ಬೆಂಗಳೂರು, ಜುಲೈ 21: ಬೆಂಗಳೂರು ಮಹಾನಗರ, ಮೆಟ್ರೋ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ರಾಜಧಾನಿಯನ್ನು ಬೆಂಗಳೂರನ್ನು ಕರೆಯುತ್ತೇವೆ. ಕರ್ನಾಟಕ ಸರ್ಕಾರ ಬೆಂಗಳೂರನ್ನು ಈಗ ಗ್ರೇಟರ್ ಬೆಂಗಳೂರು ಮಾಡುವತ್ತವೂ ಚಿಂತನೆ ನಡೆಸಿದೆ. ಆದರೆ ತೆರಿಗೆ ವಿಚಾರಕ್ಕೆ ಬಂದರೆ, ಮನೆ ಬಾಡಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿ ಬೆಂಗಳೂರಿಗೆ ಇನ್ನು ಮೆಟ್ರೋ ಸಿಟಿ ಮಾನ್ಯತೆ ಸಿಕ್ಕಿಲ್ಲ.
ದೇಶದಲ್ಲಿ ದೆಹಲಿ ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಾತ್ರ ಮೆಟ್ರೋ ಸಿಟಿ ಮಾನ್ಯತೆಗೆ ಒಳಪಟ್ಟಿವೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಹೆಚ್ಚಾಗಿದೆ, ಜೀವನ ನಿರ್ವಹಣೆ ದುಬಾರಿ ಎಂದೆಲ್ಲಾ ಕೇಳಿಕೊಂಡೇ ಬಂದಿದ್ದೇವೆ. ಆದರೆ ಮೆಟ್ರೋ ಸಿಟಿಯ ಮಾನ್ಯತೆ ಸಿಕ್ಕಿಲ್ಲ. ಮೆಟ್ರೋ ಸಿಟಿಯ ಮಾನ್ಯತೆ ಸಿಕ್ಕರೆ ಬೆಸಿಕ್ ಸ್ಯಾಲರಿಯಲ್ಲಿ ಶೇ. 50 ರಷ್ಟು ಹೋಂ ರೆಂಟ್ ಅಲೋವೆನ್ಸ್ ಪಡೆದುಕೊಳ್ಳಬಹುದು. ನಾನ್ ಮೆಟ್ರೋ ಸಿಟಿಯಾದರೆ ಶೇ. 40 ರಷ್ಟನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಿದೆ. ಈಗ ಬೆಂಗಳೂರಿನಲ್ಲಿ ಬಾಡಿಗೆ ಮನೆ ವಾಸದಲ್ಲಿ ಇದ್ದವರು ಶೇ. 40 ರಷ್ಟನ್ನು ಮಾತ್ರ ಪಡೆದುಕೊಳ್ಳುತ್ತಿದ್ದಾರೆ.

ಮೆಟ್ರೋ ಸಿಟಿಯ ಮಾನ್ಯತೆ ಸಿಗುವತ್ತ ಬಜೆಟ್ ನಲ್ಲಿ ಏನಾದರೂ ಘೋಷಣೆಯಾಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ರಾಜ್ಯಸಭೆ ಸದ್ಯರಾಗಿದ್ದು ಕರ್ನಾಟಕವನ್ನೇ ಪ್ರತಿನಿಧಿಸುತ್ತಿದ್ದಾರೆ. ಬೆಂಗಳೂರಿನಿಂದಲೂ ಆಡಳಿತ ಪಕ್ಷದ ಸದಸ್ಯರಿದ್ದು ಈ ಬಾರಿಯ ಬಜೆಟ್ ನಲ್ಲಿ ಮೆಟ್ರೋ ಸಿಟಿಯ ಲಾಭ ಸಿಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-2025ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜುಲೈ 23ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಹೊಸ ತೆರಿಗೆ ಸ್ಲ್ಯಾಬ್‌ಅನ್ನು ಪರಿಚಯಿಸುವ ಸಾಧ್ಯತೆ ಇದೆ. ಇದರ ಜತೆಗೆ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನೂ ಏರಿಕೆ ಮಾಡುವ ನಿರೀಕ್ಷೆ ಇದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಸಂಬಳದಾರರು ಹೂಡಿಕೆ ಹಾಗೂ ವೆಚ್ಚಗಳ ಮೇಲೆ ವಾರ್ಷಿಕವಾಗಿ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಗೃಹ ಸಾಲದ ಅಸಲು, ಬಡ್ಡಿ, ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತ, ಪಿಪಿಎಫ್ ಹೂಡಿಕೆ ಸೇರಿ ಹಲವು ರೀತಿಯ ಹೂಡಿಕೆಗಳು ಹಾಗೂ ವೆಚ್ಚಗಳ ಮೂಲಕ 1.5 ಲಕ್ಷರೂ.ಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರವು 1.5 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು ಇದರಿಂದ ಮಧ್ಯಮ ವರ್ಗಕ್ಕೆ ಭಾರೀ ಅನುಕೂಲವಾಗಲಿದೆ.
ನಿರ್ಮಲಾ ದಾಖಲೆ:
ಈ ಬಜೆಟ್ ಮಂಡನೆ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಆರು ಸಾರಿ ಬಜೆಟ್ ಮಂಡಿಸಿದ್ದು ಆ ದಾಖಲೆಯನ್ನು ಇದೀಗ ನಿರ್ಮಲಾ ಮುರಿಯಲಿದ್ದಾರೆ.


Click it and Unblock the Notifications