ಆಹಾರ ಹಣದುಬ್ಬರ ಏರಿಕೆಯ ಮಧ್ಯೆ, ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಕ್ಕಿಯ ಮೀಸಲು ಬೆಲೆಯನ್ನು ಕೆಜಿಗೆ 2 ರೂಪಾಯಿ ಇಳಿಸಲು ನಿರ್ಧರಿಸಿದೆ. ಇದರಿಂದಾಗಿ ಅಕ್ಕಿ ಮೀಸಲು ಬೆಲೆ 29 ರೂಪಾಯಿ ಆಗಿದೆ. ಗೋಧಿಯ ಮೀಸಲು ಬೆಲೆ ಬದಲಾಗದೆ ಉಳಿದಿದೆ.
"ಈ ಕ್ರಮವು ಆಹಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ," ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.

ಇನ್ನು ಗ್ರಾಹಕ ವ್ಯವಹಾರಗಳ ಇಲಾಖೆಯು ನಿರ್ವಹಿಸುವ ಬೆಲೆ ಸ್ಥಿರೀಕರಣ ನಿಧಿಯಿಂದ ಮೀಸಲು ಬೆಲೆಯಲ್ಲಿನ ಕಡಿತದ ವೆಚ್ಚವನ್ನು ಭರಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಸರ್ಕಾರವು ಇ-ಹರಾಜಿನ ಮೂಲಕ ಹೆಚ್ಚುವರಿ ಗೋಧಿ ಮತ್ತು ಅಕ್ಕಿಯನ್ನು ಹಂತ ಹಂತವಾಗಿ ಮಾರಾಟ ಮಾಡುತ್ತದೆ. ಭಾರತೀಯ ಆಹಾರ ನಿಗಮ (FCI) ಇಂತಹ ಇ-ಹರಾಜುಗಳನ್ನು ನಡೆಸುತ್ತದೆ.
ಈ ಹಿಂದೆ 15 ಲಕ್ಷ ಟನ್ ಗೋಧಿ ಮತ್ತು 5 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಇದನ್ನು ಏರಿಕೆ ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಎಫ್‌ಸಿಐ ಇ-ಹರಾಜು ಮೂಲಕ 8 ಲಕ್ಷ ಟನ್ ಗೋಧಿ ಮತ್ತು 1,900 ಟನ್ ಅಕ್ಕಿಯನ್ನು ಮಾರಾಟ ಮಾಡಿದೆ. ಇತ್ತೀಚಿನ ಹರಾಜಿನಲ್ಲಿ ಬಿಡ್‌ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ ಅಕ್ಕಿಯ ಮೀಸಲು ಬೆಲೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ರೈತರಿಗೆ ಸಹಾಯವಾಗುವ ಭರವಸೆ
ಇನ್ನು ತಾಜಾ ಮಾರುಕಟ್ಟೆ ಮಧ್ಯಪ್ರವೇಶದ ನಂತರವೂ 87 ಲಕ್ಷ ಟನ್ ಗೋಧಿ ಮತ್ತು 270 ಲಕ್ಷ ಟನ್ ಅಕ್ಕಿ ಕೇಂದ್ರದಲ್ಲಿ ಲಭ್ಯವಿರುತ್ತದೆ. ಇದು ಪಿಡಿಎಸ್ ಮತ್ತು ಇತರ ಯೋಜನೆಗಳ ಅವಶ್ಯಕತೆಗಳಿಗೆ ಹೆಚ್ಚುವರಿಯಾಗಿದೆ ಎಂದು ಎಫ್‌ಸಿಐ ಅಧ್ಯಕ್ಷ ಅಶೋಕ್ ಮೀನಾ ಹೇಳುತ್ತಾರೆ. ಹಾಗೆಯೇ ತನ್ನ ದಾಸ್ತಾನುಗಳಿಂದ ಹೆಚ್ಚುವರಿ ಗೋಧಿ ಮತ್ತು ಅಕ್ಕಿಯನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರವು ಮಾರುಕಟ್ಟೆಗೆ ದಾಸ್ತಾನು ಮಾರಾಟ ಮಾಡಲು ಕಾಯುತ್ತಿರುವ ಕೆಲವು ದೊಡ್ಡ ರೈತರುಗಳಿಗೆ ಸಹಾಯಕವಾಗಲಿದೆ ಎಂದು ಚೋಪ್ರಾ ಭರವಸೆ ವ್ಯಕ್ತಪಡಿಸಿದರು.
ಗೋಧಿ, ಅಕ್ಕಿ ಬೆಲೆ ಎಷ್ಟು ಏರಿಕೆ
ಆಗಸ್ಟ್ 7, 2023 ರಂತೆ, ಒಂದು ವರ್ಷದಲ್ಲಿ, ಗೋಧಿ ಬೆಲೆಯು ರಿಟೇಲ್ ಮಾರುಕಟ್ಟೆಯಲ್ಲಿ ಶೇಕಡ 6.77 ರಷ್ಟು ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡ 7.37 ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಅಕ್ಕಿಯ ಬೆಲೆಯು ರಿಟೇಲ್ ಮಾರುಕಟ್ಟೆಯಲ್ಲಿ ಶೇಕಡ 10.63 ರಷ್ಟು ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇಕಡ 11.12 ರಷ್ಟು ಏರಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಂಕಿಅಂಶಗಳು ಹೇಳುತ್ತದೆ.
ಜುಲೈನಲ್ಲಿ, ಸಿಪಿಐ-ಆಧಾರಿತ ರಿಟೇಲ್ ಹಣದುಬ್ಬರವು ಐದು ತಿಂಗಳಲ್ಲಿ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹಿಷ್ಣು ಮಟ್ಟವಾದ ಶೇಕಡ 6ಕ್ಕಿಂತ ಅಧಿಕವಾಗಿರುವ ಅಂದಾಜು ಮಾಡಲಾಗಿದೆ. ಜುಲೈ ಸಿಪಿಐ ಡೇಟಾವನ್ನು ಆಗಸ್ಟ್ 14 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ.


Click it and Unblock the Notifications