ಬೆಂಗಳೂರು (Bengaluru) ಜನರಿಗೆ ನಮ್ಮ ಮೆಟ್ರೋ (Namma Metro) ಅಗತ್ಯ ಸಾರ್ವಜನಿಕ ಸೇವೆಯಾಗಿಬಿಟ್ಟಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹೆಚ್ಚಿನವರು ಮೆಟ್ರೋಗೆ ಮೊದಲ ಆದ್ಯತೆ ನೀಡುತ್ತಾರೆ. ಈಗಾಗಲೇ ಮೆಟ್ರೋ ಬೆಂಗಳೂರಿನಾದ್ಯಂತ ವಿಸ್ತರಿಸಿದ್ದು, ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯವಿಲ್ಲ. ಈ ವರ್ಷವಷ್ಟೇ ಬೆಂಗಳೂರಿನಲ್ಲಿ ಯೆಲ್ಲೋ ಲೈನ್ ಮೆಟ್ರೋ ಕಾರ್ಯಾರಂಭಗೊಂಡಿದೆ. ಈಗಾಗಲೇ ಈ ಲೈನ್‌ನಲ್ಲಿ 4 ಮೆಟ್ರೋಗಳು ಕಾರ್ಯನಿರ್ವಹಿಸುತ್ತಿದ್ದು, ನಾಳೆಯಿಂದ 5ನೇ ಯೆಲ್ಲೋ ಲೈನ್ ಮೆಟ್ರೋ (5th Yellow Line Metro) ಕಾರ್ಯಾರಂಭ ಶುರು ಮಾಡಲಿದೆ ಎಂದು ವರದಿಯಾಗಿದೆ.

ಕನ್ನಡ ರಾಜ್ಯೋತ್ಸವದ ದಿನವೇ ಬಿಎಂಆರ್‌ಸಿಎಲ್ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಿದ್ದು. ನವೆಂಬರ್ 1 ರಂದು ನಮ್ಮ ಮೆಟ್ರೋದ ಯೆಲ್ಲೋ ಲೈನ್‌ಗೆ ಹೊಸ ರೈಲು ಎಂಟ್ರಿ ಕೊಡಲಿದೆ. ಈ ಮೂಲಕ ಯೆಲ್ಲೋ ಲೈನ್‌ನಲ್ಲಿ 5 ಮೆಟ್ರೋ ರೈಲುಗಳು ಕಾರ್ಯ ನಿರ್ವಹಿಸುತ್ತದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಹೇಳಿರುವಂತೆ, ಈಗಾಗಲೇ ಯೆಲ್ಲೋ ಲೈನ್‌ಗೆ ಹೊಸ ಮೆಟ್ರೋ ರೈಲು ಸುರಕ್ಷತೆ ಮತ್ತು ತಾಂತ್ರಿಕ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ಈಗಾಗಲೇ ಸಾರ್ವಜನಿಕ ಸೇವೆಗೆ ಸಿದ್ಧವಾಗಿರುವ ಈ ರೈಲು ನವೆಂಬರ್‌ನಲ್ಲಿ ಕಾರ್ಯಾರಂಭ ಶುರುಮಾಡಲಿದೆ ಎಂದು ಹೇಳಿದ್ದರು. ಅದರಂತೆ ನಾಳೆಯಿಂದ (ನ.1) ಯೆಲ್ಲೋ ಲೈನ್‌ನ ಐದನೇ ಮೆಟ್ರೋ ರೈಲು ಕಾರ್ಯಾರಂಭ ಮಾಡಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ರೈಲು:
ದಕ್ಷಿಣ ಬೆಂಗಳೂರಿನ ಪ್ರಯಾಣಿಕರು ಅನುಕೂಲಕ್ಕಾಗಿ ಅಂದರೆ, ಸೇವೆಯನ್ನು ಹೆಚ್ಚಿಸಲು ಮತ್ತು ಕಾಯುವ ಸಮಯ ಕಡಿಮೆ ಮಾಡುವ ಉದ್ದೇಶದಿಂದ BMRCL ಈ ಹೊಸ ರೈಲನ್ನು ಪರಿಚಯಿಸಲು ಮುಂದಾಗಿದೆ. ಐದನೇ ನಮ್ಮ ಮೆಟ್ರೋ ರೈಲು ಯೆಲ್ಲೋ ಲೈನ್‌ನಲ್ಲಿ ಸಂಚರಿಸಲಿದ್ದು, ಈ ರೈಲು ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗಗಳಿಗೆ ಸೇವೆ ಸಲ್ಲಿಸಲಿದೆ.
ಇನ್ಮೇಲೆ 19 ನಿಮಿಷ ಅಲ್ಲ, 15 ನಿಮಿಷ!
ಈಗಾಗಲೇ ನಾಲ್ಕು ರೈಲುಗಳು ಯೆಲ್ಲೋ ಲೈನ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ ಪ್ರಯಾಣಿಕರು 19 ನಿಮಿಷಗಳ ಮತ್ತೊಂದು ರೈಲಿಗೆ ಕಾಯಬೇಕಿತ್ತು. ಆದ್ರೆ ಈ ಹೊಸ ರೈಲಿನ ಆಗಮನದಿಂದಾಗಿ ಕಾಯುವ ಸಮಯ 15 ನಿಮಿಷಗಳಿಗೆ ಇಳಿಯಲಿದೆ. ಹಲವು ವರದಿಗಳ ಪ್ರಕಾರ, ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರು ನವೆಂಬರ್ 1, 2025 ರಿಂದ ಐದನೇ ನಮ್ಮ ಮೆಟ್ರೋ ರೈಲು ಸೇವೆಯನ್ನು ಪಡೆಯಬಹುದು.
ಚೀನಾದ CRRC ಕಂಪನಿಯ ಸಹಭಾಗಿತ್ವದೊಂದಿಗೆ, ಟೈಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಭಾರತದಲ್ಲಿ ಸಜ್ಜಾಗುತ್ತಿರುವ ಹಲವಾರು ರೈಲುಗಳಲ್ಲಿ ಈ ರೈಲು ಕೂಡಾ ಒಂದು. ಈಗಾಗಲೇ ಹಲವು ರೈಲುಗಳ ಚಾಲನೆಗೆ ಪ್ಲಾನ್ ಮಾಡಲಾಗಿದ್ದು, ಮುಂಬರುವ ಮಾರ್ಚ್ 2026 ರ ವೇಳೆಗೆ ಇನ್ನಷ್ಟು ರೈಲುಗಳು ಸೇರ್ಪಡೆಗೊಳ್ಳಲಿದ್ದು, ಆಗ ರೈಲುಗಳ ನಡುವಿನ ಅಂತರ 5-6 ನಿಮಿಷಗಳಿಗೆ ಇಳಿಯುವ ನಿರೀಕ್ಷೆಯಿದೆ.
ಇನ್ನು ಹೊಸದಾಗಿ ಆರಂಭವಾದ ಈ ಯೆಲ್ಲೋ ಮೆಟ್ರೋ ಲೈನ್ ಮೆಟ್ರೋ ಎರಡನೇ ಹಂತದ ಯೋಜನೆಯಾಗಿದ್ದು, ಈಗಾಗಲೇ ಈ ಯಲ್ಲೋ ಮಾರ್ಗ 19 ಕಿ.ಮೀ.ಗಿಂತಲೂ ಹೆಚ್ಚು ಉದ್ದವಿದ್ದು, 16 ಸ್ಟೇಸನ್‌ಗಳನ್ನು ಒಳಗೊಂಡಿದೆ. ಅಲ್ಲದೇ ಈ ಯೋಜನೆ ಪೂರೈಸಲು ಸುಮಾರು 7,160 ಕೋಟಿ ರೂ. ವೆಚ್ಚವಾಗಿದೆ.
ವಿಶೇಷ ತಂತ್ರಜ್ಞಾನದೊಂದಿಗೆ ಹಳದಿ ಮಾರ್ಗದ ಮೆಟ್ರೋ!
ಯೆಲ್ಲೋ ಲೈನ್ ಮೆಟ್ರೋಗಳಿಗೆ 'ಕಮ್ಯುನಿಕೇಷನ್-ಬೇಸ್ಡ್ ಟ್ರೈನ್ ಕಂಟ್ರೋಲ್ (CBTC)' ಎಂಬ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಡ್ರೈವರ್ ಇಲ್ಲದೆಯೂ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಸದ್ಯ ಡ್ರೈವರ್ ಜೊತೆಗ ರೈಲು ಓಡಿಸಲಾಗುತ್ತಿದೆ. ಆದ್ರೆ ಮುಂದಿನ ದಿನಗಳಲ್ಲಿ ಬಿಎಂಆರ್‌ಸಿಎಲ್ ಇದನ್ನು ಯಾವಾಗ ಅನಿಷ್ಠಾನಕ್ಕೆ ತರುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications