ಹೊಸ ವರ್ಷದ (New Year) ಆಗಮನಕ್ಕೆ ಇಡೀ ದೇಶವೇ ಸಜ್ಜಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ 2025 ಕಳೆದು 2026 ಬರಲಿದೆ. ಅದರಲ್ಲೂ ಬೆಂಗಳೂರು ನಗರ (Bengaluru City) ಕಲರ್‌ಫುಲ್ ಲೈಟಿಂಗ್ಸ್, ಡಿಜೆ ಸೌಂಡ್ಸ್‌ನೊಂದಿಗೆ ಕುಣಿಯಲು ಸಿದ್ಧವಾಗಿದೆ. ಅತ್ತ ಪಾರ್ಟಿ ಮಾಡೋರಿಗೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ, ಇತ್ತ ಮೆಟ್ರೋ, ಬಿಎಂಟಿಸಿ (Namma Metro, BMTC) ಇಲಾಖೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಹೊಸ ವರ್ಷಾಚರಣೆಯಲ್ಲಿ ಲೇಟ್ ನೈಟ್ ಟ್ರಾವೆಲ್ ಮಾಡೋರಿಗಾಗಿ ಇದೀಗ ನಮ್ಮ ಮೆಟ್ರೋ, ಬಿಎಂಟಿಸಿ ಇಲಾಖೆ ಸಿಹಿಸುದ್ದಿ ಕೊಟ್ಟಿದೆ ನೋಡಿ. ಅದೇನೆಂದು ತಿಳಿಯುವ ಕುತೂಹಲ ನಿಮಗಿದ್ರೆ ಈ ಸುದ್ದಿ ಓದಿ.
ಹೆಚ್ಚುವರಿ BMTC ಬಸ್ ಓಡಾಟ
ಡಿಸೆಂಬರ್ 31 ರಂದು ಬೆಂಗಳೂರಿನ ಬಹುತೇಕ ನಗರಗಳಲ್ಲಿ ಹೊಸ ವರ್ಷಾಚರಣೆ ನಡೆಸಲಾಗುತ್ತದೆ. ಇದೀಗ ಈ ದಿನ ಬಿಎಂಟಿಸಿ ಬಸ್‌ಗಳು ಕೂಡಾ ತಡರಾತ್ರಿವರೆಗೂ ಸೇವೆ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಜನರ ಅನುಕೂಲದ ದೃಷ್ಟಿಯಿಂದ ಎಂ.ಜಿ ರೋಡ್, ಬ್ರಿಗೇಡ್ ರೋಡ್‌ನಿಂದ ನಗರದ ವಿವಿಧ ಸ್ಥಳಗಳಿಗೆ ಈ ಬಸ್‌ಗಳು ಓಡಾಡಲಿದೆ ಎಂದು ಹೇಳಲಾಗಿದೆ. ರಾತ್ರಿ 11 ಗಂಟೆಯ ನಂತರ ತಡರಾತ್ರಿ 2 ಗಂಟೆಯವರೆಗೂ ಹೆಚ್ಚುವರಿ ಬಸ್‌ಗಳು ನಗರದಲ್ಲಿ ಓಡಾಟ ನಡೆಸಲಿದ್ದು, ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದೆ.
ಅಷ್ಟೇ ಅಲ್ಲದೇ ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ ಕೆಹೆಚ್‌ಬಿ ಕ್ವಾಟರ್ಸ್, ಜನಪ್ರಿಯ ಟೌನ್ ಶಿಪ್, ನೆಲಮಂಗಲ, ಯಲಹಂಕ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಸೇರಿ ಹಲವೆಡೆ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆಗಳನ್ನು ನೀಡಲಿದೆ.
ತಡರಾತ್ರಿಯವರೆಗೆ ಮೆಟ್ರೋ ಸೇವೆ:
ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಗರದಲ್ಲಿ ಸಂಚಾರ ಸೇವೆಗಳನ್ನು ತಡರಾತ್ರಿವರೆಗೆ ವಿಸ್ತರಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದು ಹೊಸ ವರ್ಷಾಚರಣೆಯಲ್ಲಿ ತೊಡಗಿರುವ ಪ್ರಯಾಣಿಕರು ಸುರಕ್ಷಿತವಾಗಿ ಮತ್ತು ಸುಗಮ ಸಂಚಾರ ಮಾಡಲು ಅನುಕೂಲವಾಗಲಿದೆ.
ಡಿಸೆಂಬರ್ 29ರ ಪ್ರಕಟಣೆಯಂತೆ, BMRCL ತನ್ನ ಪರ್ಪಲ್, ಗ್ರೀನ್ ಮತ್ತು ಯೆಲ್ಲೋ ಮಾರ್ಗಗಳಲ್ಲಿ ಜನವರಿ 1, 2026ರ ತಡರಾತ್ರಿಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ. ಡಿಸೆಂಬರ್ 31, 2025ರ ಮಧ್ಯರಾತ್ರಿಯ ನಂತರವೂ ಮೆಟ್ರೋ ಸೇವೆಗಳು ಲಭ್ಯವಿದ್ದು, ಹೊಸ ವರ್ಷ ಅಂದರೆ ಜನವರಿ 1 ರ ಮುಂಜಾನೆಯೇ ಕೊನೆಯ ರೈಲುಗಳು ಹೊರಡಲಿವೆ.
ಪರ್ಪಲ್ ಲೈನ್
ಪರ್ಪಲ್ ಮಾರ್ಗದಲ್ಲಿ, ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದ ಕಡೆಗೆ ಕೊನೆಯ ರೈಲು ಬೆಳಗಿನ ಜಾವ 1:45ಕ್ಕೆ ಹೊರಡಲಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಕಡೆಗೆ ಬೆಳಗಿನ ಜಾವ 2 ಗಂಟೆಯವರೆಗೆ ರೈಲು ಕಾರ್ಯನಿರ್ವಹಿಸುತ್ತಿರುತ್ತದೆ.
ಗ್ರೀನ್ ಲೈನ್
ಅದೇ ರೀತಿ ಗ್ರೀನ್ ಲೈನ್‌ನಲ್ಲಿ, ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ಗೆ ಮತ್ತು ಅಲ್ಲಿಂದ ರಿಟರ್ನ್ ಬೆಳಗಿನ ಜಾವ 2 ಗಂಟೆಯವರೆಗೆ ಮೆಟ್ರೋ ಕಾರ್ಯನಿರ್ವಹಿಸುತ್ತದೆ. ಯೆಲ್ಲೋ ಮಾರ್ಗದಲ್ಲಿ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ಕಡೆಗೆ ಕೊನೆಯ ರೈಲು ಬೆಳಗಿನ ಜಾವ 3:10ಕ್ಕೆ ಹೊರಡಲಿದೆ.
ಆದರೆ, ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಯ ಕಡೆಗೆ ಸೇವೆಗಳು ಬೆಳಗಿನ ಜಾವ 1:30ರವರೆಗೆ ಮಾತ್ರ ಲಭ್ಯವಿರಲಿದೆ.


Click it and Unblock the Notifications