ಗೋಲಿ ಸೋಡಾ ಎಂದ ಕ್ಷಣ ಎಲ್ಲರಿಗೂ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಅಂದು ಬಾಯಾರಿಕೆ ತಣಿಸುವ ಡ್ರಿಂಕ್ಸ್ ಅಂದ್ರೆ ಗೋಲಿಸೋಡಾ. ಈಗಿನಂತೆ ಸಾಲು ಸಾಲು ತಂಪು ಪಾನೀಯಗಳು ಇರಲಿಲ್ಲ. ಕಡು ಹಸಿರು ಬಣ್ಣದ ಬಾಟಲ್, ಅದರೊಳಗೆ ಗೋಲಿಯನ್ನು ಗಮನಿಸಿತ್ತಾ ಪಾನೀಯ ಹೊಟ್ಟೆಗಿಳಿಸಿದ ಬಾಲ್ಯದ ನೆನಪುಗಳು ಇಂದು ಯಾವ ತಂಪು ಪಾನೀಯ ಕುಡಿದರೂ ಸಿಗದು ಆ ಸಂತೋಷ...

ಇದೀಗ ವಿಚಾರ ಏನಪ್ಪಾಅಂದ್ರೆ ಭಾರತದ ಸಾಂಪ್ರದಾಯಿಕ ಪಾನೀಯ ಗೋಲಿ ಸೋಡಾಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ. ಭಾರತೀಯ ಸಂಸ್ಕೃತಿಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯು ಗೋಲಿ ಸೋಡಾದ ಜನಪ್ರಿಯತೆಗೆ ಕಾರಣವಾಗಿದ್ದು, ಅಮೆರಿಕ, ಬ್ರಿಟನ್, ಯುರೋಪ್ ಮತ್ತು ಗಲ್ಪ್ ರಾಷ್ಟ್ರಗಳಲ್ಲಿ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಹೊಸ ರುಚಿಗಳಲ್ಲಿಯೂ ಗೋಲಿ ಸೋಡಾಗಳ ಪರಿಚಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ತಕ್ಕಂತೆ ಹೊಸ ಬ್ರಾಂಡ್ ಹೆಸರುಗಳಲ್ಲಿ ಪರಿಚಯಿಸುತ್ತಿರುವುದು ವಿದೇಶಿ ಮಾರುಕಟ್ಟೆಗೆ ಪ್ರವೇಶ ಪಡೆಯಲು ಪ್ರಮುಖ ಕಾರಣವಾಗಿದೆ.
ಫೇರ್ ಎಕ್ಸ್‌ಪೋರ್ಟ್ಸ್‌ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ, ಭಾರತವು ಗೋಲಿ ಸೋಡಾದ ಸ್ಥಿರ ವಿತರಣೆಯನ್ನು ಖಚಿತಪಡಿಸಿದೆ. ಗೋಲಿ ಸೋಡಾವನ್ನು ಗೋಲಿ ಪಾಪ್ ಸೋಡಾ ಎಂದು ಮರುನಾಮಕರಣ ಮಾಡಲಾಗಿದ್ದು, ಇದು ಗಲ್ಫ್ ನ ಅತಿದೊಡ್ಡ ಚಿಲ್ಲರೆ ಸರಪಳಿಗಳಲ್ಲಿ ಒಂದಾದ ಲುಲು ಹೈಪರ್‌ಮಾರ್ಕೆಟ್‌ಗೆ ಪೂರೈಕೆಯಾಗುತ್ತಿದೆ. ಈ ಸಹಯೋಗವು ಜಾಗತಿಕ ಮಾರುಕಟ್ಟೆಗಳಿಗೆ ಪಾನೀಯದ ಯಶಸ್ವಿ ಪ್ರವೇಶದ ಬಗ್ಗೆ ಹೇಳುವುದಲ್ಲದೇ , ಈಗಾಗಲೇ ಪ್ರಾಯೋಗಿಕ ಸಾಗಾಟಗಳು ಅಮೆರಿಕ, ಯುಕೆ, ಯುರೋಪ್ ಮತ್ತು ಗಲ್ಫ್ ದೇಶಗಳಿಗೆ ತಲುಪಿದೆ.
