ಧನತ್ರಯೋದಶಿ ಹಬ್ಬದ (Dhanteras) ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳೀಕೆಯಾಗಿದೆ. ಚಿನ್ನದ ಮೇಲೆ ಹೂಡಿಕೆ ಅಥವಾ ಖರೀದಿ ಮಾಡುವವರಿಗೆ ಇದ್ದಕಿಂತ ಬೆಸ್ಟ್ ಟೈಂ ಮತ್ತೊಂದಿಲ್ಲ. ಇನ್ನು ಇಂದಿನಿಂದ ದೀಪಾವಳಿ ಆರಂಭ. ಈ ಶುಭ ಸಂದರ್ಭದಲ್ಲಿ, ಚಿನ್ನದ ಬೆಲೆ (Gold Invest) ಕೂಡಾ ಕಡಿಮೆಯಾಗಿದ್ದು, ಚಿನ್ನ ಖರೀದಿಸಬೇಕೆಂದು ಹಲವರು ಪ್ಲಾನ್ ಮಾಡಿದ್ದಾರೆ. ಆದರೆ, ಚಿನ್ನ ಖರೀದಿಸುವಾಗ ಕೆಲವು ಪ್ಲಾನ್‌ಗಳನ್ನು ಗಮನದಲ್ಲಿಟ್ಟುಕೊಳ್ಳೋದು ಬಹಳ ಮುಖ್ಯ.

ಏಕೆಂದರೆ ಚಿನ್ನದ ಶುದ್ಧತೆ ಮತ್ತು ಬೆಲೆಗಳ ವಿಚಾರದಲ್ಲಿ ಇದೇ ಸಮಯದಲ್ಲಿ ಗ್ರಾಹಕರಿಗೆ ಮೋಸವಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿದರೆ, ಗ್ರಾಹಕರು ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಮತ್ತು ಉತ್ತಮ ಗುಣಮಟ್ಟದ ಚಿನ್ನವನ್ನು ಮನೆಗೆ ತರಬಹುದು.
ಚಿನ್ನದ ಹಾಲ್‌ಮಾರ್ಕ್ ಚೆಕ್ ಮಾಡಿ:
ಚಿನ್ನದ ಹಾಲ್‌ಮಾರ್ಕ್ ಪರಿಶೀಲಿಸುವುದು ಅತ್ಯಂತ ಮುಖ್ಯ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹಾಲ್‌ಮಾರ್ಕ್ ಇರುವ ಚಿನ್ನವನ್ನು ಮಾತ್ರ ಖರೀದಿಸಬೇಕು. ಆಭರಣಗಳ ಮೇಲೆ BIS ಲೋಗೋ (ತ್ರಿಕೋನಾಕಾರದ ಚಿಹ್ನೆ) ಮತ್ತು ಕ್ಯಾರೆಟ್ ಶುದ್ಧತೆಯ ಕೋಡ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, 22 ಕ್ಯಾರೆಟ್ ಚಿನ್ನಕ್ಕೆ '916' ಎಂಬ ಕೋಡ್ ಇರುತ್ತದೆ, ಇದು 91.6% ಶುದ್ಧ ಚಿನ್ನವನ್ನು ಸೂಚಿಸುತ್ತದೆ. ಇದನ್ನು ಚೆಕ್ ಮಾಡಿಕೊಳ್ಳಿ.
ಹಲವಾರು ಆಭರಣ ವ್ಯಾಪಾರಿಗಳು ಕಡಿಮೆ ಶುದ್ಧತೆಯ ಚಿನ್ನವನ್ನು ಮಾರಾಟ ಮಾಡಿ, ಹೆಚ್ಚಿನ ಮೇಕಿಂಗ್ ಚಾರ್ಜ್ ವಿಧಿಸಿ, ಗ್ರಾಹಕರನ್ನು ಮೋಸ ಮಾಡಲು ಟ್ರೈ ಮಾಡುತ್ತಾರೆ. ಆದುದರಿಂದ, ಮೇಕಿಂಗ್ ಚಾರ್ಜ್ ಆಭರಣದ ತೂಕ ಮತ್ತು ವಿನ್ಯಾಸಕ್ಕೆ ತಕ್ಕಂತೆ ಇದೆಯೇ ಎಂದು ನೋಡಿಕೊಳ್ಳಿ. 22 ಕ್ಯಾರೆಟ್ ಚಿನ್ನದಲ್ಲಿ ಉಳಿದ 8% ತಾಮ್ರ, ಬೆಳ್ಳಿ ಅಥವಾ ಇತರ ಲೋಹಗಳನ್ನು ಸೇರಿಸಲಾಗುತ್ತದೆ.
