ಇಷ್ಟು ದಿನ ಮೊಬೈಲ್ ರೀಚಾರ್ಜ್, ಗ್ಯಾಸ್ ಬಿಲ್, ವಿದ್ಯುತ್ ಬಿಲ್ ಕಟ್ಟಲು ಅನುಕೂಲಕರವಾಗಿದ್ದ ಗೂಗಲ್ ಪೇ ಈಗ ಶಾಕ್ ನೀಡಿದೆ. ಅದೇನೆಂದರೆ ಇನ್ನುಮುಂದೆ ಯಾವುದೇ ಬಿಲ್ ಪಾವತಿಸುವುದಾದರೂ ಇಂತಿಷ್ಟು ಶುಲ್ಕವನ್ನು ಗೂಗಲ್ ಪೇ ಯುಪಿಐ ಪ್ಲಾಟ್‌ಫಾರ್ಮ್ ವಿಧಿಸಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಬಿಲ್ ಪಾವತಿಸುವವರಿಗೆ ಈ ಶುಲ್ಕ ಕಡ್ಡಾಯವಾಗಿ ಅನ್ವಯಿಸುತ್ತದೆ. ಜೊತೆಗೆ ವಹಿವಾಟಿನ ಮೌಲ್ಯದ 0.5% ರಿಂದ 1% ವರೆಗೆ ಶುಲ್ಕಗಳು ಮತ್ತು GST ಪಾವತಿಸಬೇಕಾಗುತ್ತದೆ.
ವರ್ಷದ ಹಿಂದೆ ಗೂಗಲ್ ಪೇ ಮೂಲಕ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುತ್ತಿದ್ದ ಗ್ರಾಹಕರಿಗೆ, 3 ರೂ. ಶುಲ್ಕವನ್ನು ವಿಧಿಸಲಾಗುತ್ತಿತ್ತು. ಈಗ ಅದೇ ರೀತಿ ಎಲ್ಲಾ ರೀತಿಯ ಬಿಲ್ ಪೇಮೆಂಟ್‌ಗಳಿಗೂ ಶುಲ್ಕ ಪರಿಚಯಿಸಿದೆ. ಗೂಗಲ್ ಪೇಯ ಹಿಂದಿನ ನಿರ್ಧಾರ ಮುಂದುವರಿಯುತ್ತಿದೆ.

ಇನ್ನು ಕ್ರೆಡಿಟ್ ಕಾರ್ಡ್ ಬಳಸಿ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರಿಗೆ, ಸುಮಾರು 15 ರೂ.ಗಳಷ್ಟು ಶುಲ್ಕ ವಿಧಿಸಲಾಗಿದೆ. ಅದನ್ನು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕ ಎಂದು ಕರೆಯಲಾಗಿದೆ. ಮತ್ತು ಈ ಶುಲ್ಕದಲ್ಲಿ ಜಿಎಸ್‌ಟಿ ಕೂಡ ಒಳಗೊಂಡಿದೆ. ಇನ್ನು ಈ ಶುಲ್ಕ ಪಾವತಿಸುವ ಪದ್ದತಿ ಗೂಗಲ್ ಪೇ ಮೇಲೆ ಕೊಂಚ ಪರಿಣಾಮ ಬೀಳುವ ಸಾಧ್ಯತೆ ಇದೆ. ಏಕೆಂದರೆ ಗ್ರಾಹಕರು ಬಿಲ್ ಪಾವತಿಗಳಿಗೆ ಶುಲ್ಕ ಕಟ್ಟುವ ಮುನ್ನ ಸ್ವಲ್ಪ ಯೋಚನೆ ಮಾಡುತ್ತಾರೆ. ಅದಕ್ಕೆ ಪರ್ಯಾಯ ಮಾರ್ಗ ಸಿಕ್ಕರೆ, ಬೇರೆ ರೀತಿ ಬಿಲ್ ಪಾವತಿಸುತ್ತಾರೆ. ಒಟ್ಟಾರೆ ಗ್ರಾಹಕರಿಗೆ ಬೇಕಾಗಿರುವುದು ಹಣದ ಉಳಿತಾಯ ಅಷ್ಟೇ.
