ಬೆಂಗಳೂರು, ಜೂನ್ 26: ಕೆಎಂಎಫ್ ಮಂಗಳವಾದ ನಂದಿನಿ ಹಾಲಿನ ಬೆಲೆಯನ್ನು 2 ರೂಪಾಯಿಯಷ್ಟು ಏರಿಸಿ ಈಗ ಕೊಡುತ್ತಿರುವ ಹಾಲಿನ ಪ್ರಮಾಣವನ್ನು 50 ಮಿಲಿಲೀಟರ್ ಹೆಚ್ಚುವರಿಯಾಗಿ ನೀಡಿದೆ. ದರ ಏರಿಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಸಾರ್ವಜನಿಕರು ಖಂಡಿಸಿದ್ದಾರೆ.
ನಂದಿನಿ ಹಾಲಿನ ದರ ಏರಿಸಿರುವುದರಿಂದ ಬೆಂಗಳೂರಿನ ಹೋಟೆಲ್‌ಗಳಲ್ಲಿ ಟೀ, ಕಾಫಿ ದರವೂ ಏರಿಕೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಹೋಟೆಲ್ ಮಾಲೀಕರು ನಾವು ದರ ಏರಿಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಈ ಮೂಲಕ ಕಾಫಿ ಟೀ ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ನಂದಿನಿ ಹಾಲಿನ ದರ ಏರಿಸುವುದರೊಂದಿಗೆ ಹೆಚ್ಚುವರಿಯಾಗಿ ಐವತ್ತು ಮಿಲಿಲೀಟರ್ ಹಾಲು ಸೇರಿಸಿ ನೀಡಲಾಗುತ್ತದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ನಾವು ಕಾಫಿ, ಟೀ ದರಗಳನ್ನು ಹೆಚ್ಚಳ ಮಾಡುವುದಿಲ್ಲ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿಸಿ ರಾವ್ ಪ್ರಜಾವಾಣಿಗೆ ನೀಡಿರುವ ಹೇಳಿಕೆಯನ್ನು ತಿಳಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದ ಜನರು ಆಕ್ರೋಶಗೊಂಡಿದ್ದರು, ಈಗ ದಿಢೀರ್ ಎಂದು ಹಾಲಿನ ಬೆಲೆ ಏರಿಕೆಯಿಂದ ಸಿದ್ದರಾಮಯ್ಯ ಸರ್ಕಾರದ ಮೇಲೆ ಮತ್ತಷ್ಟು ಕ್ರೋಧ ಉಂಟಾಗಿದೆ. ದೇಶದಲ್ಲಿ ಹಣದುಬ್ಬರ ಈಗಾಗಲೇ ಹೆಚ್ಚಾಗಿದೆ. ನಿರುದ್ಯೋಗ ಪ್ರಮಾಣವು ಕೂಡ ಗಗನಮುಖಿಯಾಗಿದೆ.
ನೂತನವಾಗಿ ಅಧಿಕಾರರೂಢರಾಗಿರುವ ನರೇಂದ್ರ ಮೋದಿ ಸರ್ಕಾರವು ಈ ಸವಾಲುಗಳನ್ನು ಎದುರಿಸಬೇಕಾಗಿದೆ. ಮಾನ್ಸೂನ್ ಮಳೆ ಆರಂಭವಾಗಿದ್ದು, ಇತ್ತೀಚೆಗೆ ದುರ್ಬಲವಾಗಿದೆ. ಹೊಲಗಳಲ್ಲಿ ಕಾಳು ಹಾಕಿದ್ದ ರೈತರು ಖುಷಿಯಾಗಿದ್ದು, ಮತ್ತೆ ಭರವಸೆ ಕಳೆದುಕೊಂಡಿದ್ದಾರೆ. ಏನೆ ಆದರೂ ಹಾಲಿನ ಬೆಲೆ ಏರಿಕೆಯು ಕಾಫಿ ಟೀ ಪ್ರಿಯರ ಜೇಬಿಗೆ ಕತ್ತರಿ ಹಾಕುವುದಿಲ್ಲ ಎಂಬುದೆ ದೊಡ್ಡ ಖುಷಿಯಾಗಿದೆ.


Click it and Unblock the Notifications