ನಮ್ಮ ಮೆಟ್ರೋ (Namma Metro), ಇಂದು ಬೆಂಗಳೂರು ನಿವಾಸಿಗಳು ಬಹು ಬೇಡಿಕೆಯ ಸಾರಿಗೆ ವ್ಯವಸ್ಥೆಯಾಗಿದೆ. ಯಾವುದೇ ಸ್ಥಳವನ್ನು ಕ್ಷಣಮಾತ್ರದಲ್ಲಿ ತಲುಪಲು ಮೆಟ್ರೋ ಬಹಳಷ್ಟು ಪ್ರಯೋಜನಕಾರಿ. ಈಗಾಗಲೇ ಬೆಂಗಳೂರಿನಾದ್ಯಂತ ಮೆಟ್ರೋ ವಿಸ್ತರಿಸಿದೆ. ಬಾಕಿ ಉಳಿದಿರುವ ನಗರಗಳಿಗೂ ಮೆಟ್ರೋ ವಿಸ್ತರಣಾ ಕಾರ್ಯ ಕೈಗೊಳ್ಳಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಯೆಲ್ಲೋ ಲೈನ್ ಮೆಟ್ರೋ ಕಾರ್ಯಾರಂಭ ಶುರುವಾಗಿದೆ. ಭಾರೀ ಬೇಡಿಕೆಯ ಮೆಟ್ರೋಗಳಲ್ಲಿ ಯೆಲ್ಲೋ ಲೈನ್ ಕೂಡಾ ಒಂದು. ಈಗಾಗಲೇ 5 ಮೆಟ್ರೋಗಳು ಯೆಲ್ಲೋ ಲೈನ್‌ನಲ್ಲಿ (Yellow Line) ಕಾರ್ಯನಿರ್ವಹಿಸುತ್ತಿತ್ತು. ಇದೀಗ 6 ನೇ ಮೆಟ್ರೋಗೆ ಸಿದ್ಧತೆ ಶುರುವಾಗಿದೆ.

ಯೆಲ್ಲೋ ಲೈನ್‌ಗೆ ಮತ್ತೊಂದು ಮೆಟ್ರೋ!
ಹೌದು, ಈ ತಿಂಗಳ ಆರಂಭದಲ್ಲಿ ಯೆಲ್ಲೋ ಲೈನ್‌ಗೆ 5ನೇ ರೈಲು ಆಗಮಿಸಿತ್ತು. ಇದೀಗ ಈ ತಿಂಗಳಾಂತ್ಯದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಯೆಲ್ಲೋ ಲೈನ್‌ಗೆ ಆರನೇ ಮೆಟ್ರೋ ಆಗಮನವಾಗಲಿದೆ ಎಂದು ವರದಿಯಾಗಿದೆ. ಈ ಮೂಲಕ ಪ್ರಯಾಣಿಕರು ಕಾಯುವ ಸಮಯ 15 ನಿಮಿಷದಿಂದ 10 ನಿಮಿಷಕ್ಕೆ ಇಳಿಕೆಯಾಗಲಿದೆ. ಅಂದರೆ ಇನ್ಮೇಲೆ 10 ನಿಮಿಷಕ್ಕೊಂದು ಯೆಲ್ಲೋ ಲೈನ್‌ನಲ್ಲಿ ಮೆಟ್ರೋ ಸಂಚಾರ ಮಾಡಲಿದೆ.
6 ಬೋಗಿಗಳ ರವಾನೆ:
ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ನಿಂದ 6 ಬೋಗಿಗಳು ಬೆಂಗಳೂರಿಗೆ ತಲುಪಲಿದ್ದು, ಈ ಮೂಲಕ 6 ನೇ ಮೆಟ್ರೋ ರೈಲು ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಪ್ರಸ್ತುತ ಯೆಲ್ಲೋ ಲೈನ್ ಪರಿಸ್ಥಿತಿ:
ಸದ್ಯ ಯೆಲ್ಲೋ ಲೈನ್‌ನಲ್ಲಿ 5 ರೈಲುಗಳು ಸಂಚಾರ ಮಾಡುತ್ತಿದೆ. ಆ ಪ್ರಕಾರ ಪೀಕ್ ಅವರ್‌ನಲ್ಲಿ 15 ನಿಮಿಷಕ್ಕೊಂದರಂತೆ ರೈಲು ಸಂಚರಿಸುತ್ತೆ. ಸಾಮಾನ್ಯ ಸಮಯಗಳಲ್ಲಿ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡುತ್ತಿರುತ್ತದೆ. ಇದೀಗ 6ನೇ ರೈಲು ಯೆಲ್ಲೋ ಲೈನ್‌ನಲ್ಲಿ ಬಂದರೆ ಈ ಸಮಯ ಮತ್ತಷ್ಟು ಕಡಿಮೆಯಾಗುತ್ತದೆ.
ಇನ್ನು ಹೊಸದಾಗಿ ಬರಲಿರುವ ಆರನೇ ರೈಲಿನ ಬೋಗಿಗಳು, ಒಂದು ವಾರದೊಳಗೆ ಅಥವಾ 10 ದಿನಗಳಲ್ಲಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ಸೇರಲಿದೆ. ಆದ್ದರಿಂದ ಈ ರೈಲುಗಳು ಸೇವೆ ಆರಂಭಿಸಿದರೆ ಪ್ರಯಾಣಿಕರ ಕಾಯುವಿಕೆ ಮತ್ತಷ್ಟು ಇಳಿಕೆಯಾಗುತ್ತದೆ. ಅಷ್ಟೇ ಅಲ್ಲದೇ 2026 ಜನವರಿಯಲ್ಲಿ ಮತ್ತೆರಡು ರೈಲುಗಳು ಬರಲಿದ್ದು, ನಂತರ ಪ್ರಸ್ತುತ ಗ್ರೀನ್, ಪರ್ಪಲ್ ಮೆಟ್ರೋ ಮಾರ್ಗಗಳಂತೆ ಹಳದಿ ಮಾರ್ಗದಲ್ಲೂ ಪ್ರತೀ 5 ರಿಂದ 7 ನಿಮಿಷಗಳಿಗೊಮ್ಮೆ ಮೆಟ್ರೋ ರೈಲು ಸಂಚರಿಸಲಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 100 ಡೇಸ್!
ನಮ್ಮ ಮೆಟ್ರೋ ಯೆಲ್ಲೋ ಲೈನ್ ಕಾರ್ಯಾರಂಭವಾಗಿ 100 ದಿನ ಪೂರ್ಣಗೊಂಡಿದೆ. ಇದೀಗ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಕೂಡಾ ಹೆಚ್ಚಾಗಿದ್ದು, ಒಟ್ಟು 1 ಲಕ್ಷ ಏರಿಕೆಯಾಗಿದೆ ಎಂದು ವರದಿಯಾಗಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಆಗಸ್ಟ್ 10 ರಂದು ಚಾಲನೆ ನೀಡಿದರು. ಆರಂಭದಲ್ಲಿ ಮೂರು ರೈಲುಗಳ ಮಾತ್ರ ಸೇವೆ ಸಲ್ಲಿಸುತ್ತಿತ್ತು. ಮೊದಲ ತಿಂಗಳಲ್ಲಿ 50 ಸಾವಿರ ಮಂದಿ ನಿತ್ಯ ಸಂಚಾರ ಮಾಡುತ್ತಿದ್ದ ಜನರು, ಇದೀಗ 100 ದಿನದಲ್ಲಿ ಡಬಲ್ ಆಗಿದೆ.


Click it and Unblock the Notifications