ಇನ್ನು ಮದ್ಯಮ ವರ್ಗದ ಜನರ ಜೀವನ ಅತಿಹೆಚ್ಚು ಕ್ರೆಡಿಟ್ ಕಾರ್ಡ್ ಮೇಲೆಯೇ ಅವಲಂಬಿತವಾಗಿರುತ್ತದೆ. ಹೀಗಿರುವಾಗ ಶುಲ್ಕವನ್ನೂ ಪಾವತಿಸಬೇಕು ಎಂದರೆ, ಅವರ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಯಾಗುತ್ತದೆ. ಪ್ರತಿ ಬಿಲ್ ಪೇಮೆಂಟ್‌ಗೂ ಅವರು ಪಾವತಿಸಬೇಕು ಎಂದಾದರೆ ಅವರ ಕಮಿಟ್‌ಮೆಂಟ್‌ಗಳು ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಪ್ರಬಲ ಸ್ಥಾನ ಹೊಂದಿರುವ ಗೂಗಲ್ ಪೇ ಸುಮಾರು 37% UPI ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದ್ದು, ಜನವರಿ ಅಂಕಿ ಅಂಶದ ಪ್ರಕಾರ ಗೂಗಲ್ ಪೇ ಒಟ್ಟು 8.26 ಲಕ್ಷ ಕೋಟಿ ರೂ. ವಹಿವಾಟು ನಡೆಸಿದೆ ಎನ್ನಲಾಗುತ್ತಿದೆ.
ಇನ್ನು ಇದರ ಬಗ್ಗೆ ಗೂಗಲ್ ಪೇ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಕನ್ವಿನಿಯೆನ್ಸ್ ಚಾರ್ಜಸ್‌ಗಳು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಾವತಿಗಳ್ನು ಪ್ರಕ್ರಿಯೆಗೊಳಿಸುವ ವೆಚ್ಚ ಸರಿದೂಗಿಸಲು ಸಹಾಯ ಮಾಡುತ್ತವೆ ಎನ್ನಲಾಗಿದೆ. ಹಾಗೆಯೇ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ ಎನ್ನಲಾಗಿದೆ.
ಇನ್ನು ಫೋನ್‌ಪೇನಲ್ಲಿ ಗಮನಿಸಿದಂತೆ ನೀರು, ಗ್ಯಾಸ್, ವಿದ್ಯುತ್ ಬಿಲ್‌ಗಳಿಗೆ ಪೇಮೆಂಟ್ ಮಾಡಿದಾಗಲೂ ಕನ್ವಿನಿಯೆನ್ಸ್ ಚಾರ್ಜಸ್ ಇದ್ದೇ ಇರುತ್ತದೆ. ಅದರಂತೆ, ಪೇಟಿಎಂ ಕೂಡ 1 ರಿಂದ 40 ರೂಪಾಯಿವರೆಗೆ ಶುಲ್ಕ ವಿಧಿಸುತ್ತದೆ. ಹೀಗಿದ್ದರೂ ಫಿನ್‌ಟೆಕ್ ಕಂಪನಿಗಳು ಮಾತ್ರ ಆದಾಯ ಗಳಿಸಲು ಚಾಲೆಂಜ್ ಎದುರಿಸುತ್ತಿವೆ ಎನ್ನಲಾಗಿದೆ. ಹೇಗೆಂದರೆ ಒಬ್ಬ ವ್ಯಕ್ತಿಯ ವಹಿವಾಟು ಪೂರೈಕೆ ಮಾಡಲು, ಮಧ್ಯವರ್ತಿಗಳು ಅದರ ಮೇಲೆ ಸುಮಾರು 0.25% ನಷ್ಟು ವೆಚ್ಚವನ್ನು ಹೊಂದಿರುತ್ತಾರೆ. FY24 ರಲ್ಲಿ, UPI ವಹಿವಾಟುಗಳ ಪ್ರಕ್ರಿಯೆಗೆ ವೆಚ್ಚವು ಸುಮಾರು 12,000 ಕೋಟಿ ರೂ.ಗಳಷ್ಟಿದ್ದು, ಅದರಲ್ಲಿ 4,000 ಕೋಟಿ ರೂ.ಗಳು 2,000 ರೂ.ಗಿಂತ ಕಡಿಮೆ ಮೌಲ್ಯದ ವಹಿವಾಟುಗಳಿಗೆ ಕಾರಣವಾಗಿದೆ.


Click it and Unblock the Notifications