ಕರಾವಳಿಗರಿಗೆ ನಿಜಕ್ಕೂ ಇದೊಂದು ಸಿಹಿಸುದ್ದಿ. ಯಾಕೆಂದರೆ ಬಹುನಿರೀಕ್ಷಿತ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಕರ್ನಾಟಕ ಜಲಸಾರಿಗೆ ಮಂಡಳಿ ಕೊನೆಗೂ ಅನುಮೋದನೆ ನೀಡಿದೆ.
ಇದು ಕರ್ನಾಟಕದಲ್ಲೇ ಮೊತ್ತ ಮೊದಲ ವಾಟರ್ ಮೆಟ್ರೋ ಯೋಜನೆಯಾಗಿದ್ದು ಇದರಿಂದ ಗುರುಪುರ ಮತ್ತು ನೇತ್ರಾವತಿ ನದಿ ಪ್ರದೇಶದ ಜನರಿಗೆ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ಈ ಯೋಜನೆಯು ಮಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದ್ದು, ಈ ಯೋಜನೆಯ ಶೀಘ್ರ ಅನುಷ್ಟಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಸಿಎಂ ಅವರ ಅಧಿಕೃತ ನಿವಾಸ ಹಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜರಗಿದ ಕರ್ನಾಟಕ ಜಲಸಾರಿಗೆ ಮಂಡಳಿ ಸಭೆಯಲ್ಲಿ 'ಕರ್ನಾಟಕ ಜಲ ಸಾರಿಗೆ ನೀತಿ ೨೦೨೪' ಬಿಡುಗಡೆ ಮಾಡಲಾಯಿತು. ಈ ವೇಳೆ, ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಭಾಗವಹಿಸಿದ್ದರು. ಈ ವೇಳೆ ಸಭೆಯಲ್ಲಿ ಮಂಗಳೂರಿನ ಗುರುಪುರ-ನೇತ್ರಾವತಿ ನದಿಯಲ್ಲಿ ಆರಂಭಿಸಲಿರುವ ವಾಟರ್ ಮೆಟ್ರೋ ಯೋಜನೆಯ ಸಂಬಂಧ ಪ್ರಸ್ತಾವನೆ ಮಂಡಿಸಲಾಯಿತು. ಈ ಬಗ್ಗೆ ಚರ್ಚಿಸಿ ಯೋಜನೆ ಕಾರ್ಯಗತಗೊಳಿಸಲು ಮುಖ್ಯಮಂತ್ರಿ ಅನುಮೋದನೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಗರಮಾಲಾ ಯೋಜನೆಯಡಿ ಮಂಗಳೂರಿನಲ್ಲಿ ಕರ್ನಾಟಕ ಜಲಸಾರಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಸಿಎಂ ಒಪ್ಪಿಗೆ ನೀಡಿದರು.
ಕೇರಳದ ಕೊಚ್ಚಿನ್ ಭಾರತದ ಪ್ರಪ್ರಥಮ ವಾಟರ್ ಮೆಟ್ರೋ ಹೊಂದಿರುವ ನಗರ. ಇದೇ ಮಾದರಿಯಲ್ಲಿ ಈ ಯೋಜನೆ ಕಾರ್ಯಗತಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 17 ಪಾಯಿಂಟ್‌ಗಳನ್ನು ಒಳಗೊಂಡ 30 ಕಿ.