ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಎಂಬ ಕನ್ನಡ ಗಾದೆ ಮಾತು ಬಹುಷಃ ಬಹುತೇಕ ಎಲ್ಲರಿಗೂ ತಿಳಿದೇ ತಿಳಿದೇ ಇದೆ. ಅದೇ ರೀತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಜಾಗತಿಕ ಮಟ್ಟದಲ್ಲಿ ಯಾವ ಮಟ್ಟಕ್ಕೇರಿದ್ದಾರೆ ಎಂಬುದಕ್ಕೆ ನಮಗೆ ಹೆಚ್ಚಿನ ಪುರಾವೆಗಳು ಬೇಕಿಲ್ಲ. ಬಹುತೇಕ ಜಾಗತಿಕ ಮಟ್ಟದಲ್ಲಿ ಭಾರತೀಯರು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಹವಾ ಸೃಷ್ಟಿಸಿದ್ದಾರೆ ಎಂಬುದು ಕೂಡ ಸದ್ಯ ಗುಟ್ಟಾಗಿ ಉಳಿದಿಲ್ಲ. ಈ ವಾದಕ್ಕೆ ಪುಷ್ಠಿ ನೀಡುವಂಥ ಹಲವು ನಿದರ್ಶನಗಳು ಪದೇ ಪದೇ ಲಬಿಸುತ್ತಲೇ ಇರುತ್ತದೆ. ಸದ್ಯ ಹೊಸ ಸೇರ್ಪಡೆಯೇ ಪ್ರಭಾಕರ್ ರಾಘವನ್. ಸದ್ಯ ಹೆಚ್ಚಿನವರಿಗೆ ಪ್ರಭಾಕರ್ ರಾಘವನ್ ಹೆಸರು ಕೇಳಿರದಿದ್ದರೂ ಅವರು ಪಡೆದಿರುವ ಹೊಸ ಹುದ್ದೆ ಮಾತ್ರ ಎಲ್ಲಾ ಭಾರತೀಯರು ಹೆಮ್ಮೆ ಪಡುವಂಥದ್ದಾಗಿದೆ. ಪ್ರಭಾಕರ್ ರಾಘವನ್ ಅವರು ಜಗತ್ತಿನ ಪ್ರಖ್ಯಾತ ಸರ್ಜ್ ಇಂಜಿನ್ ಗೂಗಲ್ ಸಂಸ್ಥೆಯಲ್ಲಿ ಹೊಸ ಮುಖ್ಯ ತಂತ್ರಜ್ಞ (CTO)ರಾಗಿ ನೇಮಕಗೊಂಡಿದ್ದಾರೆ.
ಭಾರತೀಯನಿಗೆ ಸಿಕ್ಕ ಹೆಮ್ಮೆಯ ಗರಿ
ಇತ್ತೀಚಿಗೆ ಗೂಗಲ್ ತನ್ನ ಕಾರ್ಯನಿರ್ವಾಹಕ ತಂಡದ ಮಹತ್ವದ ಪುನಾರಚನೆ ಮಾಡಿಕೊಂಡಿದ್ದು, ಕಂಪನಿಯ ಹೊಸ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್ ರಾಘವನ್ ಅವರನ್ನು ನೇಮಕ ಮಾಡುವುದಾಗಿ ಘೋಷಿಸಿದೆ. ಹಲವು ವರ್ಷಗಳ ಕಾಲ ಗೂಗಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಘವನ್ ಅವರ ಕಾರ್ಯಶೈಲಿ ಹಾಗೂ ಗುಣಮಟ್ಟದ ಕಾರ್ಯಕ್ಕೆ ಮೆಚ್ಚಿರುವ ಸಂಸ್ಥೆ ಇದೀಗ ಹೊಸ ಜವಾಬ್ದಾರಿಯನ್ನು ನೀಡಿದೆ. ಇದಕ್ಕೂ ಮುನ್ನ ರಾಘವನ್ ಅವರು ಗೂಗಲ್‌ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಗೂಗಲ್ ಸರ್ಚ್, ಗೂಗಲ್ ಸಹಾಯಕ, ಜಿಯೋ, ಜಾಹೀರಾತುಗಳು, ವಾಣಿಜ್ಯ ಮತ್ತು ಪಾವತಿಗಳಂಥ ನಿರ್ಣಾಯಕ ವಿಭಾಗಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಸದ್ಯ ಇದೀಗ ಗೂಗಲ್ ನ ಹೊಸ ಕಾರ್ಯತಂತ್ರವು ಕಂಪನಿಯ ನಾಯಕತ್ವವನ್ನು ಬಲಪಡಿಸುವ ಮತ್ತು ತಾಂತ್ರಿಕ ಶ್ರೇಷ್ಠತೆಗೆ ಅದರ ಬದ್ಧತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇನ್ನುಳಿದಂತೆ ರಾಘವನ್ ಅವರನ್ನು ಗೂಗಲ್ ಮುಖ್ಯ ಮುಖ್ಯ ತಂತ್ರಜ್ಞರಾಗಿ ನೇಮಕಗೊಳಿಸಿರುವ ಸಂಗತಿಯನ್ನು ಗೂಗಲ್‌ನ ಸಿಇಒ ಸುಂದರ್ ಪಿಚೈ ಕೂಡ ಬ್ಲಾಗ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಗೂಗಲ್‌ನಲ್ಲಿ ತನ್ನ ಕಾರ್ಯಾವಧಿಯ ಸಮಯದಲ್ಲಿ ರಾಘವನ್ ಅವರ ನಾಯಕತ್ವ, ಗೂಗಲ್‌ನ ಕೆಲವು ಪ್ರಮುಖ ಉತ್ಪನ್ನಗಳನ್ನು ರೂಪಿಸುವಲ್ಲಿ ಅವರ ಅವಿಭಾಜ್ಯ ಪಾತ್ರವನ್ನು ಸುಂದರ್ ಪಿಚೈ ಅವರು ಮುಕ್ತಕಂಠದಿಂದ ಹೊಗಲಿದ್ದಾರೆ. ಅಲ್ಲದೆ ಕಂಪನಿಯ ತಾಂತ್ರಿಕ ನಿರ್ದೇಶನವನ್ನು ಮಾರ್ಗದರ್ಶನ ಮಾಡಲು ರಾಘವನ್ ಅವರು ತನ್ನ ಜೊತೆ ಮತ್ತು ಇತರ ಪ್ರಮುಖ ನಾಯಕತ್ವದ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ ಎಂದು ಸುಂದರ್ ಪಿಚೈ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ರಾಘವನ್ ಬಗ್ಗೆ ಒಂದಿಷ್ಟು ಮಾತು...
