಪಾವಧಿಯಲ್ಲಿ ಚಿನ್ನದ ಮೇಲಿನ ಹೂಡಿಕೆಯಿಂದ ಕಡಿಮೆ ಲಾಭ ಬಂದರೂ, ಸುರಕ್ಷತೆ ದೃಷ್ಟಿಯಿಂದಲೇ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ದೊಡ್ಡದಿದೆ.
ದಸರಾ ಹಬ್ಬದಲ್ಲಿ ನೀವೇನಾದರೂ ಚಿನ್ನ ಖರೀದಿ ಮಾಡುವ ಯೋಜನೆಯಲ್ಲಿದ್ದರೆ, ಆರಾಮಾಗಿ ಖರೀದಿ ಮಾಡಬಹುದು, ಮಾರುಕಟ್ಟೆ ತಜ್ಞರ ಪ್ರಕಾರ 2026ರ ದೀಪಾವಳಿ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 85,000 ರೂಪಾಯಿಗೆ ಏರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications