ಬೆಂಗಳೂರು: ಬೆಂಗಳೂರು (Bengaluru) ನಗರದಲ್ಲಿ ಇತ್ತೀಚೆಗೆ ಕಸ ವಿಲೇವಾರಿ ಸಂಬಂಧಿಸಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಈ ಪರಿಣಾಮ ಮಿಟ್ಟಗಾನಹಳ್ಳಿ-ಕಣ್ಣೂರು-ಬೆಳ್ಳಹಳ್ಳಿ ಮತ್ತು ದೊಡ್ಡಬಳ್ಳಾಪುರ ಸಮೀಪದ ಎಂಎಸ್‌ಜಿಪಿ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ತಕ್ಷಣ ಪರಿಹಾರ ಒದಗಿಸಿ ರಾಜ್ಯ ಸರ್ಕಾರ, ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಯಶಸ್ವಿಯಾಯ್ತು. ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಈಗಿರುವ ತ್ಯಾಜ್ಯ ಸಂಸ್ಕರಣಾ ತಾಣಗಳು ಭರ್ತಿಯಾಗಿದ್ದು, ಸಾರ್ವಜನಿಕರ ಒತ್ತಡವೂ ಹೆಚ್ಚುತ್ತಿರುವ ಕಾರಣ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ತ್ಯಾಜ್ಯ ವಿಲೇವಾರಿಗಾಗಿ ಬೆಂಗಳೂರಿನ 40 ಕಿ.ಮೀ. ವ್ಯಾಪ್ತಿಯಲ್ಲಿ 100 ಎಕರೆ ಭೂಮಿಯನ್ನು ಸರ್ಕಾರ ಚಿಂತಿಸಿದೆ ಎಂದು ಹೇಳಿದ್ದಾರೆ. ಇದು ಬೆಂಗಳೂರು ನಗರದಲ್ಲಿ ಸದ್ಯ ಎದುರಾಗುತ್ತಿರುವ ತ್ಯಾಜ್ಯ ನಿರ್ವಹಣೆಯ ಬಿಕ್ಕಟ್ಟನ್ನು ತಪ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು..
ಸರ್ಕಾರವು ಸೂಕ್ತ ಭೂಮಿಯನ್ನು ನೇರವಾಗಿ ಖರೀದಿಸಲಿದ್ದು, 2013ರ ಭೂಸ್ವಾಧೀನ ಕಾಯ್ದೆಯಡಿ ನಗದು ಪರಿಹಾರ ನೀಡಲಿದೆ ಎಂದು ಹೇಳಲಾಗಿದೆ.
ಕೋಲಾರ, ನೆಲಮಂಗಲ, ಕನಕಪುರ, ಮಾಗಡಿ ಮತ್ತು ತುಮಕೂರು ರಸ್ತೆಗಳ ಉದ್ದಕ್ಕೂ, ಬೆಟ್ಟಗುಡ್ಡ ಅಥವಾ ಅರಣ್ಯ ಪ್ರದೇಶಗಳ ಸಮೀಪದ, ಕಡಿಮೆ ಪರಿಸರ ಕಾಳಜಿ ಇರುವ ಜಾಗಗಳು ಸೂಕ್ತವೆಂದು ಇಲ್ಲಿ ಹೇಳಿದರು. ಇನ್ನು ಭೂಮಾಲೀಕರ ಒಪ್ಪಿಗೆಯೊಂದಿಗೆ, ತ್ಯಾಜ್ಯ ಸಾಗಣೆಗೆ ಅಗತ್ಯ ರಸ್ತೆಗಳನ್ನು ಸರ್ಕಾರ ಅಭಿವೃದ್ಧಿಪಡಿಸಲಿದೆ ಎಂದು ಉಪಮುಖ್ಯಮಂತ್ರಿ ಭರವಸೆ ನೀಡಿದರು.
ರೈತರು ಮತ್ತು ಜನರು ತಮ್ಮ ಭೂ ಪ್ರಸ್ತಾವನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಸಲ್ಲಿಸಬಹುದು. ಪ್ರಾಧಿಕಾರವು ಈ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡಲಿದೆ. ಅಲ್ಲದೇ "ಪ್ರಸ್ತಾವನೆಗಳನ್ನು ಪ್ರಕ್ರಿಯೆಗೊಳಿಸಲು ಶೀಘ್ರದಲ್ಲೇ GBA ಸಭೆ ಕರೆಯಲಾಗುವುದು," ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ಅಭಿವೃದ್ಧಿಗೆ ಮಹತ್ವದ ನಿರ್ಧಾರ
ಬೆಂಗಳೂರು ಅಭಿವೃದ್ಧಿಗಾಗಿ ಈಗಾಗಲೇ ಜಿಬಿಎ, ರಾಜ್ಯ ಸರ್ಕಾರ ನಿರಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ಸುತ್ತಮುತ್ತ 40 ಕಿ.ಮೀ ಓಳಗೆ ಪರಿಸರ, ಗುಡ್ಡಗಳ ಪಕ್ಕದಲ್ಲೇ ಜಾಗ ಕೊಟ್ಟರೆ ಸರ್ಕಾರ 100 ಎಕರೆಯಷ್ಟು ಭೂಮಿಯನ್ನು ಖರೀದಿ ಮಾಡಲಿದೆ ಎಂದು ಹೇಳಿದರು. ಅಲ್ಲದೇ ರಸ್ತೆ ಕಾಮಗಾರಿಗಳ ಬಗ್ಗೆ ಮಾತನಾಡಿದ ಡಿಕೆಶಿ, "ಈಗಾಗಲೇ ಜಿಬಿಎ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು, ಬೆಂಗಳೂರು ನಗರದಲ್ಲಿ 5065 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ಈ ಕಾಮಗಾರಿಗಳನ್ನು ಏಪ್ರಿಲ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ" ಎಂದು ಹೇಳಿದರು.
ಈಗಾಗಲೇ ಬೆಂಗಳೂರಿನಲ್ಲಿರುವ ಕಸ ಸಂಸ್ಕರಣಾ ತಾಣಗಳು ಸಾಮರ್ಥ್ಯ ಮೀರಿ ತುಂಬಿಹೋಗಿದೆ. ಆದ್ದರಿಂದ ಹೊಸ ಘಟಕ ಅಗತ್ಯವಾಗಿರುವುದರಿಂದ ಈ ನಿರ್ಧಾರಕ್ಕೆ ಸರ್ಕಾರ ಮುಂದಾಗಿದೆ. ಕೆಲವು ದಿನಗಳ ಹಿಂದಷ್ಟೇ ಬೆಲ್ಲಹಳ್ಳಿ, ಮಿಟ್ಟಗನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಸ ವಿಲೇವಾರಿ ಸಂಬಂಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಕೂಡಾ 550 ಕೋಟಿ ಮೂಲಸೌಕರ್ಯ ಪ್ಯಾಕೇಜ್ ಘೋಷಿಸಿ ಸಮಸ್ಯೆಗೆ ತಾತ್ಕಾಲಿ ಪರಿಹಾರ ನೀಡಿತ್ತು. ಆದ್ರೆ ಇದೀಗ ದೀರ್ಘಾವಧಿಯ ಪರಿಹಾರಕ್ಕಾಗಿ ಸರ್ಕಾರ ಹೊಸ ಭೂಮಿ ಖರೀದಿಸಲು ಮುಂದಾಗಿದೆ.


Click it and Unblock the Notifications