ನವದೆಹಲಿ, ಆಗಸ್ಟ್ 25: ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೊಸಿಸ್ ಗೆ ಸಂಬಂಧಿಸಿದ ಜಿಎಸ್ ಟಿ ವಂಚನೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಪುನರ್ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಪ್ರಮುಖ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ಫೋಸಿಸ್ ಗೆ ಸಂಬಂಧಿಸಿದ 33,539 ಕೋಟಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಂಚನೆ ಆರೋಪ ಪ್ರಕರಣವನ್ನು ಕೇಂದ್ರ ಸರ್ಕಾರವು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ತನ್ನ ಸಾಗರೋತ್ತರ ಶಾಖೆಗಳ ಸೇವೆಗೆ ಸಂಬಂಧಿಸಿದಂತೆ ಇನ್ಫೊಸಿಸ್ ಕಂಪನಿಯು ಜಿಎಸ್‌ಟಿ ವಂಚನೆ ಎಸಗಿದ ಆರೋಪ ಹೊತ್ತಿದೆ. ಈ ಸಂಬಂಧ ಕರ್ನಾಟಕದ ಜಿಎಸ್‌ಟಿ ವಿಭಾಗದಿಂದ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಈ ಪ್ರಕರಣವನ್ನು ಕೇಂದ್ರ ಮಟ್ಟದ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾ ಲಯಕ್ಕೆ (ಡಿಜಿಜಿಐ) ವರ್ಗಾಯಿಸಲಾಗಿತ್ತು.

ಕೇಂದ್ರ ಸರ್ಕಾರವು ತೆರಿಗೆ ರಿಯಾಯಿತಿ ಸೌಲಭ್ಯ ನೀಡುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಸರ್ಕಾರದ ಈ ಕ್ರಮ ಕುರಿತು ಉದ್ಯಮದಿಂದ ವಿರೋಧ ವ್ಯಕ್ತವಾಗಿತ್ತು.
ಸರ್ಕಾರದ ನಿರ್ಧಾರವನ್ನು 'ಅತಿರೇಕ' ಹಾಗೂ 'ತೆರಿಗೆ ಭಯೋತ್ಪಾದನೆಗೆ ಉದಾಹರಣೆ' ಎಂದು ಇನ್ಫೊಸಿಸ್‌ನ ಆಡಳಿತ ಮಂಡಳಿ ಸದಸ್ಯ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಮೋಹನದಾಸ್ ಪೈ ಹೇಳಿದ್ದರು. ಕಂಪನಿಯ ಹಣಕಾಸು ವಿಭಾಗದ ಉಪಾಧ್ಯಕ್ಷ ಸುನಿಲ್ ಕುಮಾರ್ ಧಾರೇಶ್ವರ್ ಅವರು ಕಳೆದ ವಾರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇನ್ಫೊಸಿಸ್‌ನ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ತಂತ್ರಾಂಶ ಮತ್ತು ಸೇವಾ ವಲಯದ ರಾಷ್ಟ್ರೀಯ ಒಕ್ಕೂಟವು ಒತ್ತಾಯಿಸಿತ್ತು. ಜತೆಗೆ, ಇಂಥ ನೋಟಿಸ್‌ಗಳು ಉದ್ಯಮದಲ್ಲಿ ಅಸ್ಥಿರತೆ ಸೃಷ್ಟಿಸಬಾರದು ಹಾಗೂ ಭಾರತದ ಉದ್ಯಮ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಿರಬಾರದು ಎಂದಿತ್ತು.
ಯಾವುದೆ ಪ್ರತಿಕ್ರಿಯೆ ಬಂದಿಲ್ಲ:
ಆದರೆ ಈ ಬಗ್ಗೆ ಯಾವುದೆ ಸ್ಪಷ್ಟ ನಿರ್ಧಾರವನ್ನು ಇಲ್ಲಿಯವರೆಗೆ ತೆಗೆದುಕೊಂಡಿಲ್ಲ ಎಂದು ಮೂಲಗಳು ಹೇಳಿವೆ. . ಭಾರತದ ಹಣಕಾಸು ಸಚಿವಾಲಯ ಮತ್ತು ಇನ್ಫೋಸಿಸ್ ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
ಯಾವಾಗ ತೀರ್ಮಾನ?
ಈ ಸಂಬಂಧ ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆ ಯಲ್ಲಿ ಜಿಎಸ್‌ಟಿ ಸಮಿತಿಯ ಸಭೆ ನಡೆದಿದ್ದು, ಇದರ ತೀರ್ಮಾನವನ್ನು ಅಧಿಕೃತವಾಗಿ ಸೆಪ್ಟೆಂಬರ್ 9ರಂದು ಘೋಷಿಸುವ ಸಾಧ್ಯತೆ ಇದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ತೆರಿಗೆ ವಿವಾದ ಬಗೆಹರಿಸುವ ಕ್ರಮ:
ಒಟ್ಟಿನಲ್ಲಿ ಇನ್ಫೋಸಿಸ್ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಇರುವ ತೆರಿಗೆ ವಿವಾದಗಳನ್ನು ಬಗೆಹರಿಸುವ ಮಾರ್ಗೋಪಾಯಗಳ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸಿರುವುದು ಪಕ್ಕಾ ಆಗಿದೆ.
ಪಾಠ ಮಾಡಿದ್ದ ನಿರ್ಮಲಾ
ತೆರಿಗೆ ಬೇಡಿಕೆ ಹೆಚ್ಚಳ ಮಾಡಿದರೆ ಹೆಚ್ಚಿನ ಕಂಪನಿಗಳು ಭಾರತ ಬಿಟ್ಟು ಬೇರೆ ಕಡೆರ ಹೂಡಿಕೆ ದಾರಿ ಹುಡುಕಬಹುದು ಎನ್ನುವ ಮಾತು ಕೇಳಿಬಂದಿದೆ. ತೆರಿಗೆ ಸಂಬಂಧಿ ವಿವಾದಗಳು ಉಂಟಾದಾಗ ಸೌಮ್ಯವಾಗಿ ವರ್ತಿಸಬೇಕು, ಕಠಿಣೋಕ್ತಿಗಳನ್ನು ಬಳಸಬಾರದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಅಧಿಕಾರಿಗಳಿಗೆ ಪಾಠ ಮಾಡಿದ್ದರು. ತೆರಿಗೆ ಸಂಗ್ರಹಣೆ ಬಗ್ಗೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕು ಎಂದು ತಿಳಿಸಿದ್ದರು..
ತೀರ್ಮಾನ ಬದಲಾಯಿಸಿದ್ದ ಮೋದಿ ಸರ್ಕಾರ
ವಿರೋಧ ಕೇಳಿಬಂದಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಆಸ್ತಿ ತೆರಿಗೆಗೆ ಸಂಬಂಧಿಸಿದ ಹೊಸ ನಿಯಮಗಳಿಂದಲೂ ಹಿಂದೆ ಸರಿದಿತ್ತು.


Click it and Unblock the Notifications