ಇತ್ತೀಚೆಗೆ ಇ-ಕಾಮರ್ಸ್ ಕಂಪನಿಗಳು (E-Commerce) ಭಾರೀ ಬೇಡಿಕೆಯಲ್ಲಿದೆ. ಆನ್‌ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು, ಕೆಲವೇ ಗಂಟೆಯಲ್ಲಿ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಇನ್ನು ಜೆಪ್ಟೋ, ಸ್ವಿಗ್ಗಿಯಂತಹ ಇಕಾಮರ್ಸ್ ವೆಬ್‌ಸೈಟ್‌ಗಳು ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಯಾವುದೇ ಉತ್ಪನ್ನವನ್ನು ಕ್ಷಣಮಾತ್ರದಲ್ಲಿ ತಂದುಕೊಡುವ ಜೆಪ್ಟೋ (Zepto) ಇದೀಗ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮೇಲೆ ವೆಬ್‌ಸೈಟ್‌ನಲ್ಲಿ ಶಾಪಿಂಗ್ ಮತ್ತಷ್ಟು ಅಗ್ಗವಾಗಲಿದ್ದು, ಈ ಬಗ್ಗೆ ಮಹತ್ವದ ಘೋಷಣೆಯೊಂದನ್ನು ಮಾಡಿದೆ.

ಹೌದು, ಅಂಗಡಿಗೆ ಹೋಗಿ ಸಮಯ ವ್ಯರ್ಥ ಮಾಡುವ ಬದಲಿಗೆ, ಆನ್‌ಲೈನ್‌ನಲ್ಲೇ ಥಟ್ ಅಂತ ಬಟ್ಟೆ, ತಿಂಡಿ, ತರಕಾರಿ ಹೀಗೆ ಹಲವನ್ನು ಕ್ಷಣಮಾತ್ರದಲ್ಲಿ ಬುಕ್ ಮಾಡಬಹುದು. ಇನ್ನು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲೂ ಕೆಲ ಇಕಾಮರ್ಸ್ ಕಂಪನಿಗಳು ಆಫರ್ಸ್ ನೀಡುತ್ತಿರುತ್ತದೆ. ಅದೇ ನಿರ್ಧಾರವನ್ನು ಇದೀಗ ಜೆಪ್ಟೋ ಕೂಡಾ ಕೈಗೊಂಡಿದೆ. ಈ ಹಿನ್ನೆಲೆ ಇನ್ಮುಂದೆ ಯಾವುದೇ ಆರ್ಡರ್‌ಗಳ ಮೇಲೆ ಹ್ಯಾಂಡ್ಲಿಂಗ್ ಫೀಸ್ ಮತ್ತು ಸರ್ಜ್ ಫೀಸ್ ಇರುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಜೆಪ್ಟೋ ಗ್ರಾಹಕರಿಗೆ ಬಂಪರ್
ಜೆಪ್ಟೋ "ಆಲ್ ನ್ಯೂ ಜೆಪ್ಟೋ ಎಕ್ಸ್‌ಪೀರಿಯೆನ್ಸ್" ಎಂಬ ಕಾರ್ಯಕ್ರಮದ ಭಾಗವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆ ಇನ್ಮೇಲೆ ಹಲವು ಶುಲ್ಕಗಳು ಕಡಿಮೆಯಾಗಲಿದೆ. ಅಲ್ಲದೇ ಫ್ರೀ ಡೆಲಿವರಿ ಆಯ್ಕೆಯನ್ನು ಜಾರಿಗೆ ತರಲು ಮುಂದಾಗಿದೆ. ಅಂದರೆ ಇದುವರೆಗೆ 199 ರೂ.ಗಿಂತ ಹೆಚ್ಚಿನ ಉತ್ಪನ್ನಗಳನ್ನು ಆರ್ಡರ್ ಮಾಡಿದ್ರೆ ಫ್ರೀ ಡೆಲಿವರಿ ನೀಡಲಾಗುತ್ತಿತ್ತು. ಇದೀಗ ಈ ಆಫರ್ ಅನ್ನು 99 ರೂ.