ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರದ ಮಸೂದೆಗಳಿಗೆ ತಡೆ ಹಿಡಿಯುತ್ತಿದ್ದಾರೆ. ಇತ್ತೀಚೆಗೆ ಕೆಲವು ಪ್ರಮುಖ ಕಾರಣಗಳಿಂದ ಗ್ರೇಟರ್ ಬೆಂಗಳೂರು ಮಸೂದೆಯನ್ನು ತಡೆ ಹಿಡಿದಿದ್ದರು. ಇದೀಗ ಖನಿಜ ತೆರಿಗೆ ಮಸೂದೆಗೂ ತಡೆ ನೀಡಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ.

ಹೌದು, ಖನಿಜ ತೆರಿಗೆ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಡೆ ನೀಡಿದ ಕಾರಣ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ಹೀಗೆ ತಡೆ ಹಿಡಿಯಲು ಕಾರಣ, ಕೆಲವು ಪ್ರಮುಖ ಕಾಯ್ದೆಗಳಿಗೆ ಈ ಮಸೂದೆ ವಿರೋಧವಾಗಿರಬಹುದು ಎಂದು ಅವರ ಅಭಿಪ್ರಾಯವಾಗಿದೆ. ಅಂದರೆ ಕರ್ನಾಟಕ ಸರ್ಕಾರವು ಖನಿಜಗಳ ಮೇಲೆ ಹೊಸ ತೆರಿಗೆ ವಿಧಿಸುವ ಮಸೂದೆ ಮಂಡಿಸಿತ್ತು. ಈ ಮೂಲಕ ರಾಜ್ಯ ಸರ್ಕಾರಕ್ಕೆ 4,208 ಕೋಟಿ ರೂ. ಆದಾಯ ಪಡೆಯುವ ನಿರೀಕ್ಷೆಯಿತ್ತು. ಆದರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಮಸೂದೆಯನ್ನು ತಕ್ಷಣ ಅನುಮೋದಿಸದೆ, ರಾಷ್ಟ್ರಪತಿಗಳಿಗೆ ಪರಿಶೀಲನೆಗಾಗಿ ಕಳುಹಿಸಿದ್ದಾರೆ. ಇದರಿಂದ, ಹೊಸ ತೆರಿಗೆಯನ್ನು ಜಾರಿಗೆ ತರುವ ಸರ್ಕಾರದ ಯೋಜನೆ ವಿಳಂಬಗೊಳ್ಳಲಿದೆ.
ಇನ್ನು ಈ ಮಸೂದೆ ಕೇಂದ್ರದ ಕಾನೂನುಗಳೊಡನೆ ಸಂಘರ್ಷ ಉಂಟು ಮಾಡುತ್ತದೆ ಎಂಬುದಾಗಿದೆ. ಅಂದರೆ ರಾಜ್ಯಪಾಲರು ಈ ಮಸೂದೆ ಕೇಂದ್ರ ಸರ್ಕಾರದ ಗಣಿ ಮತ್ತು ಖನಿಜಗಳ ಕಾಯ್ದೆ, 1957 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ, 1980 ಗೆ ವಿರುದ್ಧವಾಗಬಹುದು ಎಂಬ ಕಾರಣವನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಮಸೂದೆ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳ ಮೇಲೆ ತೆರಿಗೆ ವಿಧಿಸುವ ಬಗ್ಗೆ ಪ್ರಸ್ತಾಪಿಸುತ್ತಿದೆ. ಆದರೆ, ಅರಣ್ಯ ಭೂಮಿಗಳ ಬಳಕೆಯನ್ನು 1980ರ ಅರಣ್ಯ ಕಾಯ್ದೆ ನಿಯಂತ್ರಿಸುತ್ತದೆ ಎಂಬುದಾಗಿದೆ.
ಹೀಗಾಗಿ ಈ ಮಸೂದೆಗೆ ಅನುಮತಿ ನೀಡಬೇಕೆಂದರೆ ಕೇಂದ್ರ ಸರ್ಕಾರದ ಒಪ್ಪಿಗೆ ಮುಖ್ಯ ಎನ್ನಲಾಗಿದೆ. ಹೀಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಂಸತ್ತಿನ ಅನುಮೋದನೆ ಇಲ್ಲದೆ ಈ ಮಾದರಿಯ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದಿದ್ದಾರೆ.