ಬಹುರಾಷ್ಟ್ರೀಯ ಪಾನೀಯ ಕಂಪನಿಗಳ ಪ್ರಾಬಲ್ಯದಿಂದಾಗಿ ಮರೆಯಾಗುತ್ತಿದ್ದ ಗೋಲಿ ಸೋಡಾದ ಪುನರುಜ್ಜೀವನವು, ಭಾರತದ ಸಾಂಪ್ರದಾಯಿಕ ಆಹಾರ ಮತ್ತು ಪಾನೀಯಗಳನ್ನು ಜಾಗತಿಕವಾಗಿ ಪರಿಚಯಿಸುವ ಮತ್ತು ರಫ್ತು ಮಾಡುವ ಪ್ರಯತ್ನ ಒಂದು ದೊಡ್ಡ ಸಾಧನೆ ಅಂದ್ರೆ ತಪ್ಪಾಗಲಾರದು. ಗೋಲಿ ಪಾಪ್ ಸೋಡಾದ ವಿಶೇಷ ಪ್ಯಾಕಿಂಗ್, ಹಾಗೂ ಪಾಪ್ ಅನ್ನುತ್ತಾ ಗೋಲಿ ಸೋಡಾ ಓಪನ್ ಆಗುವ ರೀತಿಯೇ ಇದರ ಹೆಸರು ಹೇಳಿದ ಕ್ಷಣ ಭಾರತೀಯ ಗ್ರಾಹಕರಿಗೆ ಹಳೆಯ ಮಧುರ ನೆನಪುಗಳನ್ನು ಮರುಕಳಿಸುತ್ತವೆ. ಇದೀಗ ನಮ್ಮ ಭಾರತದ ಮೂಲದ ಗೋಲಿಸೋಡಾ ಮರುಬ್ರಾಂಡಿಂಗ್ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಆಕರ್ಷಿಸಿದ್ದು, ಪಾನೀಯವನ್ನು ಅತ್ಯಾಕರ್ಷಕ ಮತ್ತು ಟ್ರೆಂಡಿ ಉತ್ಪನ್ನವಾಗಿ ಮುಂದಡಿ ಇಡಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಗೋಲಿ ಪಾಪ್ ಸೋಡಾಕ್ಕೆ ಹೆಚ್ಚುತ್ತಿರುವ ಬೇಡಿಕೆಯು, ಭಾರತೀಯ ರುಚಿಗಳು ಅಂತರರಾಷ್ಟ್ರೀಯ ಪಾನೀಯ ಮಾರುಕಟ್ಟೆಯ ದೈತ್ಯರೊಂದಿಗೆ ಸ್ಪರ್ಧಿಸಬಲ್ಲವು ಎಂಬುದನ್ನು ಸಾಬೀತುಪಡಿಸುತ್ತಿದೆ, ಇದು ದೇಶೀಯ ರಫ್ತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಭಾರತದ ಸಾಂಪ್ರದಾಯಿಕ ರುಚಿ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ಸಹಾಯ ಮಾಡುತ್ತದೆ.
ಬ್ರಿಟನ್ ನಲ್ಲಿ, ಗೋಲಿ ಪಾಪ್ ಸೋಡಾ ವೇಗವಾಗಿ ಜನಪ್ರಿಯವಾಗುತ್ತಿದೆ, ಆಧುನಿಕ ಸ್ಪರ್ಶದೊಂದಿಗೆ ಸಾಂಪ್ರದಾಯಿಕ ಭಾರತೀಯ ರುಚಿಗಳನ್ನು ಮೆಚ್ಚುವ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಬೆಳವಣಿಗೆಯು ಜಾಗತಿಕ ವೇದಿಕೆಯಲ್ಲಿ ಭಾರತದ ಶ್ರೀಮಂತ ಪಾನೀಯ ಸಂಸ್ಕೃತಿಯನ್ನು ಪ್ರದರ್ಶಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಮಹತ್ವದ ಬೆಳವಣಿಗೆ ಇತ್ತೀಚೆಗೆ ABNN ಆಯೋಜಿಸಿದ್ದ ಗೋಲಿ ಪಾಪ್ ಸೋಡಾದ ಅಧಿಕೃತ ಜಾಗತಿಕ ಬಿಡುಗಡೆ ಸಮಾರಂಭವನ್ನು APEDA ಬೆಂಬಲ ನೀಡಿತು. ಈ ಕಾರ್ಯಕ್ರಮವು ಅಧಿಕೃತ, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪ್ರಚಾರ ಮಾಡುವ ಮತ್ತು ಅಂತರರಾಷ್ಟ್ರೀಯ ಪಾನೀಯ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಎತ್ತಿ ತೋರಿಸಿತು.
ಗೋಲಿ ಸೋಡಾ ಇಂದು ಒಂದು ಪಾನೀಯವಾಗಿ ಉಳಿದಿಲ್ಲ. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಹಾಗೂ ನಮ್ಮ ದೇಶದ ವಿಭಿನ್ನ ಪಾನೀಯ ಉದ್ಯಮದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿ ಹೇಳುತ್ತಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಇದರ ಯಶಸ್ಸು, ಭಾರತೀಯ ರುಚಿಗಳು ಅಂತರಾಷ್ಟ್ರೀಯ ದೈತ್ಯ ಕಂಪನಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಸಾಬೀತುಪಡಿಸುತ್ತಿದೆ.


Click it and Unblock the Notifications