ಸದ್ಯ ಗೂಗಲ್‌ನಲ್ಲಿ ಮುಖ್ಯ ತಂತ್ರಜ್ಞರಾಗಿ ನೇಮಕಗೊಂಡಿರುವ ರಾಘವನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆರಂಭವಾಗಿದ್ದು, ಅವ ಶೈಕ್ಷಣಿಕ ಅರ್ಹತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರು ಚರ್ಚೆ ನಡೆಸುತ್ತಿದ್ದಾರೆ. ಇನ್ನು ರಾಘವನ್ ಅವರು ಒಬ್ಬ ಕೇವಲ ಅನುಭವಿ ಕಾರ್ಯನಿರ್ವಾಹಕರಲ್ಲ. ಬದಲಾಗಿ ಅವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಅರ್ಹರಾಗಿದ್ದು, ಹೆಚ್ಚಿನ ನಿಪುಣತೆ ಪಡೆದುಕೊಂಡಿದ್ದಾರೆ. ರಾಘವನ್ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್.ಡಿ. ಪಡೆದುಕೊಂಡಿದ್ದಾರೆ. ಭಾರತದ ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಬ್ಯಾಚುಲರ್ ಆಫ್ ಟೆಕ್ನಾಲಜಿನ ಪದವೀಧರರಾಗಿದ್ದಾರೆ. ಅಲ್ಲದೆ ಅವರು ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ಸದಸ್ಯ ಕೂಡ ಆಗಿದ್ದಾರೆ. ಅವರು ಅಸೋಸಿಯೇಷನ್ ಫಾರ್ ಕಂಪ್ಯೂಟಿಂಗ್ ಮೆಷಿನರಿ (ACM) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (IEEE) ನಂತಹ ಪ್ರತಿಷ್ಠಿತ ಸಂಸ್ಥೆಗಳ ಫೆಲೋ ಕೂಡ ಆಗಿದ್ದು, ಅವರ ಹಿರಿಮೆಗೆ ಹಿಡಿದ ಕೈಗನ್ನಡಿಯಾಗಿದೆ.
ನಾವೀನ್ಯತೆಗೆ ಹೆಸರಾಗಿರುವ ಗೂಗಲ್‌ನಲ್ಲಿ ದಿನಂಪ್ರತಿ ಎಂಬಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿದ್ದು, ಎಲ್ಲರಿಗೂ ತಿಳಿದಿರುವ ಸಂಗತಿ. ಇನ್ನು ರಾಘವನ್ ಅವರನ್ನು ಮುಖ್ಯ ತಂತ್ರಜ್ಞರಾಗಿ ನೇಮಿಸುವ ಮೂಲಕ ಭವಿಷ್ಯದ ಭಾರೀ ದೊಡ್ಡ ಯೋಜನೆಗೆ ಕೈಹಾಕಿರುವು ಸ್ಪಷ್ಟವಾಗಿದೆ. ಹೊಸ ಹುದ್ದೆ ನೀಡುವ ಮೂಲಕ ಭವಿಷ್ಯದ ಯೋಜನೆಗಳು ಮತ್ತು ಉಪಕ್ರಮಗಳನ್ನು ಚಾಲನೆ ಮಾಡಲು ರಾಘವನ್ ಅವರ ಅಪಾರ ಅನುಭವ ಹಾಗೂ ಚಾಕಚಕ್ಯತೆಯನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ಮೂಲಕ ಟೆಕ್ ಉದ್ಯಮದಲ್ಲಿ ಗೂಗಲ್ ತನ್ನ ಶ್ರೇಷ್ಠತೆಯನ್ನು ಮತ್ತಷ್ಟು ಪಸರಿಸಲು ಮುಂದಾಗಿದೆ.


Click it and Unblock the Notifications