ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಿಯೋಜಿತರಾದ ನಾಲ್ಕನೇ ಮಹಿಳಾ ಮುಖ್ಯಮಂತ್ರಿ ರೇಖಾ ಗುಪ್ತ, ಮಹಿಳೆಯರಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಅದೇನೆಂದರೆ ಮಹಿಳಾ ಸಮೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ಬೆಂಬಲ ನೀಡುವ ಮಾಸಿಕ ಭತ್ಯೆಯ ಮೊದಲ ಕಂತಿನ 2,500 ರೂ. ಹಣವನ್ನು ಮಾರ್ಚ್ 8 ರೊಳಗೆ, ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನೀಡಿದ ಪ್ರಮುಖ ಭರವಸೆಗಳ ಪೈಕಿ ಒಂದಾದ, ಈ ಮಹತ್ವದ ಭರವಸೆಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಜಾರಿಗೆ ತರಲಾಗುವ ಬಗ್ಗೆ ಘೋಷಣೆ ಮಾಡಿದ್ದಾರೆ. ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ರೇಖಾ ಗುಪ್ತ ಈ ಘೋಷಣೆ ಮಾಡಿದ್ದಾರೆ. ಮಹಿಳೆಯರ ಉತ್ತೇಜನಕ್ಕಾಗಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಆರ್ಥಿಕ ನೆರವು ಸೇರಿದಂತೆ, ಎಲ್ಲಾ ಭರವಸೆಗಳನ್ನು ಖಂಡಿತವಾಗಿಯೂ ನಾವು ಈಡೇರಿಸುತ್ತೇವೆ. ಮಹಿಳೆಯರು ಮಾರ್ಚ್ 8 ರೊಳಗೆ ತಮ್ಮ ಖಾತೆಯಲ್ಲಿ ಹಣ ನೋಡುತ್ತಾರೆ ಎಂದರು.

ಇನ್ನು ಅಧಿಕಾರದಿಂದ ನಿರ್ಗಮಿಸುತ್ತಿರುವ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ, ಮೂರನೇ ಬಾರಿ ಅಧಿಕಾರದ ಗದ್ದುಗೆ ಹಿಡಿದರೆ ಮಹಿಳೆಯರಿಗೆ ₹2,100 ಮಾಸಿಕ ಭತ್ಯೆ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ ಬಿಜೆಪಿ ಅದಕ್ಕಿಂತ ಹೆಚ್ಚಿನ ಭತ್ಯೆ ಘೋಷಿಸಿ ಅಧಿಕಾರ ಹಿಡಿಯುವುದರಲ್ಲಿ ಸಫಲವಾಗಿದೆ. ಪ್ರಣಾಳಿಕೆಯನ್ನು ಪ್ರಕಟಿಸಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಇದಲ್ಲದೇ ದೆಹಲಿಯಲ್ಲಿ ಗರ್ಭಿಣಿ ಮಹಿಳೆಯರಿಗೂ ಒಂದಷ್ಟು ವಿಶೇಷ ಕೊಡುಗೆಗಳನ್ನು ಬಿಜೆಪಿ ಘೋಷಿಸಿದೆ. ಅದೇನೆಂದರೆ ಪ್ರತಿ ಗರ್ಭಿಣಿ ಮಹಿಳೆಗೆ ₹21,000 ಹಣ, ಎಲ್‌ಪಿಜಿ ಸಿಲಿಂಡರ್‍ಗೆ 500 ರೂ. ಸಬ್ಸಿಡಿ ಮತ್ತು ಹೋಳಿ, ದೀಪಾವಳಿ ಹಬ್ಬಕ್ಕೆ ಉಚಿತವಾಗಿ ಸಿಲಿಂಡರ್ ನೀಡುವ ಭರವಸೆಯನ್ನು ಕೂಡ ನೀಡಿದೆ.
ಇನ್ನು ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಎಎಪಿ, ದೊಡ್ಡ ಆರೋಪವನ್ನೇ ಮಾಡಿತ್ತು. ಅದೇನೆಂದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉಚಿತ ಯೋಜನೆಗಳನ್ನು ನಿಲ್ಲಿಸುತ್ತದೆ ಎಂದು ಆರೋಪಿಸಿದ್ದರು.ಇದಕ್ಕೆ ತಿರುಗೇಟು ನೀಡಿರುವ ಮಾನ್ಯ ಮಹಿಳಾ ಮುಖ್ಯಮಂತ್ರಿಯಾದ ರೇಖಾ ಗುಪ್ತ, ಈಗ ಈ ಆರೋಪಗಳನ್ನು ತೊಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅಲ್ಲದೇ ಇಂತಹ ಆರೋಪಗಳು ಕೇಳಿಬಂದರೆ ಅದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕೂಡ ಹೇಳಿದ್ದಾರೆ.
ಶಾಲಿಮಾರ್ ಬಾಗ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕಿಯಾದ ಇವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಿಸುವ ಜವಾಬ್ದಾರಿ ದೆಹಲಿಯ ಎಲ್ಲಾ 48 ಬಿಜೆಪಿ ಶಾಸಕರದ್ದಾಗಿದೆ ಎಂದು ಕೂಗಿ ಹೇಳಿದ್ದಾರೆ. ಅಲ್ಲದೇ ಚುನಾವಣಾ ಪ್ರಚಾರದ ವೇಳೆಯೇ, ಎಎಪಿಗೆ ಬಿಜೆಪಿ ಸರಿಯಾಗಿ ತಿರುಗೇಟು ನೀಡಿತ್ತು. ಆರೋಪಗಳಿಗೆ ಉತ್ತರಿಸಿ ಇಂತಹ ಕೀಳು ಮಟ್ಟದ ಪ್ರಚಾರ ನಾನು ಎಲ್ಲಿಯೂ ನೋಡಿಲ್ಲ. ಬಿಜೆಪಿ ಅಧಿಕಾರ ಹಿಡಿದ ನಂತರ ಎಲ್ಲಾ ಯೋಜನೆಗಳು ಅನುಷ್ಠಾನಕ್ಕೆ ಬರುತ್ತವೆ ಎಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು.
ಇನ್ನು ಈ ಬೆಳವಣಿಗೆಗಳನ್ನೆಲ್ಲಾ ನೋಡುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿಯನ್ನೇ ಬೇರೆ ಪಕ್ಷದವರೂ ಅನುಸರಿಸುವಂತೆ ಕಾಣುತ್ತಿದೆ. ಅದರಲ್ಲೂ ಕಾಂಗ್ರೆಸ್ ಗ್ಯಾರಂಟಿಗಳನ್ನ ಅಲ್ಲಗಳೆಯುತ್ತಿದ್ದ ಬಿಜೆಪಿಯೇ ಅದನ್ನು ಅನುಸರಿಸುತ್ತಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದನ್ನು ಗಮನಿಸಿ, ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಘೋಷಣೆಗಳಾಗುತ್ತಿವೆ. ಆದರೆ ಗ್ಯಾರಂಟಿ ಸೂತ್ರದಾರವಾದ ಕಾಂಗ್ರೆಸ್ ಪಾರ್ಟಿಯೇ ಇದರಲ್ಲಿ ವಿಫಲವಾಗಿದೆ. ಅಂದರೆ ಕರ್ನಾಟಕದಂತೆ ದೆಹಲಿಯಲ್ಲೂ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಆದರೆ ದೆಹಲಿ ಜನತೆ ಕಾಂಗ್ರೆಸ್ ಕೈ ಹಿಡಿದಿಲ್ಲ.


Click it and Unblock the Notifications