ಟೆಕ್ ಲೋಕದಲ್ಲಿ ಹೊಸ ಛಾಪು ಮೂಡಿಸಿರುವ ಗೂಗಲ್ (Google) ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರು ಇಂದು (ಅಕ್ಟೋಬರ್ 14) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗೂಗಲ್‌ನ ಅತಿ ದೊಡ್ಡ ಕೃತಕ ಬುದ್ಧಿಮತ್ತೆ (AI) ಹಬ್ ಸ್ಥಾಪಿಸುವ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ದೊಡ್ಡ ಮಟ್ಟದ ಹೂಡಿಕೆಯೊಂದಿಗೆ, ದೇಶದ ಮೊಟ್ಟಮೊದಲ ಎಐ ಹಬ್ ಇದಾಗಲಿದೆ.

ಅದಾನಿ ಗ್ರೂಪ್ ಸಹಯೋಗದೊಂದಿಗೆ ಗೂಗಲ್, ವಿಶಾಖಪಟ್ಟಣದಲ್ಲಿ ಬೃಹತ್ ಡೇಟಾ ಸೆಂಟರ್ ಮತ್ತು ಕೃತಕ ಬುದ್ಧಿಮತ್ತೆ ಕೇಂದ್ರವನ್ನು ನಿರ್ಮಾಣ ಮಾಡಲು ಸಜ್ಜಾಗಿದೆ. ಇದು ಅಮೆರಿಕಾ ಬಿಟ್ಟು ಗೂಗಲ್‌ನ ಅತಿದೊಡ್ಡ AI ಕೇಂದ್ರವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 15 ಶತಕೋಟಿ ಡಾಲರ್ (1.33 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಈಗಾಗಲೇ ಗೂಗಲ್ ಘೋಷಿಸಿದೆ.
ಸುಂದರ್ ಪಿಚೈ ಹೇಳಿದ್ದೇನು?
ಮೋದಿ ಭೇಟಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಗೂಗಲ್ ಸಿಇಓ ಸುಂದರ್ ಪಿಚೈ, ಈ ಯೋಜನೆಯನ್ನು "ಐತಿಹಾಸಿಕ ಬೆಳವಣಿಗೆ" ಎಂದು ಕರೆದಿದ್ದಾರೆ. "ಈ ಕೇಂದ್ರವು ಗಿಗಾವಾಟ್ ಸಾಮರ್ಥ್ಯದ ಕಂಪ್ಯೂಟಿಂಗ್, ಹೊಸ ಅಂತರರಾಷ್ಟ್ರೀಯ ಸಬ್‌ಸೀ ಗೇಟ್‌ವೇ ಮತ್ತು ದೊಡ್ಡ ಮಟ್ಟದ ಟೆಕ್ ಸಾಧನಗಳನ್ನು ಹೊಂದಿರುತ್ತದೆ" ಎಂದು ಹೇಳಿದರು.
"ಈ ಎಐ ಹಬ್ ಮೂಲಕ, ನಾವು ನಮ್ಮ ಉದ್ಯಮದ ಪ್ರಮುಖ ತಂತ್ರಜ್ಞಾನವನ್ನು ಭಾರತದ ಉದ್ಯಮಗಳು ಮತ್ತು ಬಳಕೆದಾರರಿಗೆ ಪರಿಚಯಿಸುತ್ತೇವೆ. ಇದು AI ಅಪ್ಡೇಟ್‌ಗಳನ್ನು ವೇಗಗೊಳಿಸಿ ದೇಶದ ಅಭಿವೃದ್ಧಿಯನ್ನು ಸಹ ಹೆಚ್ಚಿಸುತ್ತದೆ" ಎಂದು ಗೂಗಲ್ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪಿಚೈ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಸಂತಸ
ಪ್ರಧಾನಮಂತ್ರಿ ಮೋದಿ ಅವರು ಗೂಗಲ್ AI ಹಬ್‌ನ ಪ್ರಾರಂಭದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ವಿಶಾಖಪಟ್ಟಣವನ್ನು "ಚೈತನ್ಯದ ನಗರ" ಎಂದು ಬಣ್ಣಿಸಿದ್ದಾರೆ. "ಗಿಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ಒಳಗೊಂಡಿರುವ ಈ ಬೃಹತ್ ಹೂಡಿಕೆ, 'ವಿಕಸಿತ ಭಾರತ'ವನ್ನು ನಿರ್ಮಿಸುವ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಇದು ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಬಲ ಶಕ್ತಿಯಾಗಲಿದೆ" ಎಂದು ಮೋದಿ ತಿಳಿಸಿದ್ದಾರೆ.
ಅದಾನಿ ಗ್ರೂಪ್ ಜೊತೆ ಗೂಗಲ್ ಒಪ್ಪಂದ:
ಈ ಯೋಜನೆಗಾಗಿ ಗೂಗಲ್ ಅದಾನಿ ಗ್ರೂಪ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಎರಡೂ ಕಂಪನಿಗಳು ಒಟ್ಟಿಗೆ ಸೇರಿಕೊಂಡು ದೇಶದಲ್ಲಿ ಈ ಬೃಹತ್ ಡೇಟಾ ಸೆಂಟರ್ ಮತ್ತು AI ಹಬ್ ಅನ್ನು ನಿರ್ಮಿಸಲಿದ್ದು, ದೇಶಕ್ಕೆ ಹೊಸ ಆಯಾಮವನ್ನು ತಂದುಕೊಡಲಿದೆ. ಈ ಹಬ್ ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ ಶಕ್ತಿ ಮತ್ತು ಡೇಟಾ ಮೂಲಸೌಕರ್ಯದ ವಿಷಯದಲ್ಲಿಯೂ ಹೆಚ್ಚು ಮುಂದುವರೆಯಲಿದೆ.


Click it and Unblock the Notifications