ಚಿನ್ನದ ಬೆಲೆ ಗಗನದತ್ತ ಮುಖಮಾಡಿದೆ. ಕಳೆದ ಕೆಲವು ದಿನಗಳಿಂದ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದ್ದು, ಶುಭ ಶುಕ್ರವಾರ ಕೂಡ ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದ್ದು, ಸಾರ್ವಕಾಲಿಕ ಗರಿಷ್ಠ ದರ ತಲುಪಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ, ಷೇರುಮಾರುಕಟ್ಟೆ ಕುಸಿತದಂತಹ ಹಲವು ಸಂಗತಿಗಳು ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ ಸದ್ಯ ಗ್ರಾಂಗೆ 8000 ರೂಪಾಯಿ ಸನಿಹಕ್ಕೆ ಬಂದು ನಿಂತಿದೆ. ಇದೇ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಹೋದರೆ ದಸರಾ ಅಥವಾ ದೀಪಾವಳಿ ವೇಳೆಗೆ 8000 ರೂಪಾಯಿ ಮೀರಿ ದರ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

ಸೆಪ್ಟೆಂಬರ್ 25 ರಂದು 7,702 ರೂಪಾಯಿ ಇದ್ದ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಇಂದು 7,767 ರೂಪಾಯಿಗೆ ಹೆಚ್ಚಳವಾಗಿದೆ. ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1ರ ನಡುವೆ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದ ಚಿನ್ನದ ಬೆಲೆ, ಅಕ್ಟೋಬರ್ 2 ರಿಂದ ಸತತವಾಗಿ ಏರಿಕೆಯ ಹಾದಿ ಹಿಡಿದಿದೆ. ಮೂರೇ ದಿನದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 76 ರೂಪಾಯಿ ಹೆಚ್ಚಾಗಿದೆ.
ಇಂದು ಚಿನ್ನದ ಬೆಲೆ ಎಷ್ಟಿದೆ?
ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,120 ರೂಪಾಯಿ ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂ ಬೆಲೆಯಲ್ಲಿ 10 ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿಗಳಷ್ಟು ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಇಂದು 7767 ರೂಪಾಯಿಗೆ ಹೆಚ್ಚಾಗಿದೆ. ಗುರುವಾರ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 7756 ರೂಪಾಯಿಗೆ ಮಾರಾಟವಾಗಿದ್ದರೆ, ಇಂದು 11 ರೂಪಾಯಿ ಹೆಚ್ಚಳ ಕಂಡಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಏರಿಕೆಯಾಗಿದ್ದು ಇಂದು 77670 ರೂಪಾಯಿಗೆ ತಲುಪಿದೆ. ಇದೇ ಭರದಲ್ಲಿ ಚಿನ್ನದ ಬೆಲೆ ಏರಿಕೆಯಾದರೆ ಶೀಘ್ರದಲ್ಲೇ 80,000 ರೂಪಾಯಿ ತಲುಪಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಪ್ರತಿ ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಗುರುವಾರಕ್ಕೆ ಹೋಲಿಕೆ ಮಾಡಿದರೆ 9 ರೂಪಾಯಿ ಏರಿಕೆಯಾಗಿದೆ. ಎರಡು ದಿನಗಳಿಂದ ಪ್ರತಿ ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 5826 ರೂಪಾಯಿಗೆ ಮಾರಾಟವಾಗುತ್ತಿದೆ.
ಬೆಳ್ಳಿ ಬೆಲೆ ಎಷ್ಟಿದೆ?
ಬೆಳ್ಳಿ ಬೆಲೆಯಲ್ಲಿ ಕೂಡ ಇಂದು ಭರ್ಜರಿ ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 2000 ರೂಪಾಯಿ ಹೆಚ್ಚಳವಾಗಿದೆ. ಗುರುವಾರ 90,000 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಶುಕ್ರವಾರ 92,000 ರೂಪಾಯಿಗೆ ಏರಿಕೆಯಾಗಿದೆ. ಸೆಪ್ಟೆಂಬರ್ 28 ರಂದು ಒಂದೇ ದಿನ 5000 ರೂಪಾಯಿ ಕುಸಿತ ಕಂಡಿದ್ದ ಬೆಳ್ಳಿ ಬೆಲೆ 85,000 ರೂಪಾಯಿಗೆ ಮಾರಾಟವಾಗಿತ್ತು, ಅದಾದ ಬಳಿಕ ಸತತವಾಗಿ ಏರಿಕೆ ಕಂಡಿರುವ ಬೆಳ್ಳಿ ಬೆಲೆ ಸದ್ಯ 92,000 ರೂಪಾಯಿಗೆ ಬಂದಿದೆ.


Click it and Unblock the Notifications