ಬೆಂಗಳೂರು ನಮ್ಮ ಮೆಟ್ರೋ (Namma Metro) ಸೇವೆ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಿದೆ. ವೇಗದ ಪ್ರಯಾಣ ಮತ್ತು ಗುಣಮಟ್ಟದ ಸೇವೆಯಿಂದಾಗಿ ಭಾರೀ ಬೇಡಿಕೆಯ ಸಾರಿಗೆ ವ್ಯವಸ್ಥೆ ಇದಾಗಿದೆ. ಸದ್ಯ ಬೆಂಗಳೂರಿನಾದ್ಯಂತ ವಿಸ್ತರಣೆಗೆ ಸಜ್ಜಾಗುತ್ತಿರುವ ನಮ್ಮ ಮೆಟ್ರೋ, ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗೆ ಪರಿಹಾರವಾಗಿ ಕಾರ್ಯನಿರ್ವಹಿಸಲಿದೆ. ಇದೀಗ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ (Yellow Line Metro) ಮತ್ತೊಂದು ರೈಲಿನ ಆಗಮನವಾಗಿದ್ದು, ಇದು ಈ ವರ್ಷದಲ್ಲಿ ಬರುತ್ತಿರುವ 7ನೇ ರೈಲಾಗಿದೆ.

ನಮ್ಮ ಮೆಟ್ರೋದ ಹಳದಿ ಮಾರ್ಗದ ಏಳನೇ ರೈಲು ಸೆಟ್ ಗುರುವಾರ ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೂಲಗಳ ಪ್ರಕಾರ, ಹೊಸ ರೈಲು ಕಡ್ಡಾಯ ತಪಾಸಣೆ ಮತ್ತು ಸುರಕ್ಷತಾ ಪರೀಕ್ಷೆಗಳು ಪೂರ್ಣಗೊಂಡ ನಂತರ ಜನವರಿ ಮೊದಲ ವಾರದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವರದಿಯಾಗಿದೆ. ಕೋಲ್ಕತ್ತಾ ಮೂಲದ ಟೈಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಡಿಸೆಂಬರ್ 10 ರಂದು ಈ ರೈಲುಗಳನ್ನು ಸಪ್ಲೈ ಮಾಡಿತ್ತು, ನಂತರ ಅವುಗಳನ್ನು ಟ್ರೇಲರ್‌ಗಳ ಮೂಲಕ ಬೆಂಗಳೂರಿಗೆ ಸಾಗಿಸಲಾಯಿತು.
ಇದೇ ಮಧ್ಯೆ, ಹಳದಿ ಮಾರ್ಗದ ಆರನೇ ರೈಲನ್ನು ವಿವಿಧ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಡಿಸೆಂಬರ್ 22 ರಂದು ಸೇವೆ ಸಲ್ಲಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಟಿಆರ್‌ಎಸ್‌ಎಲ್ ಈ ತಿಂಗಳ ಅಂತ್ಯದ ವೇಳೆಗೆ ಎಂಟನೇ ರೈಲು ಸೆಟ್ ಅನ್ನು ಸಹ ರವಾನಿಸುವ ಸಾಧ್ಯತೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಎಂಟೂ ರೈಲುಗಳು ಬಂದರೆ, ಪ್ರಸ್ತುತ ಇರುವ ಗ್ರೀನ್, ಪಿಂಕ್ ಲೈನ್‌ನಂತೆಯೇ ಯೆಲ್ಲೋ ಲೈನ್‌ನಲ್ಲಿ ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸಲಿದೆ..
ಎಂಟು ರೈಲುಗಳ ಆಗಮನದ ನಂತರ ಯೆಲ್ಲೋ ಲೈನ್ ಮೆಟ್ರೋ ನಿಲ್ದಾಣದಲ್ಲಿ ಪ್ರತೀ ಎಂಟರಿಂದ ಹತ್ತು ನಿಮಿಷಗಳಿಗೊಮ್ಮೆ ರೈಲು ಸಂಚಾರ ಮಾಡಲಿದೆ ಎಂದು ಹೇಳಲಾಗಿದೆ. ಇದರಿಂದ ಜನದಟ್ಟಣೆಯ ಸಮಯದಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಪ್ರಯೋಜನವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ..
19.15 ಕಿಲೋಮೀಟರ್ ಉದ್ದದ ಮಾರ್ಗವನ್ನು ಹೊಂದಿರುವ ಯೆಲ್ಲೋ ಲೈನ್, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. ಇದನ್ನು ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಾರಂಭ ಮಾಡಿದರು. ಚಾಲನೆ ನೀಡಿದ ಮರುದಿನವೇ ವಾಣಿಜ್ಯ ಕಾರ್ಯಾಚರಣೆ ಕೂಡಾ ಆರಂಭಿಸಲಾಯಿತು. ಈ ಮಾರ್ಗವು ನಗರದ ದಕ್ಷಿಣ ಭಾಗಗಳು ಮತ್ತು ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶವನ್ನು ನಮ್ಮ ಮೆಟ್ರೋ ಜಾಲಕ್ಕೆ ಜೋಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಹೊಸದಾಗಿ ಆಗಮನವಾಗಿರುವ ರೈಲು ಡ್ರೈವರ್‌ಲೆಸ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ಮೆಟ್ರೋ ಸೇವೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ. ಡ್ರೈವರ್‌ಲೆಸ್ ರೈಲುಗಳು ಸಂಪೂರ್ಣವಾಗಿ ಸ್ವಯಂಚಾಲಿತ ನಿಯಂತ್ರವನ್ನು ಹೊಂದಿದ್ದು, ಇದು ಪ್ರಯಾಣಿಕರ ಸುರಕ್ಷತೆ ಮತ್ತು ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ.


Click it and Unblock the Notifications