ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವ ಯೋಜನೆ ಇಟ್ಟುಕೊಂಡಿದ್ದವರಿಗೆ ಬೆಲೆ ಏರಿಕೆ ಶಾಕ್ ಸಿಕ್ಕಿದೆ. ಹಬ್ಬದ ಮೊದಲ ದಿನ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪವಾಗುತ್ತಿದ್ದು, ಫಲಿತಾಂಶದಲ್ಲಿ ಅನಿಶ್ಚತತೆ ಉಂಟಾಗಿರುವುದು, ಜಾಗತಿಕವಾಗಿ ಹೆಚ್ಚುತ್ತಿರುವ ಯುದ್ಧದ ಭೀತಿಯಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಗುರುವಾರ ಕೂಡ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು ಸಾರ್ವಕಾಲಿಕ ಗರಿಷ್ಠ ಬೆಲೆಗೆ ಏರಿಕೆಯಾಗಿದೆ. ಒಂದು ಗ್ರಾಮ 24 ಕ್ಯಾರಟ್ ಚಿನ್ನದ ಬೆಲೆ 17 ರೂಪಾಯಿ ಏರಿಕೆಯಾಗಿದ್ದರೆ, 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15 ರೂಪಾಯಿ ಏರಿಕೆಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13 ರೂಪಾಯಿ ಏರಿಕೆ ಕಂಡಿದೆ.

ಅಕ್ಟೋಬರ್ 31ರಂದು ದೇಶಾದ್ಯಂತ ದೀಪಾವಳಿ ಆಚರಿಸಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವುದು ಶುಭ ಸಂಕೇತ ಎನ್ನುವ ಕಲ್ಪನೆ ಭಾರತೀಯರದ್ದಾಗಿದೆ. ಈ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಿದರೆ ಅದೃಷ್ಟ, ವ್ಯವಹಾರಗಳಲ್ಲಿ ಲಾಭವಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ ಸಾಕಷ್ಟು ಜನ ಹೂಡಿಕೆಗಾಗಿ ಅಥವಾ ಆಭರಣದ ಉದ್ದೇಶಕ್ಕಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.
ಈಗ ಎಷ್ಟಿದೆ ಚಿನ್ನದ ಬೆಲೆ?
22 ಕ್ಯಾರಟ್ (ಆಭರಣ) ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬುಧವಾರ 7,440 ರೂಪಾಯಿ ಇದ್ದ ಒಂದು ಗ್ರಾಮ ಚಿನ್ನದ ಬೆಲೆ 15 ರೂಪಾಯಿ ಏರಿಕೆಯಾಗಿದ್ದು ಗುರುವಾರ 7,455 ರೂಪಾಯಿಗೆ ತಲುಪಿದೆ. ಬುಧವಾರ 74,440 ರೂಪಾಯಿ 10 ಗ್ರಾಂ ಚಿನ್ನದ ಬೆಲೆ ಗುರುವಾರ 74,550 ರೂಪಾಯಿಗೆ ಏರಿಕೆಯಾಗಿದೆ.
24 ಕ್ಯಾರಟ್ ಅಥವಾ ಶುದ್ಧ ಚಿನ್ನದ ಬೆಲೆ ಪ್ರತಿಗ್ರಾಂಗೆ 17 ರೂಪಾಯಿ ಏರಿಕೆಯಾಗಿದೆ. ಬುಧವಾರ 8,116 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಗುರುವಾರ 8,133 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 170 ರೂಪಾಯಿ ಏರಿಕೆಯಾಗಿದ್ದು ಬುಧವಾರ 81,160 ರೂಪಾಯಿ ಇದ್ದರೆ ಗುರುವಾರ 81,330 ರೂಪಾಯಿಗೆ ಏರಿಕೆಯಾಗಿದೆ.
18 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 13 ರೂಪಾಯಿ ಏರಿಕೆಯಾಗಿದೆ. ಬುಧವಾರ 6087 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಗುರುವಾರ 6,100 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 61,000 ರೂಪಾಯಿಗೆ ತಲುಪಿದೆ.
1 ಲಕ್ಷ ರೂಪಾಯಿ ದಾಟಿದ ಬೆಳ್ಳಿ
ಚಿನ್ನದ ಬೆಲೆ ಏರಿಕೆಯಾಗಿದ್ದರೆ ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಬುಧವಾರ 1000 ರೂಪಾಯಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ, ಕೆಜಿಗೆ 1,00,000 ರೂಪಾಯಿ ತಲುಪಿದ್ದು, ಗುರುವಾರ ಕೂಡ ಅದೇ ದರದಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications