ಬೆಂಗಳೂರು ಅಕ್ಟೋಬರ್ 2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರವಾಸಿಗಳಿಗೆ ಆಸ್ತಿ ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ಸಂಪರ್ಕರಹಿತ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಕಂದಾಯ ಇಲಾಖೆ ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಬಿಬಿಎಂಪಿ ಇ-ಖಾತಾಗಳ ವಿತರಣೆಗೆ ಸರಳ ಮಾರ್ಗವನ್ನು ಆರಂಭಿಸಿದೆ.
ಹೌದು... ಇನ್ಮುಂದೆ ಆಸ್ತಿ ಮಾಲೀಕರು ಫೇಸ್‌ಲೆಸ್ ಅಂದರೆ ಸಂಪರ್ಕರಹಿತವಾಗಿ ಆನ್‌ಲೈನ್ ಮೂಲಕ ಇ-ಖಾತಾ ಪಡೆಯಬಹುದಾಗಿದೆ. ಇದರಿಂದ ನಾಗರೀಕರಿಗೆ ಅಲೆದಾಡುವುದು ತಪ್ಪಲಿದೆ. ಅಕ್ಟೋಬರ್ 1ರಂದು ಮಂಗಳವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಫೇಸ್‌ಲೆಸ್, ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಗೆ ಚಾಲನೆ ನೀಡಿದರು. ಹಾಗಾದರೆ ಆನ್‌ಲೈನ್ ಮೂಲಕ ಆಸ್ತಿ ಮಾಲೀಕರು ಇ ಖಾತಾವನ್ನು ಹೇಗೆ ಪಡೆಯಬಹುದು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಬಿಎಂಪಿ ದಾಖಲೆಗಳ ಆಧಾರದ ಮೇಲೆ ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಆಸ್ತಿ ಮಾಲೀಕರು ಪಡೆಯಬಹುದು. www.bbmpeaasthi.karnataka.gov.in ನಲ್ಲಿ ನಾಗರಿಕರು ಅವುಗಳನ್ನು ಡೌನ್‌ಲೋಡ್ ಮಾಡಬಹುದು. ಇ-ಖಾತಾಗಳನ್ನು ಪಡೆಯಲು ಕೆಲವು ದಾಖಲಾತಿಗಳು ಅವಶ್ಯವಾಗಿರುತ್ತದೆ. ಆ ದಾಖಲೆಗಳು ಯಾವುವು ಎನ್ನುವ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.
ಇ-ಖಾತಾ ಪಡೆಯಲು ನಾಗರಿಕರು ಆಧಾರ್ ಇ ಕೆವೈಸಿ, ಆಸ್ತಿಯ ಜಿಪಿಎಸ್ ದತ್ತಾಂಶ, ಆಸ್ತಿ ಛಾಯಾಚಿತ್ರಗಳು, ಸ್ವತ್ತಿನ ನೋಂದಾಯಿತ ದಸ್ತಾವೇಜು, ಏಪ್ರಿಲ್ 1, 2004 ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ(ಇಸಿ), ಬೆಸ್ಕಾಂ (ಬೆಂಗಳೂರು ವಿದ್ಯುಚ್ಛಕ್ತಿ ಸಪ್ಲೈ ಕಂಪನಿ ಲಿಮಿಟೆಡ್) ಮೀಟರ್ ಸಂಖ್ಯೆ, ಎ-ಖಾತಾ ಎಂದು ದೃಢೀಕರಿಸುವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದವರಿಗೆ, ಇ-ಖಾತಾ ಪ್ರಕ್ರಿಯೆಯಲ್ಲಿ ಸಹಾಯಕ್ಕಾಗಿ ಸಹಾಯಕ ಕಂದಾಯ ಅಧಿಕಾರಿಯನ್ನು ನೇರವಾಗಿ ಭೇಟಿ ಮಾಡುವ ಆಯ್ಕೆ ಇದೆ. ಸ್ವತ್ತಿನ ಮಾಲೀಕರು ಅಂತಿಮ ಇ ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ಕರಡು ಇ ಖಾತಾವನ್ನು ರಚಿಸಿದ ಏಳು ದಿನಗಳವರೆಗೆ ಆಕ್ಷೇಪಣೆ ಅವಧಿಯನ್ನು ನಿಗಧಿಪಡಿಸಲಾಗಿದೆ. ಇದನ್ನು ಎಆರ್‌ಒ ಪರಿಶೀಲಿಸುತ್ತಾರೆ ಮತ್ತು ನಿರ್ಧರಿಸುತ್ತಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ಅಂತಿಮ ಇ-ಖಾತಾವನ್ನು ವಿತರಿಸಲಾಗುತ್ತದೆ.

ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಪ್ರತ್ಯೇಕವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. ಖಾತಾ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವುದರಿಂದ ಪಾರದರ್ಶಕತೆ ಹೆಚ್ಚಿಸಿದಂತಾಗುತ್ತದೆ ಹಾಗೂ ಸುಲಭವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಖಾತಾ, ಆಸ್ತಿ ಮಾಲೀಕತ್ವ ಮತ್ತು ತೆರಿಗೆ ವಿವರಗಳನ್ನು ಒಳಗೊಂಡಿರುವ ನಿರ್ಣಾಯಕ ದಾಖಲೆಯನ್ನು ಐತಿಹಾಸಿಕವಾಗಿ ಕಾಗದದ ರೂಪದಲ್ಲಿ ನೀಡಲಾಗುತ್ತಿತ್ತು. ಇ-ಆಸ್ತಿ ಮೂಲಕ ಪ್ರಕ್ರಿಯೆಯನ್ನು ಡಿಜಿಟೈಜ್ ಮಾಡುವುದರಿಂದ ಆಸ್ತಿ ದಾಖಲೆಗಳ ಸಮಗ್ರತೆಯನ್ನು ಕಾಪಾಡಬಹುದು. ಇದು ಆಸ್ತಿ ಮಾಲೀಕರು ಮತ್ತು ಖರೀದಿದಾರರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ.
ಇ-ಆಸ್ತಿ ಪ್ಲಾಟ್‌ಫಾರ್ಮ್‌ನಲ್ಲಿ ನಾಗರಿಕರು ಈಗ ಮಾಲೀಕತ್ವ ಮತ್ತು ಆಸ್ತಿ ವಿವರಗಳನ್ನು ಪರಿಶೀಲಿಸಬಹುದು. ಡಿಜಿಲಾಕರ್ ಮೂಲಕ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು. ಡಿಜಿಟಲೀಕರಣ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆಯಾದರೂ, ಬೆಂಗಳೂರಿನ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ಮೋಸದ ಚಟುವಟಿಕೆಗಳನ್ನು ತಡೆಯಲು ಈ ಉಪಕ್ರಮ ಸಹಾಯ ಮಾಡುತ್ತದೆ.


Click it and Unblock the Notifications