ನಮ್ಮ ಮೆಟ್ರೋ (Namma Metro) ಸೇವೆ ಜನರ ಅಗತ್ಯ ಮತ್ತು ಅನುಕೂಲಕರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಬೆಂಗಳೂರಿನಾದ್ಯಂತ ವಿಸ್ತರಿಸುತ್ತಿರುವ ನಮ್ಮ ಮೆಟ್ರೋ ಸೇವೆ, ಯಾವುದೇ ಸ್ಥಳಕ್ಕೆ ನಿಗದಿತ ಸಮಯದಲ್ಲಿ ಹೋಗಬೇಕೆಂದರೂ ಅನುಕೂಲವಾಗಲಿದೆ. ಪ್ರಸ್ತುತ ಗ್ರೀನ್, ಪರ್ಪಲ್, ಯೆಲ್ಲೋ ಲೈನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಪಿಂಕ್ ಲೈನ್, ಆರೆಂಜ್, ಬ್ಲೂ ಲೈನ್‌ಗಳು ಸಹ ಕಾರ್ಯಾರಂಭ ಮಾಡಲಿದೆ. ಇದೀಗ ಈ ಮಧ್ಯೆ ಹೊಸ ವರ್ಷದ ಮೊದಲ ತಿಂಗಳಲ್ಲೇ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ಕೊಡಲು ಸಜ್ಜಾಗಿದೆ.

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್
ನಮ್ಮ ಮೆಟ್ರೋದ 3ನೇ ಹಂತದ ಆರೆಂಜ್ ಲೈನ್ (ಜೆಪಿ ನಗರ 4ನೇ ಹಂತದಿಂದ ನಾಗರಭಾವಿವರೆಗೆ) ಸಿವಿಲ್ ಟೆಂಡರ್‌ಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಆಹ್ವಾನಿಸಿದೆ. ಜೆಪಿ ನಗರ, ಹೊಸಕೆರೆಹಳ್ಳಿ, ನಾಗರಭಾವಿ ನಿವಾಸಿಗಳಿಗೆ ಇದು ಭಾರೀ ಮಹತ್ವ ನೀಡಲಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೂ ಭಾರೀ ಪ್ರಯೋಜನವಾಗಲಿದೆ. ಸಾವಿರಾರು ಕೋಟಿ ರೂ. ವೆಚ್ಚದ ಈ ಯೋಜನೆಯು ಮೂರು ಪ್ಯಾಕೇಜ್‌ಗಳಲ್ಲಿ ಡಬಲ್-ಡೆಕ್ಕರ್ ಕಾರಿಡಾರ್‌ಗಳು ಮತ್ತು ನಿಲ್ದಾಣಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ.
ಎಲ್ಲಿಂದ ಎಲ್ಲಿಗೆ?
ಜೆಪಿ ನಗರ 4ನೇ ಹಂತದಿಂದ ನಾಗರಭಾವಿ ಸಂಪರ್ಕಿಸುವ ಮಾರ್ಗದ ನಿರ್ಮಾಣ ಕಾರ್ಯಕ್ಕಾಗಿ ಇದೀಗ ಬಿಎಂಆರ್‌ಸಿಎಲ್ ಈ ಟೆಂಡರ್‌ಗಳನ್ನು ಕರೆದಿದೆ. ಗುತ್ತಿಗೆದಾರರು ಫೆಬ್ರವರಿ 20 ರಿಂದ 25 ರೊಳಗೆ ತಮ್ಮ ಬಿಡ್‌ಗಳನ್ನು ಸಲ್ಲಿಸಬಹುದು. ಯೋಜನೆಯ ಸುಗಮ ಅನುಷ್ಠಾನಕ್ಕಾಗಿ, ಕಾಮಗಾರಿಯ ಮೂರು ಪ್ರತ್ಯೇಕ ಪ್ಯಾಕೇಜ್‌ಗಳಿಗೆ ಪ್ರತ್ಯೇಕ ಬಜೆಟ್ ನಿಗದಿಪಡಿಸಲಾಗಿದೆ.
ಮೂರು ಪ್ಯಾಕೇಜ್‌ಗಳಲ್ಲಿ ಮೆಟ್ರೋ ಮಾರ್ಗ ನಿರ್ಮಾಣ
ಮೊದಲ ಪ್ಯಾಕೇಜ್ ಜೆಪಿ ನಗರ 4ನೇ ಹಂತದಿಂದ ಕಾಮಾಕ್ಯ ಜಂಕ್ಷನ್‌ವರೆಗೆ ವ್ಯಾಪಿಸಿದೆ. ಡಾಲರ್ಸ್ ಕಾಲೋನಿ ಮೇಲ್ಸೇತುವೆ ತೆರವು ಮತ್ತು ಡಬಲ್-ಡೆಕ್ಕರ್ ಮೆಟ್ರೋ ಕಾರಿಡಾರ್ ನಿರ್ಮಾಣ ಇದರ ಭಾಗವಾಗಿದೆ. ಜೆಪಿ ನಗರ 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್‌ನವರೆಗೆ ಒಟ್ಟು ನಾಲ್ಕು ನಿಲ್ದಾಣಗಳು ಇರುತ್ತದೆ. ಇದರ ಅಂದಾಜು ವೆಚ್ಚ ₹1,375 ಕೋಟಿ.
ಪ್ಯಾಕೇಜ್ 2 ಹೊಸಕೆರೆಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ ಕಾಮಗಾರಿ ನಡೆಯುತ್ತದೆ. ಈ ವಿಭಾಗದಲ್ಲೂ ಡಬಲ್-ಡೆಕ್ಕರ್ ನಿರ್ಮಾಣ ಆಗಲಿದೆ. ಹೊಸಕೆರೆಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ ಹಾಗೂ ನಾಗರಭಾವಿ ಸರ್ಕಲ್‌ನಲ್ಲಿ ನಾಲ್ಕು ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಪ್ಯಾಕೇಜ್‌ಗೆ ಒಟ್ಟು ₹1,396 ಕೋಟಿ ಬಜೆಟ್ ಮೀಸಲಾಗಿದೆ.
ಮೂರನೇ ಪ್ಯಾಕೇಜ್ ಎರಡು ಪ್ರಮುಖ ಕಾರಿಡಾರ್‌ಗಳನ್ನು ಒಳಗೊಂಡಿದೆ. ಮೊದಲ ಕಾರಿಡಾರ್ ವಿನಾಯಕ ಲೇಔಟ್‌ನಿಂದ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್‌ವರೆಗೆ ವಿಸ್ತರಿಸಲಿದೆ. ಇದು ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಒಟ್ಟು ಮೂರು ನಿಲ್ದಾಣಗಳನ್ನು ಒಳಗೊಂಡಿದೆ.
ಎರಡನೇ ಕಾರಿಡಾರ್ ಸುಂಕದಕಟ್ಟೆ ನಿಲ್ದಾಣ ಹಾಗೂ ಸುಂಕದಕಟ್ಟೆ ಡಿಪೋದ ಪ್ರವೇಶ-ನಿರ್ಗಮನ ಮಾರ್ಗಗಳನ್ನು ಸಹ ಒಳಗೊಂಡಿರುತ್ತದೆ. ಪ್ಯಾಕೇಜ್ 3 ರ ಅಂದಾಜು ಒಟ್ಟು ವೆಚ್ಚ ₹1,415 ಕೋಟಿ. ಈ ಟೆಂಡರ್ ಪ್ರಕ್ರಿಯೆಯು ಬೆಂಗಳೂರಿನ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಮೆಟ್ರೋ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸಲಿದೆ.


Click it and Unblock the Notifications