ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ಮಿಲಿಯನ್ ಡಾಲರ್ ಅಂದರೆ, ನಮ್ಮ ಭಾರತದ ಕರೆನ್ಸಿಯಲ್ಲಿ ₹44 ಕೋಟಿ ಹೂಡಿಕೆ ಮಾಡುವವರಿಗೆ ಗೋಲ್ಡನ್ ವೀಸಾ ನೀಡುವ ಬಗ್ಗೆ ಘೋಷಣೆ ಮಾಡಿದ್ದರು. ಅಂದರೆ ಅಮೆರಿಕದ ಪೌರತ್ವವನ್ನು ಖರೀದಿಸಬೇಕೆಂದಿರುವ, ಶ್ರೀಮಂತರು ಈ ವೀಸಾ ಪಡೆದುಕೊಳ್ಳಬಹುದು. ಈ ಗೋಲ್ಡನ್ ವೀಸಾ ಹೊಂದಿರುವವರು, ಎಲ್ಲಿ ಹೋದರೂ ಸುಲಭವಾಗಿ ಪ್ರವೇಶಿಸಲು, ನಮ್ಮ ಆಸ್ತಿಗಳನ್ನು ವಿವಿಧ ದೇಶಗಳಲ್ಲಿ ಹೂಡಿಕೆ ಮಾಡಲು, ಉತ್ತಮ ಜೀವನಶೈಲಿಯನ್ನು ಅನುಭವಿಸಲು ಮತ್ತು ನಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸಲು ಎರಡನೇ ನಿವಾಸ ಬಹಳ ಉಪಯುಕ್ತವಾಗಿದೆ.

ಸರಳವಾಗಿ ಹೇಳುವುದಾದರೆ ಗೋಲ್ಡನ್ ವೀಸಾ ಎಂದರೆ ಶ್ರೀಮಂತರು ಹಣ ಹೂಡಿಕೆ ಮಾಡುವ ಮೂಲಕ ಒಂದು ದೇಶದಲ್ಲಿ ಶಾಶ್ವತ ವಾಸ್ತವ್ಯದ ಅನುಮತಿ ಪಡೆಯುವ ವೀಸಾ. ಈ ಯೋಜನೆಯು ಪ್ರಮುಖವಾಗಿ ಉದ್ಯಮಿಗಳು, ಹೂಡಿಕೆದಾರರು ಮತ್ತು ಹೆಚ್ಚು ಸಂಪತ್ತಿರುವವರನ್ನು ಆಕರ್ಷಿಸಲು ಸೃಷ್ಟಿಸಲಾಗಿದೆ. ಇನ್ನು ಅಮೆರಿಕ ಮಾತ್ರವಲ್ಲದೇ, 100ಕ್ಕೂ ಹೆಚ್ಚು ದೇಶಗಳು ಹೂಡಿಕೆದಾರರಿಗೆ ಗೋಲ್ಡನ್ ವೀಸಾ ನೀಡುತ್ತವೆ. ಯುಎಇ 10 ವರ್ಷಗಳ ವೀಸಾ ನೀಡಲಾಗುತ್ತದೆ. ಯುರೋಪಿನ ಕೆಲವು ದೇಶಗಳಲ್ಲಿ, ಆಸ್ತಿ ಖರೀದಿಸುವ ಮೂಲಕ ವೀಸಾ ಪಡೆಯಬಹುದು. ಇನ್ನು ಯುಎಇ ವಿತರಿಸುವ ಗೋಲ್ಡನ್ ವೀಸಾದ ವಿಶೇಷತೆ ಏನೆಂದು ತಿಳಿಯುವುದಾದರೆ..
ಯುಎಇ ಗೋಲ್ಡನ್ ವೀಸಾ ವಿಶೇಷತೆಗಳು:
ಒಂದು ವೇಳೆ ನೀವು 2 ಮಿಲಿಯನ್ AED ಅಂದರೆ ಭಾರತೀಯ ಕರೆನ್ಸಿಯಲ್ಲಿ ₹48 ಕೋಟಿ ಹೂಡಿಕೆ ಮಾಡಿದರೆ, 10 ವರ್ಷಗಳ ವೀಸಾ ಪಡೆಯಬಹುದು. ದುಬೈ, ಅಬುಧಾಬಿ ಮುಂತಾದ ಪ್ರದೇಶಗಳಲ್ಲಿ ಸುಲಭವಾಗಿ ಆಸ್ತಿ ಖರೀದಿಸಲು ಅವಕಾಶ ಸಿಗುತ್ತದೆ. ವ್ಯವಸ್ಥಿತ ವೀಸಾ ಪ್ರಕ್ರಿಯೆಗೆ, ಕಡಿಮೆ ತೆರಿಗೆ ಕೂಡ ಸಿಗುತ್ತದೆ. ಹೂಡಿಕೆದಾರರು ತಮ್ಮ ಕುಟುಂಬದ ಸದಸ್ಯರನ್ನು ಕೂಡ ಕರೆದುಕೊಳ್ಳಬಹುದು.
ಯಾರಿಗೆ ಇದು ಲಾಭದಾಯಕ?