ಗೆ ಇಳಿಸಲಾಗಿದೆ. ಇನ್ನು 99 ರೂ.ಗಿಂತ ಕಡಿಮೆ ಆರ್ಡರ್‌ಗಳಿಗೆ 30 ರೂ.ನಂತರ ಏಕರೂಪದ ಡೆಲಿವರಿ ಚಾರ್ಜ್ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಮೂಲಕ 99 ರೂ.ಗಿಂತ ಕಡಿಮೆ ಆರ್ಡರ್ ಮಾಡಿದಾಗ ವಿಧಿಸಲಾಗುತ್ತಿದ್ದ ಸ್ಮಾಲ್‌ಕಾರ್ಟ್ ಫೀಸ್ ಮತ್ತು ಇತರ ಶುಲ್ಕಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
ಬ್ಲಿಂಕಿಟ್, ಇನ್‌ಸ್ಟಾ ಮಾರ್ಟ್‌ನಂತಹ ಕಂಪನಿಗಳು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆಫರ್ ಜೊತೆಗೆ ಶುಲ್ಕಗಳನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ ಜೆಪ್ಟೋ ತೆಗೆದುಕೊಂಡ ಈ ನಿರ್ಧಾರ ಭಾರೀ ಅನುಕೂಲವಾಗಲಿದೆ. ಈ ಮೂಲಕ ಜೆಪ್ಟೋ ಮತ್ತಷ್ಟು ಗ್ರಾಹಕರನ್ನು ಹೊಂದುವ ಗುರಿಯನ್ನು ನಿರೀಕ್ಷಿಸಿದೆ. ಜೆಪ್ಟೋ ಜಾರಿಗೆ ತಂದ ಈ ಆಫರ್‌ಗಳು, ಇತರ ಇಕಾಮರ್ಸ್ ಕಂಪನಿಗಳಿಗೆ ಅಥವಾ ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ನೀಡಲಿದೆ.
ಯಾಕೆ ಈ ನಿರ್ಧಾರ?
ಇನ್ನು ಜೆಪ್ಟೋ, ಕ್ಯಾಲಿಫೋರ್ನಿಯಾ ಪಬ್ಲಿಕ್ ಎಂಪ್ಲಾಯಸ್ ರಿಟೈರ್‌ಮೆಂಟ್ ಸಿಸ್ಟಮ್ (CalPERS)ನ ಹಣಕಾಸಿನಲ್ಲಿ ಕಂಪನಿಯು $450 ಮಿಲಿಯನ್ ಅಂದರೆ 3,757 ಕೋಟಿ ರೂ. ಸಂಗ್ರಹಿಸಿದೆ ಎಂದು ವರದಿ ಬಂದ ನಂತರ ಈ ನಿರ್ಧಾರಕ್ಕೆ ಮುಂದಾಗಿದೆ. ಅಲ್ಲದೇ ಜೆಪ್ಟೋ ಸಿಇಒ ಮತ್ತು ಸಹ-ಸಂಸ್ಥಾಪಕ ಆದಿತ್ ಪಾಲಿಚಾ,'ನಾವು ಸುಮಾರು $450 ಮಿಲಿಯನ್ ಡಾಲರ್ ವ್ಯವಹಾರ ನಡೆಸಿದ್ದೇವೆ. ಅದರಲ್ಲಿ ಹೆಚ್ಚಿನವು ಪ್ರೈಮರಿಯದ್ದಾಗಿದೆ. ಇನ್ನು ಕಂಪನಿಯ ಮೌಲ್ಯ ಕೇವಲ $7 ಬಿಲಿಯನ್ ಆಗಿತ್ತು. ಆದರೆ ಅತಿದೊಡ್ಡ ಹೂಡಿಕೆ ಮೊತ್ತ CalPERS ನಿಂದ ಬಂಿದೆ' ಎಂದು ಹೇಳಿದರು. ಅಲ್ಲದೇ ಐಪಿಒ ಬಗ್ಗೆನೂ ಮಾತನಾಡಿದ ಪಾಲಿಚಾ, ಶೀಘ್ರದಲ್ಲೇ ಜೆಪ್ಟೋ ಐಪಿಒವನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.


Click it and Unblock the Notifications