ಭಾರತದಲ್ಲಂತೂ ಚಿನ್ನ-ಬೆಳ್ಳಿ (India Gold-Silver) ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಅದೇ ಕಾರಣದಿಂದ ಸುರಕ್ಷಿತ ಆಸ್ತಿ ಅಂದುಕೊಂಡು ಅದೆಷ್ಟೋ ಮಂದಿ ಚಿನ್ನದ ಮೇಲೆ ಹೂಡಿಕೆ (Gold Investment) ಮಾಡುತ್ತಿದ್ದಾರೆ. ಇನ್ನು ಭೌಗೋಳಿಕ ಉದ್ವಿಗ್ನತೆ, ಡಾಲರ್ ದುರ್ಬಲತೆ, ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತ ನಿರೀಕ್ಷೆಗಳಿಂದ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಮುಖ ಮಾಡುತ್ತಿದ್ದಾರೆ. ಈ ಪರಿಣಾಮ ಈ ವಾರದಲ್ಲಂತೂ ಚಿನ್ನ ಮತ್ತು ಬೆಳ್ಳಿ ದರಗಳು ಊಹೆಯೂ ಮಾಡದಷ್ಟು ಗರಿಷ್ಠ ಮಟ್ಟಕ್ಕೆ ತಲುಪಿದ್ದವು.

ಮುಂಬೈ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನ 10 ಗ್ರಾಂಗೆ 1.54 ಲಕ್ಷ ರೂ.ಗಳಿಂದ 1.59 ಲಕ್ಷಕ್ಕೆ ಏರಿಕೆಯಾಗಿತ್ತು. ಬೆಳ್ಳಿ ಕೆ.ಜಿ.ಗೆ 3.42 ಲಕ್ಷ ರೂ. ತಲುಪಿ, 24,802 ರೂ. ಏರಿಕೆ ಕಂಡಿತ್ತು. ಅಲ್ಲದೆ ದಿನೇ ದಿನೇ ಚಿನ್ನ, ಬೆಳ್ಳಿ ಬೆಲೆಗಳು ಏರಿಕೆ ಕಾಣುತ್ತಲೇ ಇದೆ. ಈಗಾಗಲೇ ಹಲವು ಆರ್ಥಿಕ ತಜ್ಞರು, ವರ್ಷಾಂತ್ಯದಲ್ಲಿ ಚಿನ್ನ, ಬೆಳ್ಳಿ ದರಗಳು ಭಾರೀ ಏರಿಕೆಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲು!
ಬೆಲೆ ಏರಿಕೆಯಿಂದ ಆಭರಣ ವ್ಯಾಪಾರಿಗಳು ಅಮೂಲ್ಯ ಲೋಹಗಳನ್ನು ಖರೀದಿ ಮಾಡೋದನ್ನೇ ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಗ್ರಾಹಕರು ಆಭರಣ ಖರೀದಿಸುವ ಬದಲು, ಹಳೆಯ ಚಿನ್ನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಜೆಜೆ ಗೋಲ್ಡ್ ಹೌಸ್‌ನ ನಿರ್ದೇಶಕ ಹರ್ಷದ್ ಅಜ್ಮೇರಾ, "ಈ ತಿಂಗಳು ಚಿನ್ನ ಶೇ. 30ಕ್ಕೂ ಹೆಚ್ಚು ಏರಿಕೆ ಕಂಡಿದ್ದರಿಂದ ಬುಲಿಯನ್ ಮಾರಾಟ ಶೇ. 70ರಷ್ಟು ಕುಸಿತ ಕಂಡಿದೆ. ಗ್ರಾಹಕರು ತರುವ ಹಳೆಯ ಚಿನ್ನದಿಂದಲೇ ಬೇಡಿಕೆ ಪೂರೈಕೆಯಾಗುತ್ತಿದೆ." ಎಂದು ಹೇಳಿದರು.
ಇಂಡಿಯಾ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷೆ ಅಕ್ಷಾ ಕಂಬೋಜ್ ಪ್ರಕಾರ, ಮಾರುಕಟ್ಟೆ ಆಭರಣಗಳಿಂದ ಚಿನ್ನದ ಗಟ್ಟಿ, ನಾಣ್ಯ ಅಥವಾ ಚಿನ್ನ ಆಧಾರಿತ ಹೂಡಿಕೆ ಸಾಧನಗಳ ಮೇಲೆ ಹೆಚ್ಚಿನವರು ಹೂಡಿಕೆ ಮಾಡುತ್ತಿದ್ದಾರೆ. "ಗ್ರಾಹಕರು ಸಾಂಪ್ರದಾಯಿಕ ಚಿನ್ನ ಖರೀದಿಸುವ ಬದಲಿಗೆ, ಡಿಜಿಟಲ್ ಚಿನ್ನ ಅಥವಾ ಇಟಿಎಫ್‌ಗಳೆಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈ ಮೂಲಕವೂ ಚಿನ್ನ ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಕಂಡುಕೊಂಡಿದ್ದಾರೆ" ಎಂದು ಹೇಳಿದರು.
ಬೆಲೆ ಏರಿಕೆಗೆ ಕಾರಣವೇನು?
ವಿಶ್ಲೇಷಕರು, ಭೌಗೋಳಿಕ ರಾಜಕೀಯ ಬಿಕ್ಕಟ್ಟು, ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ ಮೇಲೆ ಶೇ. 100ರಷ್ಟು ಸುಂಕದ ಬೆದರಿಕೆ ಹಾಕಿದ್ದಾರೆ. ದಕ್ಷಿಣ ಕೊರಿಯಾದ ಆಟೋ, ಔಷಧೀಯ ಉತ್ಪನ್ನಗಳ ಮೇಲೆ ಸುಂಕವನ್ನು ಶೇ. 25ಕ್ಕೆ ಹೆಚ್ಚಿಸಿದ್ದಾರೆ. ಇವೆಲ್ಲ ಸುರಕ್ಷಿತ ಹೂಡಿಕೆ ಮೇಲಿನ ಬೇಡಿಕೆ ಹೆಚ್ಚಿಸಿದೆ ಎಂದು ಹೇಳಲಾಗಿದೆ.
ಇನ್ನು ಭಾರತದಲ್ಲಿ ಮದುವೆ ಸೀಸನ್, ಹಬ್ಬಗಳು ಬರುತ್ತಿರುವುದರಿಂದ ಮತ್ತು ರೂಪಾಯಿ ಮೌಲ್ಯ ಕಡಿಮೆಯಾಗುವುದರಿಂದ ಹೂಡಿಕೆದಾರರು ಚಿನ್ನದ ಮೇಳೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದೇ ಕಾರಣದಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗುತ್ತಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications