ಅದೆಷ್ಟೋ ಯುವಕರು ಜೀವನ ಕಟ್ಟಿಕೊಳ್ಳೋದಕ್ಕಾಗಿ ಹುಟ್ಟೂರು ಬಿಟ್ಟು ಬೆಂಗಳೂರು, ಮುಂಬೈ ಅಂತ ಉದ್ಯೋಗದಲ್ಲಿರುತ್ತಾರೆ. ಅಂಥವರು ಒಂದು ದಿನ ರಜೆ ಸಿಕ್ಕರೆ ಸಾಕು, ಬಸ್, ರೈಲು ಹತ್ತಿ ಊರಿಗೆ ಹೋಗೋ ಪ್ಲಾನ್ ಮಾಡುತ್ತಾರೆ. ಇದೀಗ ಸಾಲು ಸಾಲು ರಜಾ ದಿನಗಳು ಬಂದಾಯ್ತು. ದೀರ್ಘ ವಾರಾಂತ್ಯ ಮತ್ತು ಗಣರಾಜ್ಯೋತ್ಸವದ (ಜನವರಿ 26) ರಜಾ ನಿಮಿತ್ತ, ಈಗಾಗಲೇ ಹಲವಾರು ಮಂದಿ ಬೆಂಗಳೂರಿನಿಂದ ತಮ್ಮ ಊರಿಗೆ ಹೋಗಲು ಶುರುಮಾಡಿದ್ದಾರೆ. ಇದೀಗ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನೂರಾರು ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಿವೆ. ಆದ್ದರಿಂದ ಈ ಸಂದರ್ಭದಲ್ಲಿ ಊರಿಗೆ ಅಥವಾ ಟ್ರಿಪ್ ಪ್ಲಾನ್ ಮಾಡಿದವರಿಗೆ ಬಂಪರ್ ಸುದ್ದಿಯಂತನೇ ಹೇಳಬಹುದು.

ಸತತ ಮೂರು ದಿನಗಳ ರಜೆಯಿಂದಾಗಿ (ಶನಿವಾರ, ಭಾನುವಾರ ಮತ್ತು ಜನವರಿ 26 ರ ಗಣರಾಜ್ಯೋತ್ಸವ) ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬರುವ ನಿರೀಕ್ಷೆಯಿದೆ. ಗುರುವಾರ ಸಂಜೆಯಿಂದಲೇ ಬೆಂಗಳೂರಿನಿಂದ ಹೊರಡುವವರ ಸಂಖ್ಯೆ ಹೆಚ್ಚಾಗಿದ್ದು, ಬಸ್ ನಿಲ್ದಾಣಗಳಲ್ಲಿ ಭಾರೀ ದಟ್ಟಣೆ ನಿರೀಕ್ಷಿಸಲಾಗಿದೆ. ಹೆಚ್ಚಿದ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಲು ಮತ್ತು ದುಬಾರಿ ಖಾಸಗಿ ಬಸ್‌ಗಳನ್ನು ಅವಲಂಬಿಸುವುದನ್ನು ತಪ್ಪಿಸಲು ಸಾರಿಗೆ ನಿಗಮಗಳು ಇದೀಗ ಹೆಚ್ಚುವರಿ ಬಸ್ ಸೇವೆಯನ್ನು ನೀಡಲು ಮುಂದಾಗಿದೆ.
ಪ್ರಯಾಣಿಕರ ಅನುಕೂಲಕ್ಕೆ ಮಹತ್ವದ ನಿರ್ಧಾರ!
ಈ ಪರಿಸ್ಥಿತಿಯನ್ನು ನಿರ್ವಹಿಸಲು, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಜಂಟಿಯಾಗಿ ರಾಜ್ಯದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ನಿಯೋಜಿಸಿದೆ. ಅಧಿಕಾರಿಗಳ ಪ್ರಕಾರ, ಜನವರಿ 23ರ ರಾತ್ರಿ 8 ಗಂಟೆಯ ನಂತರ ಬೆಂಗಳೂರಿನಿಂದ (ಮುಖ್ಯವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ) ಹೆಚ್ಚುವರಿಯಾಗಿ 265 ಬಿಎಂಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಈ ಸೇವೆಗಳು ಹಾಸನ, ಅರಕಲಗೂಡು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗಗೆರೆ, ತುರುವೇಕೆರೆ, ತುಮಕೂರು, ಹೊಸದುರ್ಗ, ಪಾವಗಡ, ಚಿತ್ರದುರ್ಗ, ಚಳ್ಳಿಕೆರೆ, ಹೊಸಪೇಟೆ, ಬಳ್ಳಾರಿ, ರಾಯಚೂರು, ಧರ್ಮಸ್ಥಳ, ಗದಗ, ಹಾವೇರಿ ಮತ್ತು ಹುಬ್ಬಳ್ಳಿ ಸೇರಿದಂತೆ ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸಲಿದೆ.
ಆದ್ದರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕೆಎಸ್‌ಆರ್‌ಟಿಸಿ ಜನವರಿ 24ರಿಂದ ರಾಜ್ಯದ ಅನೇಕ ಜಿಲ್ಲೆಗಳಿಗೆ ಬೆಂಗಳೂರಿನಿಂದ 500 ಕ್ಕೂ ಹೆಚ್ಚು ಹೆಚ್ಚುವರಿ ಬಸ್‌ಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ನಿಯೋಜಿಸಿದೆ. ಈ ಸೇವೆಗಳು ರಜಾ ಅವಧಿಯಲ್ಲಿ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಲು ಮತ್ತು ಬಸ್‌ಗಳಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ.
ಇದಲ್ಲದೆ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಜನವರಿ 23, 24 ಮತ್ತು 25 ರಂದು 180 ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ವರದಿಯಾಗಿದೆ. ಇದು ರಾಜ್ಯದ ವಿವಿಧ ಪ್ರದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಸುಲಭವಾಗಲಿದೆ. ಸಾರಿಗೆ ನಿಗಮಗಳು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಲು ಮತ್ತು ಈ ಹೆಚ್ಚುವರಿ ಸೇವೆಗಳನ್ನು ಬಳಸಿಕೊಳ್ಳಲು ಸಲಹೆ ನೀಡಿವೆ. ಗಣರಾಜ್ಯೋತ್ಸವದ ಜೊತೆಗೆ ವಾರಾಂತ್ಯದ ರಜಾದಿನಗಳಿಂದ ಹೊರಡುವ ಸಾವಿರಾರು ಪ್ರಯಾಣಿಕರಿಗೆ ಈ ಸಾರಿಗೆ ವ್ಯವಸ್ಥೆಗಳು ದೊಡ್ಡ ನಿರಾಳತೆಯನ್ನು ನೀಡುವ ನಿರೀಕ್ಷೆಯಿದೆ.


Click it and Unblock the Notifications