ಆದರೆ ರಾಜ್ಯ ಸರ್ಕಾರದ ವಾದವೇ ಬೇರೆಯಾಗಿದೆ. ಜುಲೈ 2024ರಲ್ಲಿ ಸುಪ್ರೀಂ ಕೋರ್ಟ್ ರಾಜ್ಯಗಳು ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸಬಹುದು ಎಂದು ತೀರ್ಮಾನಿಸಿತು. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ಮಸೂದೆ ಮಂಡನೆಯಾಗಿದೆ ಎಂಬುದಾಗಿದೆ. ಮತ್ತೊಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ 2005 ರಿಂದ ತೆರಿಗೆ ವಿಧಿಸಲು ರಾಜ್ಯಗಳಿಗೆ ಹಕ್ಕಿದೆ ಎಂದು ತಿಳಿಸಿತು ಎಂದು ಇವರ ವಾದವಾಗಿದೆ.
ಅಲ್ಲದೇ ಇದರಲ್ಲಿ ಕೇಂದ್ರದ ಕಾನೂನು ಉಲ್ಲಂಘನೆಯೂ ಇಲ್ಲ. ಅಂದರೆ ರಾಜ್ಯ ಸರ್ಕಾರದ ಪ್ರಕಾರ ಈ ತೆರಿಗೆ ಕೇಂದ್ರದ ಗಣಿ ಮತ್ತು ಖನಿಜಗಳ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂಬುದಾಗಿದೆ. ಹಾಗೆಯೇ ರಾಜ್ಯಪಾಲರು ಮಸೂದೆಯನ್ನು ತಕ್ಷಣ ಅನುಮೋದಿಸದೆ ರಾಷ್ಟ್ರಪತಿಗಳಿಗೆ ಕಳುಹಿಸಿರುವುದು ರಾಜ್ಯ ಸರ್ಕಾರಕ್ಕೆ ಆಘಾತವಾಗಿದೆ. ಸರ್ಕಾರ ಇದನ್ನು ಸಾಂವಿಧಾನಿಕ ವಿಳಂಬ ಮತ್ತು ರಾಜಕೀಯ ಅಡೆತಡೆ ಎಂದು ವಾದಿಸುತ್ತಿದೆ.
ಇನ್ನು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ತಡೆ ನೀಡಿದ್ದೇಕೆ ಎಂಬುದನ್ನು ಈಗಾಗಲೇ ತಿಳಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯನ್ನು ಏಳು ಪುರಸಭೆಗಳಾಗಿ ವಿಭಜಿಸುವ ಯೋಚನೆ ಇದಾಗಿದೆ.ಈ ಪುರಸಭೆಗಳ ಪ್ರತ್ಯೇಕ ಆಡಳಿತದಿಂದ ನಗರದ ಅಭಿವೃದ್ಧಿ ಚುರುಕಾಗುತ್ತದೆ ಎಂದು ಸರ್ಕಾರ ಯೋಚಿಸಿತ್ತು. ಆದರೆ ರಾಜ್ಯಪಾಲರು ದೆಹಲಿಯಲ್ಲಿ ನಡೆದ ಈ ರೀತಿಯ ಪ್ರಯೋಗ ವಿಫಲವಾದುದನ್ನು ಉಲ್ಲೇಖಿಸಿ, ಈ ಯೋಜನೆಯಿಂದ ಬೆಂಗಳೂರಿಗೆ ಹಾನಿಯಾಗಬಹುದು ಎಂದು ಮಸೂದೆಗೆ ಅನುಮತಿಸದೆ ಸರ್ಕಾರಕ್ಕೆ ಹಿಂತಿರುಗಿಸಿದರು.
ಅಲ್ಲದೇ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ, ನಾಗರಿಕ ಗುಂಪುಗಳು ಮತ್ತು ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಹೆಚ್ಚಿನ ಚರ್ಚೆ ಅಗತ್ಯವಿದೆ ಎಂದು ಹೇಳಲಾಗಿದೆ. ರಾಜ್ಯಪಾಲರು ಮುಂದುವರೆದ ಮಸೂದೆಗಳಿಗೆ ಅನುಮೋದನೆ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಸರ್ಕಾರ ಮಾಡುತ್ತಿದೆ. ಅಲ್ಲದೇ ರಾಜ್ಯಪಾಲರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ರಾಜ್ಯ ಸರ್ಕಾರದ ಯೋಜನೆಗಳಿಗೆ ತೊಂದರೆ ತರುತ್ತಿವೆ ಎಂದು ಕಾಂಗ್ರೆಸ್ ಸರ್ಕಾರ ವಾದಿಸುತ್ತಿದೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಮತ್ತು ಸಾಂವಿಧಾನಿಕ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆ ಇದೆ.


Click it and Unblock the Notifications