ಈ ಗೋಲ್ಡನ್ ವೀಸಾ ಉದ್ಯಮಿಗಳಿಗೆ, ಹೂಡಿಕೆದಾರರಿಗೆ, ಉನ್ನತ ವೃತ್ತಿಪರರಿಗೆ ಅಂತರೆ ಡಾಕ್ಟರ್, ಇಂಜಿನಿಯರ್, ಆರ್ಥಿಕ ತಜ್ಞರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡ ಬಯಸುವವರಿಗೆ, ಕಡಿಮೆ ತೆರಿಗೆ ಇರುವ ದೇಶಗಳಲ್ಲಿ ಬಿಸಿನೆಸ್ ಮಾಡಬೇಕಾದವರಿಗೆ ಈ ಗೋಲ್ಡನ್ ವೀಸಾ ಬಹಳಷ್ಟು ಉಪಯುಕ್ತವಾಗಿದೆ. ತೆರಿಗೆ ಕಡಿಮೆ ಇರುವ ಸ್ಥಳಗಳಲ್ಲಿ ಆಸ್ತಿ ಖರೀದಿಸಲು, ಉತ್ತಮ ಜೀವನಶೈಲಿ ಮತ್ತು ಜಾಗತಿಕ ಚಲನಶೀಲತೆಗಾಗಿ ಉತ್ತಮವಾಗಿದೆ. ಅಲ್ಲದೇ ಬಾಡಿಗೆ ಆದಾಯ ಹೆಚ್ಚು, ಆಸ್ತಿಯ ಬೆಲೆಗಳು ವರ್ಷಕ್ಕೊಂದು ಸರಾಸರಿ 5-10% ಹೆಚ್ಚಾಗುತ್ತವೆ. ದುಬೈಯಲ್ಲಿನ ತೆರಿಗೆ ವ್ಯವಸ್ಥೆ ಸರಳ, ಕೇವಲ 4% transfer fee ಮಾತ್ರ ಪಾವತಿಸಬೇಕಾಗುತ್ತದೆ.
ಗೋಲ್ಡನ್ ವೀಸಾ ಹೇಗೆ ಕೆಲಸ ಮಾಡುತ್ತದೆ..?
ಆಸ್ತಿ ಖರೀದಿಸುವ ಉದ್ದೇಶ ಹೊಂದಿದ್ದರೆ, ಉದ್ಯಮದಲ್ಲಿ ಹೂಡಿಕೆ ಮಾಡುವುದು ಅಥವಾ ಸರ್ಕಾರಕ್ಕೆ ದೇಣಿಗೆ ನೀಡುವುದು ಇತ್ಯಾದಿ ಮಾರ್ಗಗಳ ಮೂಲಕ ಗೋಲ್ಡನ್ ವೀಸಾ ಪಡೆಯಬಹುದು. ಇದರೊಂದಿಗೆ ನೀವು ನಿರ್ದಿಷ್ಟ ಅವಧಿಗೆ ಅಂದರೆ, ಹೆಚ್ಚಾಗಿ 5-10 ವರ್ಷ ಆ ದೇಶದಲ್ಲಿ ವಾಸಿಸುವ ಹಕ್ಕನ್ನು ಪಡೆಯುತ್ತೀರಿ. ಕೆಲವು ದೇಶಗಳಲ್ಲಿ, ನೀವು ಪೌರತ್ವಕ್ಕೂ ಅರ್ಜಿ ಹಾಕಬಹುದು, ಆದರೆ ಯುಎಇ (ದುಬೈ) ಮಾತ್ರ ರೆಸಿಡೆನ್ಸಿ ವೀಸಾ ನೀಡುತ್ತದೆ, ಪೌರತ್ವ ನೀಡುವುದಿಲ್ಲ.
ಯುಎಇ (ದುಬೈ) ಗೋಲ್ಡನ್ ವೀಸಾ ಏಕೆ ಇಷ್ಟು ಜನಪ್ರಿಯ?
ದುಬೈನಲ್ಲಿ Income Tax, Capital Gains Tax ಇಲ್ಲ. ಹೀಗಾಗಿ ಐಷಾರಾಮಿ ವಾಸಸ್ಥಾನ, ಉತ್ತಮ ಆರೋಗ್ಯ ಸೇವೆ ಹಾಗೂ ಶಿಕ್ಷಣದೊಂದಿಗೆ ಉತ್ತಮ ಜೀವನಶೈಲಿಯನ್ನು ಪಡೆಯಬಹುದು. ಪತ್ನಿ, ಮಕ್ಕಳು ಕೆಲವು ಸಂದರ್ಭದಲ್ಲಿ ಪೋಷಕರಿಗೂ ವೀಸಾ ಸಿಗುತ್ತದೆ.
ನೀವು ಗೋಲ್ಡನ್ ವೀಸಾ ಪಡೆಯಲು ಯೋಗ್ಯರಾಗಿರುವಿರಾ?
ಒಂದು ದೇಶದಲ್ಲಿ ಹೂಡಿಕೆ ಮಾಡುವ ಮೊದಲು ಅದರ ನಿಯಮಗಳು ಮತ್ತು ಲಾಭಗಳನ್ನು ಮನಗಾಣುವುದು ಮುಖ್ಯ. ಯುಎಇ ಮತ್ತು ಅಮೆರಿಕದಲ್ಲಿ ತೆರಿಗೆ ಕಡಿಮೆ, ಹೂಡಿಕೆ ಮಾಡಿದರೆ ನೆಲೆಸಲು ಸುಲಭವಾದ ಅವಕಾಶಗಳಿವೆ. ಹೀಗಾಗಿ ಶ್ರೀಮಂತ ಜನರು ತಮ್ಮ ಹಣವನ್ನು ಆಸ್ತಿ, ಉದ್ಯಮ, ಹೂಡಿಕೆ ಮೂಲಕ ಬೆಳೆಸಲು ಈ ಗೋಲ್ಡನ್ ವೀಸಾ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.


Click it and Unblock the Notifications