ದೀಪಾವಳಿ ಹಬ್ಬಕ್ಕಾಗಿ ಬಂಗಾರ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಬೆಲೆ ಏರಿಕೆ ಶಾಕ್ ಸಿಕ್ಕಿದೆ. ಚಿನ್ನದ ಬೆಲೆ ಒಂದು ಕಡಿಮೆಯಾದರೆ ಮತ್ತೆ ಮೂರು ದಿನ ಏರಿಕೆಯಾಗುತ್ತಿದ್ದು, ನಿರಂತರ ಬೆಲೆ ಏರಿಕೆಯಿಂದ ಹೊಸ ದಾಖಲೆ ನಿರ್ಮಿಸಿದೆ. ಸೋಮವಾರ 49 ರೂಪಾಯಿ ಕಡಿಮೆಯಾಗಿದ್ದ ಒಂದು ಗ್ರಾಂ ಚಿನ್ನದ ಬೆಲೆ, ಮಂಗಳವಾರ ಬರೋಬ್ಬರಿ 65 ರೂಪಾಯಿ ಹೆಚ್ಚಳ ಕಂಡಿದೆ.
ಮದ್ಯಪ್ರಾಚ್ಯ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷ, ನಿಲ್ಲದ ರಷ್ಯಾ ಉಕ್ರೇನ್ ಯುದ್ಧ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಅನಿಶ್ಚತತೆಗಳು ಚಿನ್ನದ ಬೆಲೆಯ ಏರಿಕೆಗೆ ಪ್ರಮುಖ ಕಾರಣಗಳಾಗಿದೆ. ಜಾಗತಿಕವಾಗಿ ವಿವಿಧ ಷೇರುಮಾರುಕಟ್ಟೆಗಳಲ್ಲಿ ಕುಸಿತ, ಮುಖ್ಯವಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಇತ್ತೀಚಿನ ಸತತ ಕುಸಿತದಿಂದ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆಯತ್ತ ಆಸಕ್ತಿ ತೋರಿದ್ದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣಗಳಲ್ಲಿ ಒಂದಾಗಿದೆ.

ಮಂಗಳವಾರ ಭರ್ಜರಿ ಏರಿಕೆ
ಸೋಮವಾರ ಚಿನ್ನದ ಬೆಲೆ ಅಲ್ಪ ಕುಸಿತ ಕಂಡಿದ್ದರಿಂದ ಚಿನ್ನಾಭರಣ ಪ್ರಿಯರು ಖುಷಿಯಾಗಿದ್ದರು ಆದರೆ ಮಂಗಳವಾರ ಮತ್ತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 65 ರೂಪಾಯಿ ಏರಿಕೆಯಾಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 650 ರೂಪಾಯಿಯಷ್ಟು ಹೆಚ್ಚಾದರೆ, 100 ಗ್ರಾಂ ಚಿನ್ನದ ಬೆಲೆಯಲ್ಲಿ 6,500 ರೂಪಾಯಿ ಏರಿಕೆಯಾಗಿದೆ. ಸೋಮವಾರ 8,000 ರೂಪಾಯಿಗಿಂತ ಕಡಿಮೆಯಾಗಿದ್ದ ಒಂದು ಗ್ರಾಂ ಚಿನ್ನದ ಬೆಲೆ ಇದೀಗ ಮತ್ತೆ 8,000 ರೂಪಾಯಿ ದಾಟಿದೆ.
ಸೋಮವಾರ 7980 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಮಂಗಳವಾರ 8,045 ರೂಪಾಯಿಗಳಿಗೆ ಏರಿಕೆಯಾಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಸೋಮವಾರ 79,800 ರೂಪಾಯಿ ಇದ್ದರೆ, ಮಂಗಳವಾರ 80,450 ರೂಪಾಯಿಗೆ ಏರಿಕೆಯಾಗಿದೆ.
ಸೋಮವಾರ 7315 ರೂಪಾಯಿ ಇದ್ದ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಮಂಗಳವಾರ 60 ರೂಪಾಯಿ ಏರಿಕೆಯಾಗಿದ್ದು 7375 ರೂಪಾಯಿಗಳಿಗೆ ತಲುಪಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 600 ರೂಪಾಯಿ ಏರಿಕೆಯಾಗಿದೆ, ಸೋಮವಾರ 73,150 ರೂಪಾಯಿ ಇದ್ದರೆ ಮಂಗಳವಾರ 773,750 ರೂಪಾಯಿಗೆ ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ ಕೂಡ ಒಂದು ಗ್ರಾಂಗೆ 49 ರೂಪಾಯಿ ಏರಿಕೆಯಾಗಿದೆ. ಸೋಮವಾರ 5,985 ರೂಪಾಯಿ ಇದ್ದರೆ ಮಂಗಳವಾರ 6,034 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 490 ರೂಪಾಯಿ ಏರಿಕೆಯಾಗಿದೆ. 59,850 ರೂಪಾಯಿ ಇದ್ದ 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಮಂಗಳವಾರ 60,340 ರೂಪಾಯಿಗೆ ಏರಿಕೆಯಾಗಿದೆ.
ಬೆಳ್ಳಿ ಬೆಲೆ ಕೂಡ ಹೆಚ್ಚಳ
ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದ್ದು, ಮಂಗಳವಾರ ಒಂದು ಕೆಜಿ ಬೆಳ್ಳಿ ಬೆಲೆ 2000 ರೂಪಾಯಿ ಹೆಚ್ಚಳವಾಗಿದೆ. ಸೋಮವಾರ 97,000 ರೂಪಾಯಿ ಇದ್ದ ಬೆಳ್ಳಿ ಬೆಲೆ ಮಂಗಳವಾರ 99,000 ರೂಪಾಯಿಗೆ ಏರಿಕೆಯಾಗಿದೆ.


Click it and Unblock the Notifications