ಆರ್‌ಸಿಬಿ ಫ್ಯಾನ್ಸ್‌ಗಳಿಗೆ (RCB Fans) ಕೊನೆಗೂ ಸಿಕ್ತು ಗುಡ್ ನ್ಯೂಸ್. ಮುಂದಿನ ಐಪಿಎಲ್ 19ನೇ ಸೀಸನ್ (IPL 2026) ಬೆಂಗಳೂರಿನಲ್ಲಿ ನಡೆಯುತ್ತಾ? ಇಲ್ವಾ? ಎಂಬ ಗೊಂದಲ ಕ್ರಿಕೆಟ್ ಅಭಿಮಾನಿಗಳಲ್ಲಿ ಸೃಷ್ಟಿಯಾಗಿತ್ತು. ಅದರಲ್ಲೂ ಆರ್‌ಸಿಬಿ ಮ್ಯಾಚ್ ಬೆಂಗಳೂರಿನಲ್ಲಿ (Bengaluru) ನಡೆಯುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈ ಎಲ್ಲಾ ಗೊಂದಲಗಳಿಗೆ ಕಾರಣ ಆ ದೊಡ್ಡ ದುರಂತ. ಹೌದು, ಆರ್‌ಸಿಬಿ ಗೆಲುವನ್ನು ಸಂಭ್ರಮಿಸಲು ಬಂದಿದ್ದ 11 ಜನ ಕಾಲ್ತುಳಿತದಲ್ಲಿ ಸಿಲುಕಿ ದುರಂತವಾಗಿ ಸಾವನ್ನಪ್ಪಿದ್ದರು. ಇದೀಗ ಈ ಎಲ್ಲಾ ಗೊಂದಲಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ತೆರೆ ಎಳೆದಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್!
ಕೆಎಸ್‌ಸಿಎ ಚುನವಾಣೆಯಲ್ಲಿ ಮತದಾನ ಮಾಡಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, "ಇದು ಕರ್ನಾಟಕ ರಾಜ್ಯ ಮತ್ತು ಬೆಂಗಳೂರಿನ ಗೌರವದ ವಿಚಾರ. ಮುಂದಿನ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸಲಾಗುತ್ತದೆ. ನಾನು ಕೂಡಾ ಕ್ರಿಕೆಟ್ ಅಭಿಮಾನಿ. ಆದ್ದರಿಂದ ಕಾನೂನು ಚೌಕಟ್ಟಿನಲ್ಲಿ, ಜನದಟ್ಟಣೆಯನ್ನು ನಿಯಂತ್ರಣದಲ್ಲಿರಿಸಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ನಡೆಸಲಾಗುತ್ತದೆ ಎಂದು ಹೇಳಿದರು.
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂದ್ಯಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು RCBಯ ತವರು ಮೈದಾನ. ಆದ್ದರಿಂದ ಇಲ್ಲೇ ಐಪಿಎಲ್ ಪಂದ್ಯಾಟಗಳು ನಡೆಯುತ್ತವೆ ಎಂದು ಹೇಳುವ ಮೂಲಕ ವದಂತಿಗಳಿಗೆ ಡಿಕೆಶಿ ಬ್ರೇಕ್ ನೀಡಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಡಿ.ಕೆ. ಶಿವಕುಮಾರ್ ಈ ಕುರಿತು ಮಾತನಾಡುತ್ತಾ, "ಇದು ಕರ್ನಾಟಕ ರಾಜ್ಯ ಮತ್ತು ಬೆಂಗಳೂರಿನ ಗೌರವಕ್ಕೆ ಸಂಬಂಧಿಸಿದ ವಿಷಯ. ಮುಂದಿನ ಐಪಿಎಲ್ ಪಂದ್ಯಗಳು ಇಲ್ಲಿಯೇ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಲಭ್ಯವಿರುವ ಎಲ್ಲ ಪಂದ್ಯಗಳನ್ನು ನಡೆಸಲು ನಾವು ಅವಕಾಶ ನೀಡುತ್ತೇವೆ. ನಾನು ಕೆಎಸ್‌ಸಿಎ ಸದಸ್ಯ. ನಾನು ಚಿಕ್ಕವನಿದ್ದಾಗ ನಾಗರಾಜ್ ನನಗೆ ಸದಸ್ಯತ್ವ ನೀಡಿದ್ದರು. ಅವರ ಮಗ ನನ್ನ ಸಹಪಾಠಿ. ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ ಮತ್ತು ಪ್ರಸನ್ನ ಸೇರಿದಂತೆ ಹಲವು ಜನರು ನನಗೆ ಗೊತ್ತಿದೆ. ನನಗೆ ಬೇಕಾದವರಿಗೆ ನಾನು ಮತ ಹಾಕಿದೆ" ಎಂದು ಹೇಳಿದರು.
ಹೊಸ ಕ್ರೀಡಾಂಗಣದ ಭರವಸೆ:
"ನಾನು ಕೂಡಾ ಕ್ರಿಕೆಟ್ ಅಭಿಮಾನಿ. ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ದುರಂತ ಮತ್ತೆ ಸಂಭವಿಸದಂತೆ ನಾವು ನೋಡಿಕೊಳ್ಳುತ್ತೇವೆ ಮತ್ತು ಕ್ರೀಡಾಂಗಣದ ಘನತೆಯನ್ನು ಕಾಪಾಡುತ್ತೇವೆ. ಕಾನೂನು ಚೌಕಟ್ಟಿನೊಳಗೆ ಜನಸಂದಣಿಯನ್ನು ನಿರ್ವಹಿಸುವ ಮೂಲಕ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು. ಇದರ ಜೊತೆಗೆ, ಪರ್ಯಾಯವಾಗಿ ನಾವು ದೊಡ್ಡ ಕ್ರೀಡಾಂಗಣವನ್ನೂ ನಿರ್ಮಿಸುತ್ತೇವೆ" ಎಂದು ಭರವಸೆ ನೀಡಿದರು.
ಹೊಸ ಕ್ರೀಡಾಂಗಣದ ಬಗ್ಗೆ ಮಾತನಾಡಿದ ಡಿಕೆಶಿ "ನಾವು ಪರ್ಯಾಯವಾಗಿ ಒಂದು ದೊಡ್ಡ ಕ್ರೀಡಾಂಗಣವನ್ನು ಕೂಡ ನಿರ್ಮಾಣ ಮಾಡಲಿದ್ದೇವೆ. ಕಳೆದ ವರ್ಷ ಸಂಭವಿಸಿದ ಘಟನೆಗಳು ಮತ್ತು ನಂತರದ ಸಮಸ್ಯೆಗಳ ನಂತರ, ಐಪಿಎಲ್ ಅನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಮಾತುಕತೆಗಳು ನಡೆದಿದ್ದವು. ಆದರೆ ಇಂದಿನಿಂದ ಯಾವುದೇ ಐಪಿಎಲ್ ಅನ್ನು ಸ್ಥಳಾಂತರಿಸಲಾಗುವುದಿಲ್ಲ; ನಾವು ಅದನ್ನು ಇಲ್ಲಿಯೇ ನಡೆಸುತ್ತೇವೆ. ಇದು ಕರ್ನಾಟಕ ಮತ್ತು ಬೆಂಗಳೂರಿನ ಹೆಮ್ಮೆ, ಮತ್ತು ನಾವು ಅದನ್ನು ರಕ್ಷಿಸುತ್ತೇವೆ. ಮುಂದಕ್ಕೆ ಏನು ಮಾಡಬೇಕೋ, ಅದೆಲ್ಲವನ್ನೂ ನೋಡಿಕೊಳ್ಳುತ್ತೇವೆ" ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದರು.
ಒಟ್ಟಾರೆಯಾಗಿ, ಇನ್ನೇನು ಕೆಲವೇ ತಿಂಗಳುಗಳಲ್ಲಿ ಐಪಿಎಲ್ 19ನೇ ಸೀಸನ್ ಆರಂಭವಾಗಲಿದೆ. ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ, ಬೆಂಗಳೂರಿನಲ್ಲಿ ಐಪಿಎಲ್ ನಡೆಯುವುದಿಲ್ಲ, ಸ್ಥಳಾಂತರಗೊಳ್ಳಲಿದೆ ಎಂಬ ವದಂತಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತೆರೆ ಎಳೆದಿದ್ದಾರೆ. ಅಂತೂ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ.


Click it and Unblock the Notifications