ಮೀ ಉದ್ದದ ಮಾರ್ಗವು ಮಂಗಳೂರಿನ ಹಲವು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ. ಕುಳೂರು ಸೇತುವೆ, ಹೊಸ ಮಂಗಳೂರು ಬಂದರು, ಸುಲ್ತಾನ್ ಬ್ಯಾಟರಿ, ತಣ್ಣೀರುಬಾವಿ ಮತ್ತು ಹಳೆಯ ಬಂದರು ಮುಂತಾದ ಸ್ಥಳಗಳಿಗೆ ಜಲಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲಾಗಲಿದ್ದು ಇದರಿಂಡ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಳನಾಡು ಸಾರಿಗೆ ಪ್ರಾವಾಸೋಧ್ಯಮಕ್ಕೆ ವಿಪುಲ ಅವಕಾಶವಿದೆ. ನೇತ್ರಾವತಿ ನದಿ ಹರಿಯುತ್ತಿರುವುದು ಅಡ್ಯಾರ್ ನಿಂದ ಅಳಿವೆ ಬಾಗಿಲು ವರೆಗೆ ಹಾಗೂ ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ಆರಂಭಿಸಿ ತಣ್ಣೀರುಬಾವಿವರೆಗೆ ನದಿ ಪೂರ್ತಿಯಾಗಿ ಹರಿಯುತ್ತಿರುವುದರಿಂದ ಭಟ್ಕಳದವರೆಗೆ ಪ್ರಥಮ ಹಂತದಲ್ಲಿ ಹಲವಾರು ಕಡೆಗಳಲ್ಲಿ ನಿಲ್ಲುವ ವ್ಯವಸ್ಥೆಯಲ್ಲಿ ಸುಂದರ ಪ್ರಕೃತಿ ಕಾಣಬಹುದು. ಬೋಟ್‌ಗಳಿಗೂ, ಪ್ರವಾಸಿಗರಿಗೂ ತಾಣಗಳಿಗೂ ಈ ಪ್ರದೇಶಗಳು ಅತ್ಯಂತ ಸೂಕ್ತ ಎಂದು ಅಂದಾಜಿಸಲಾಗಿದೆ.
ಕೇರಳದ ಕೊಚ್ಚಿನ್ ನಲ್ಲಿ ಮೊದಲ ವಾಟರ್ ಮೆಟ್ರೋ:
ಭಾರತದಲ್ಲಿಯೇ ಮೊದಲ ಜಲ ಮೆಟ್ರೋ ಎಂಬ ಕೀರ್ತಿಗೆ ಭಾಜನವಾಗಿರುವ ಕೊಚ್ಚಿ, ಜಲಮಾರ್ಗವನ್ನು ಆಧುನಿಕ ಸಾರಿಗೆ ವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ಪರಿಚಯಿಸಿದೆ.2023ರ ಏಪ್ರಿಲ್ 25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದ್ದು ಇದು ಅಲ್ಲಿನ ನಗರ ಸಾರಿಗೆ ಸಂಪರ್ಕಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ.
ಕೊಚ್ಚಿ ಜಲಸಾರಿಗೆಯಲ್ಲಿ 28 ಬೋಟ್ ಮತ್ತು ವಾಟರ್ ಮೆಟ್ರೋ ಟರ್ಮಿನಲ್ ಒಳಗೊಂಡಿದ್ದು, ಕೊಚ್ಚಿಯನ್ನು ಆವರಿಸಿರುವ ವೆಂಬನಾಡ್ ಸರೋವರದಲ್ಲಿ ಬರುವ 10 ದ್ವೀಪಗಳನ್ನು ಇದು ಸಂಪರ್ಕ ಮಾಡಲಿದೆ. ಒಟ್ಟು 76 ಕಿಲೋಮೀಟರ್ ಉದ್ದದ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಏರ್ ಕಂಡೀಷನ್ ಇರುವ ಈ ಮೆಟ್ರೋ ಸಾರಿಗೆಯು ಕೊಚ್ಚಿ ಮೆಟ್ರೋ ರೈಲು ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದು, ಬಸ್ ಟರ್ಮಿನಲ್ ಮತ್ತು ಮೆಟ್ರೋ ನೆಟ್‌ವರ್ಕ್ ಮತ್ತು ರೈಲ್ವೆ ಜೊತೆ ಸಂಪರ್ಕ ಆಗುವಂತಿದೆ. ಕೊಚ್ಚಿ ವಾಟರ್ ಮೆಟ್ರೋದಲ್ಲಿ 100 ಮತ್ತು 50 ಜನರ ಸಾಮರ್ಥ್ಯದ ಎರಡು ಮಾದರಿಯ ಪ್ಯಾಸೆಂಜರ್ ಬೋಟ್ ಅನ್ನು ಅಳವಡಿಸಲಾಗಿದೆ.


Click it and Unblock the Notifications