ಚಿನ್ನದ ತೂಕ ಮತ್ತು ಬೆಲೆ:
ಚಿನ್ನ ಖರೀದಿಸುವಾಗ ತೂಕ ಮತ್ತು ಬೆಲೆಯ ಬಗ್ಗೆ ವಿಶೇಷ ಗಮನ ನೀಡುವುದು ಮುಖ್ಯ. ನೀವು ಖರೀದಿಸಿದ ಆಭರಣದ ತೂಕವನ್ನು ಆಭರಣ ವ್ಯಾಪಾರಿಯ ತೂಕ ಯಂತ್ರದಲ್ಲಿ ನೀವೇ ಚೆಕ್ ಮಾಡಿ. ಇನ್ನು ನೀವು ಒಂದು ವೇಳೆ ಆಭರಣದಲ್ಲಿ ಸ್ಟೋನ್‌ಗಳನ್ನು ಅಳವಡಿಸಿದ್ದರು, ಅದರ ತೂಕವನ್ನು ಆಡ್ ಮಾಡಿದ್ದಾರೆಯೇ? ಇಲ್ಲವೇ? ಎಂದು ಚೆಕ್ ಮಾಡಿಕೊಳ್ಳಿ. ಪ್ರತಿದಿನದ 22 ಕ್ಯಾರೆಟ್ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಹೇಗೆ ಎಂದು ಪರೀಕ್ಷಿಸಿ ಮತ್ತು ವ್ಯಾಪಾರಿ ಹೇಳುವ ದರ ಸರಿಯಾಗಿದೆಯೇ ಎಂದು ಹೊಂದಾಣಿಕೆ ಮಾಡಿ.
ಬಿಲ್ ಪಡೆಯಿರಿ:
ಚಿನ್ನ ಖರೀದಿಯ ನಂತರ ಅದರ ಬಿಲ್ ಅನ್ನು ನೀವು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು. ಈ ಬಿಲ್ ಖರೀದಿಯ ಹೊರತಾಗಿಯೂ, ಆಭರಣದ ಶುದ್ಧತೆಗೆ ಕಾನೂನುಬದ್ಧ ಗ್ಯಾರಂಟಿ ನೀಡುತ್ತದೆ. ಬಿಲ್‌ನಲ್ಲಿ ಚಿನ್ನದ ಕ್ಯಾರೆಟ್, ಹಾಲ್‌ಮಾರ್ಕ್ ನಂಬರ್, ಆಭರಣದ ತೂಕ, ಮೇಕಿಂಗ್ ಚಾರ್ಜ್, ಮತ್ತು GST ಅನ್ನು ಸ್ಪಷ್ಟವಾಗಿ ನಮೂದಿಸಿದ್ದಾರ ಎಂದು ಚೆಕ್ ಮಾಡಿ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬದ ಸಮಯದಲ್ಲಿ ಚಿನ್ನವನ್ನು ಖರೀದಿಸಿದರೆ, ನೀವು ಸುರಕ್ಷಿತವಾಗಿ ಮತ್ತು ಲಾಭದಲ್ಲಿ, ಧೈರ್ಯದಲ್ಲಿ ಖರೀದಿಸಬಹುದು. ಅಲ್ಲದೆ, ಆಭರಣ ವ್ಯಾಪಾರಿಗಳಿಂದಾಗುವ ಮೋಸವನ್ನು ತಡೆಯಬಹುದು.


Click it and Unblock the Notifications