ಯುಎಸ್ ಚುನಾವಣೆ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲೇ ಚಿನ್ನದ ಬೆಲೆ ಕುಸಿತ ಮುಂದುವರೆದಿದೆ. ಯುಎಸ್ ಚುನಾವಣಾ ಫಲಿತಾಂಶದಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸುವುದು ಖಚಿತವಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಕುಸಿತ ಶುರುವಾಗಿತ್ತು, ಫಲಿತಾಂಶ ಪ್ರಕಟವಾಗಿದ್ದು ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಚಿನ್ನದ ಬೆಲೆ ಮತ್ತಷ್ಟು ಕುಸಿಯಿತು.
ಅಮೆರಿಕ ಚುನಾವಣೆ ಫಲಿತಾಂಶದ ಬಳಿಕ ಎರಡೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 2100 ರೂಪಾಯಿ ಕಡಿಮೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಕೆಜಿಗೆ 4,050 ರೂಪಾಯಿ ಇಳಿಕೆಯಾಗಿದೆ. ಸತತ ಎರಡು ದಿನ ಚಿನ್ನದ ಬೆಲೆ ಕುಸಿತ ಕಂಡಿರುವುದು ಚಿನ್ನಾಭರಣ ಪ್ರಿಯರಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಇಳಿಕೆಯ ಭರವಸೆ ಮೂಡಿಸಿದೆ.

ಒಂದೇ ದಿನ 179 ರೂಪಾಯಿ ಇಳಿಕೆ
ಗುರುವಾರ ಒಂದೇ ದಿನ 24 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಂಗೆ 179 ರೂಪಾಯಿ ಕುಸಿತ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 165 ರೂಪಾಯಿ ಕುಸಿದಿದೆ. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಮೊತ್ತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿರುವುದು ಇದೇ ಮೊದಲಾಗಿದೆ. ಬುಧವಾರ 7,365 ರೂಪಾಯಿ ಇದ್ದ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಗುರುವಾರ 7,200 ರೂಪಾಯಿಗೆ ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 1650 ರೂಪಾಯಿ ಕುಸಿದಿದೆ. ಬುಧವಾರ 10 ಗ್ರಾಂಗೆ 73,650 ರೂಪಾಯಿ ಇದ್ದ ಬೆಲೆ 72,000 ರೂಪಾಯಿಗೆ ಕುಸಿದಿದೆ. 100 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 16,500 ರೂಪಾಯಿ ಕಡಿಮೆಯಾಗಿದೆ.
24 ಕ್ಯಾರಟ್ ಚಿನ್ನ ಬೆಲೆ 1 ಗ್ರಾಂಗೆ 179 ರೂಪಾಯಿ ಕಡಿಮೆಯಾಗಿದೆ. ಬುಧವಾರ 8,035 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಗುರುವಾರ 7,856 ರೂಪಾಯಿಗೆ ಕಡಿಮೆಯಾಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಬುಧವಾರ 80,350 ರೂಪಾಯಿಗಳಿಂದ 78,560 ರೂಪಾಯಿಗೆ ಇಳಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ ಕೂಡ ಭರ್ಜರಿ ಕುಸಿತ ಕಂಡಿದೆ. ಗ್ರಾಂ ಚಿನ್ನದ ಬೆಲೆ 135 ರೂಪಾಯಿ ಕಡಿಮೆಯಾಗಿದೆ. ಬುಧವಾರ 6,026 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಗುರುವಾರ 5,891 ರೂಪಾಯಿಗೆ ಕುಸಿತ ಕಂಡಿದೆ.
ಬೆಳ್ಳಿ ಬೆಲೆ ಕೂಡ ಕುಸಿತ
ಚಿನ್ನದ ಬೆಲೆ ಬಳಿಕ ಬೆಳ್ಳಿ ಬೆಲೆ ಕೂಡ ಭರ್ಜರಿ ಕುಸಿತ ಕಂಡಿದೆ. ಒಂದೇ ದಿನ 3000 ರೂಪಾಯಿ ಕುಸಿದಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಬುಧವಾರ 96,000 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಗುರುವಾರ 93,000 ರೂಪಾಯಿಗೆ ಕುಸಿತ ಕಂಡಿದೆ.


Click it and Unblock the Notifications