ಕಳೆದ ವಾರದ ಆರಂಭದಲ್ಲಿ ಎರಡು ದಿನ ಅಲ್ಪ ಕುಸಿತ ಕಂಡಿದ್ದ ಚಿನ್ನದ ಬೆಲೆ ಬಳಿಕ ಸತತವಾಗಿ ಏರಿಕೆಯಾಗಿದ್ದು ಈಗಾಗಲೇ ₹80,000 ಸನಿಹಕ್ಕೆ ಬಂದಿದೆ. ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ಈ ವಾರದಲ್ಲೇ 80,000 ರೂಪಾಯಿ ದಾಟುವ ಸಾಧ್ಯತೆ ಕೂಡ ಇದೆ. ಹಾಗಾದರೆ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸೂಕ್ತ ಸಮಯವೇ? ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತಾ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಚಿನ್ನದ ಬೇಡಿಕೆ ಕೂಡ ಹೆಚ್ಚಲಿದೆ. ಶುಭ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವುದು ಭಾರತೀಯರು ಶುಭ ಸಂಕೇತ ಎಂದು ಭಾವಿಸುತ್ತಾರೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈಗಾಗಲೇ 79,420 ರೂಪಾಯಿಗೆ ಮುಟ್ಟಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 72,800 ರೂಪಾಯಿ ಆಗಿದೆ.

18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,957 ರೂಪಾಯಿ ಆಗಿದೆ. 18 ಕ್ಯಾರಟ್ ಚಿನ್ನ ಪ್ರತಿ ಗ್ರಾಂಗೆ 6000 ಗಡಿ ದಾಟುವ ಸನಿಹದಲ್ಲಿದ್ದರೆ, 24 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 8,000 ರೂಪಾಯಿ ದಾಟುವ ಸನಿಹದಲ್ಲಿದೆ. ಸಾರ್ವಕಾಲಿಕ ಗರಿಷ್ಠ ದರ ತಲುಪಿರುವ ಚಿನ್ನದ ಮೇಲೆ ಈಗ ಹೂಡಿಕೆ ಮಾಡಬಹುದಾ ಎನ್ನುವ ಬಗ್ಗೆ ಹಲವು ತಜ್ಞರು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಚಿನ್ನದ ಮೇಲೆ ಹೂಡಿಕೆಗೆ ಇದು ಉತ್ತಮ ಸಮಯವೇ?
ಮುಂಬರುವ ದಿನಗಳಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. ಕಳ್ಳ ಸಾಗಾಣಿಕೆಯನ್ನು ತಡೆಯಲು ಭಾರತ ಸರ್ಕಾರ ಆಮದು ಸುಂಕವನ್ನು 15% ರಿಂದ 6% ಕ್ಕೆ ಕಡಿಮೆ ಮಾಡಿದೆ. ಆಗಸ್ಟ್‌ನಲ್ಲಿ 140 ಟನ್ ಇದ್ದ ಚಿನ್ನದ ಬೇಡಿಕೆ ಇದೀಗ ಹಬ್ಬದ ಸಂದರ್ಭದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಉತ್ತಮ ಮಳೆ, ರೈತರ ಆದಾಯ ಹೆಚ್ಚಳಕ್ಕೆ ಕಾರಣವಾಗಿದ್ದು ಆಭರಣಗಳ ಬೇಡಿಕೆ ಹೆಚ್ಚಾಗಿದೆ ಎಂದು ವಿಟಿ ಮಾರುಕಟ್ಟೆಗಳ ಮಾರುಕಟ್ಟೆ ವಿಶ್ಲೇಷಕ ಅಲೆಕ್ಸ್ ವೋಲ್ಕೊವ್ ಹೇಳಿದ್ದಾರೆ.
ಜಾಗತಿಕ ಉದ್ವಿಗ್ನತೆಗಳು ಕೂಡ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ. ಇರಾನ್ - ಇಸ್ರೇಲ್ ನಡುವಿನ ಸಂಘರ್ಷದಂತ ಘಟನೆಗಳು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತವೆ. ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿಮೆ ಮಾಡುವ ಮುನ್ಸೂಚನೆಯಿದ್ದು, ಯುಎಸ್ ಡಾಲರ್ ಚಿನ್ನದ ಲಾಭವನ್ನು ಸೀಮಿತವಾಗಿಸಿದೆ ಎಂದು ವರದಿಯಾಗಿದೆ.
ಎಲ್ಲಿ ಹೂಡಿಕೆ ಮಾಡಬೇಕು?
ಚಿನ್ನವನ್ನು ಖರೀದಿ ಮಾಡುವ ಮೊದಲು ಯಾವ ಕಾರಣಕ್ಕಾಗಿ ಖರೀದಿ ಮಾಡುತ್ತಿದ್ದೀರಾ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ವೈಯಕ್ತಿಕ ಬಳಕೆಗಾಗಿ ಆಭರಣಗಳು ಅಥವಾ ಹಣಕಾಸಿನ ಹೂಡಿಕೆಗಾಗಿ ಖರೀದಿ ಮಾಡುತ್ತಿದ್ದಾರ ಎನ್ನುವುದು ಸ್ಪಷ್ಟವಾಗಬೇಕು. ವೈಯಕ್ತಿಕ ಬಳಕೆಗೆ ಖರೀದಿ ಮಾಡುವುದಿದ್ದರೆ ಹಾಲ್‌ಮಾರ್ಕ್-ಪ್ರಮಾಣೀಕೃತ ಆಭರಣವನ್ನು ಖರೀದಿ ಮಾಡಿ. ಹಬ್ಬದ ಸಮಯ ರಿಯಾಯಿತಿ, ಕೊಡುಗೆಗಳು ಇರುವ ಕಾರಣ ಚಿನ್ನ ಖರೀದಿಗೆ ಉತ್ತಮ ಸಮಯವಾಗಿದೆ.
ಹಣದುಬ್ಬರದ ಸಂದರ್ಭದಲ್ಲಿ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳಲು ಬಯಸುವವರಿಗೆ ಚಿನ್ನದ ನಾಣ್ಯಗಳು, ಚಿನ್ನದ ಬಾರ್ ಗಳು, ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು (ಇಟಿಎಫ್‌ಗಳು) ಮತ್ತು ಸಾರ್ವಭೌಮ ಗೋಲ್ಡ್ ಬಾಂಡ್‌ಗಳು (ಎಸ್‌ಜಿಬಿ) ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ.


Click it and Unblock the Notifications